ADVERTISEMENT

ಸೌಲಭ್ಯಕ್ಕಾಗಿ ಸಂಘಟಿತ ಹೋರಾಟ ಅವಶ್ಯ: ಕೆ.ಪಿ.ನಂಜುಂಡಿ

ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 4:21 IST
Last Updated 28 ಜುಲೈ 2025, 4:21 IST
ಹುಬ್ಬಳ್ಳಿಯ ಗೋಕುಲ ರಸ್ತೆಯ ಶಾಂಭವಿ ಮಂಟಪ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು
ಹುಬ್ಬಳ್ಳಿಯ ಗೋಕುಲ ರಸ್ತೆಯ ಶಾಂಭವಿ ಮಂಟಪ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು   

ಹುಬ್ಬಳ್ಳಿ: ‘ವಿಶ್ವಕರ್ಮ ಸಮಾಜವನ್ನು ಕೆಲವರು ವೈಯಕ್ತಿಕ ಹಿತಾಸಕ್ತಿಗೆ ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ ಸಂಘಟನೆ ಛಿದ್ರವಾಗಿದೆ. ಸಮಾಜದವರು ಜಾಗೃತರಾಗಿ ಮೂಢನಂಬಿಕೆಯಿಂದ ಹೊರಬರದ ಹೊರತು ಅಭಿವೃದ್ಧಿ ಸಾಧ್ಯವಿಲ್ಲ’ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ.ಪಿ.ನಂಜುಂಡಿ ಹೇಳಿದರು.

ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಧಾರವಾಡ ಜಿಲ್ಲಾ ಘಟಕದ ವತಿಯಿಂದ ನಗರದ ಗೋಕುಲ ರಸ್ತೆಯ ಶಾಂಭವಿ ಮಂಟಪ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ, ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಂಘಟಿತರಾಗಿ ಹೋರಾಟ ಮಾಡಿದರೆ ಮಾಡಿದರೆ ಮಾತ್ರ ಸಂವಿಧಾನ ನೀಡಿರುವ ಸೌಲಭ್ಯಗಳನ್ನು ಪಡೆಯಲು ಸಾಧ್ಯ. ಕೆಲವರು ಪ್ರತಿಭಾ ಪುರಸ್ಕಾರದ ಹೆಸರಿನಲ್ಲಿ ವಸೂಲಿ ಮಾಡುತ್ತಿರುವುದರಿಂದ ಸಮಾಜದ ಹೆಸರು ಹಾಳಾಗುತ್ತಿದೆ’ ಎಂದರು.

ADVERTISEMENT

‘ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಅರ್ಹರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು. ಅವಿವೇಕಿಗಳನ್ನು ನೇಮಿಸಿದರೆ ಅದು ಸಮಾಜಕ್ಕೆ ಮಾಡುವ ಅವಮಾನ’ ಎಂದು ಹೇಳಿದರು.

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಸದಸ್ಯ ರಾಮಪ್ಪ ಬಡಿಗೇರ ಮಾತನಾಡಿ, ‘ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಒಂದು ತಿಂಗಳಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಯಾವುದೇ ಮಾನದಂಡ ಇಟ್ಟುಕೊಳ್ಳದೆ ಎಸ್‌ಎಸ್‌ಎಲ್‌ಸಿ, ಪಿಯುಸಿ ಉತ್ತೀರ್ಣರಾದ ಸಮಾಜದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಗಿದೆ’ ಎಂದು ತಿಳಿಸಿದರು.

‘ಸಮಾಜದ ಸಂಘಟನೆ, ಮಕ್ಕಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಪ್ರತಿ ಜಿಲ್ಲೆಯಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕಾದ ಅಗತ್ಯ ಇದೆ’ ಎಂದರು.

ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಸಂಘದ ಅಧ್ಯಕ್ಷ ಆರ್‌.ಡಿ.ಕಡ್ಲಿಕೊಪ್ಪ ಮಾತನಾಡಿ, ‘ಸಮಾಜದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೇರಬೇಕು. ಆ ನಿಟ್ಟಿನಲ್ಲಿ ಯುಪಿಎಸ್‌ಸಿ ಸೇರಿದಂತೆ ವಿವಿಧ ಸರ್ಧಾತ್ಮಕ ಪರೀಕ್ಷೆಗಳಿಗಾಗಿ ಉಚಿತವಾಗಿ ತರಬೇತಿ ಕೊಡಿಸಲಾಗುವುದು. ಅಗತ್ಯವಿದ್ದವರಿಗೆ ಶಾಲಾ, ಕಾಲೇಜು ಪ್ರವೇಶ ಶುಲ್ಕ ಭರಿಸಲಾಗುವುದು’ ಎಂದು ಹೇಳಿದರು.

ಸಿಪಿಐ ರಾಜಕುಮಾರ ಪತ್ತಾರ ಮಾತನಾಡಿ, ಸಮಾಜದ ಮಕ್ಕಳು ದುಶ್ಚಟಗಳಿಗೆ ಬಲಿಯಾಗದೆ ಹಿರಿಯರ ಮಾರ್ಗದರ್ಶನದಲ್ಲಿ ನಡೆಯಬೇಕು. ಕೀಳರಿಮೆ ಬಿಡಬೇಕು. ಸಮಾಜದ ಸಂಘಟನೆಗೆ ಎಲ್ಲರೂ ಸಹಕಾರ ನೀಡಬೇಕು ಎಂದರು.

ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಕಾಳಪ್ಪ ಬಡಿಗೇರ, ಮನೋಹರ ಲಕ್ಕುಂಡಿ ಮಾತನಾಡಿದರು.

ಉದ್ಯಮಿ ಶ್ರೀಶೈಲ ಸುತಾರ, ಆನೆಗೊಂದಿ–ಗೊಂದಿಹೊಸಹಳ್ಳಿಯ ಗಣೇಶ್ವರ ಸ್ವಾಮೀಜಿ, ಲೇಬಗಿರಿ ಮದಾನೆಗುಂದಿ ಸಂಸ್ಥಾನ ಸರಸ್ವತಿ ಪೀಠದ ನಾಗಮೂತೇಂದ್ರ ಸ್ವಾಮೀಜಿ, ಅಖಿಲ ಕರ್ನಾಟಕ ವಿಶ್ವಕರ್ಮ ಮಠಾಧೀಶರ ಮತ್ತು ಸ್ವಾಮೀಜಿಗಳ ಸಂಘಟನಾ ವೇದಿಕೆಯ  ಉಪಾಧ್ಯಕ್ಷ ಪ್ರಣವ ನಿರಂಜನ ಶ್ವಾಮೀಜಿ, ಮಂಜುನಾಥ ಬಡಿಗೇರ, ಗಂಗಾಧರ ಬಡಿಗೇರ, ನಾಗಲಿಂಗ ಪತ್ತಾರ, ರವಿಕುಮಾರ ಕಮ್ಮಾರ, ಬಲಭೀಮ ಪೋತದಾರ ಇದ್ದರು.  

‘ಎಸ್‌ಟಿ ಮೀಸಲಾತಿ; ಅಪಪ್ರಚಾರಕ್ಕೆ ಕಿವಿಗೊಡಬೇಡಿ’

‘2ಎ ಮೀಸಲಾತಿಯಲ್ಲಿ 102 ಜಾತಿಗಳಿವೆ. ಈ ಜಾತಿಗಳಿಗೆ ಶೇ 15ರಷ್ಟು ಮೀಸಲಾತಿ ನೀಡಲಾಗಿದೆ. ಪ್ರಬಲ ಜಾತಿಗಳನ್ನು ಎದುರಿಸಿ ವಿಶ್ವಕರ್ಮ ಸಮಾಜದವರಿಗೆಗೆ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಮಾಜಕ್ಕೆ ಪರಿಶಿಷ್ಟ ಪಂಗಡದ ಮೀಸಲಾತಿ ಕಲ್ಪಿಸಬೇಕು’ ಎಂದು ಕೆ.ಪಿ.ನಂಜುಂಡಿ ಆಗ್ರಹಿಸಿದರು. ‘ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದರಿಂದ ನಮ್ಮ ಆಚಾರ ವಿಚಾರ ಸಂಸ್ಕೃತಿ ಬದಲಾಗುವುದಿಲ್ಲ. ಈ ವಿಷಯದಲ್ಲಿ ಕೆಲವರು ಅಪಪ್ರಚಾರ ಮಾಡುತ್ತಿದ್ದು ಅದಕ್ಕೆ ಕಿವಿಗೊಡಬಾರದು’ ಎಂದರು. ‘ಜಾತಿ ಗಣತಿ ಸಂದರ್ಭದಲ್ಲಿ ಜಾತಿ ಕಾಲಂನಲ್ಲಿ ವಿಶ್ವಕರ್ಮ ಎಂದು ಬರೆಸದೆ ಉಪಜಾತಿಗಳ ಹೆಸರು ನಮೂದಿಸಿದರೆ ಮಕ್ಕಳ ಭವಿಷ್ಯಕ್ಕೆ ಕಂಟಕವಾಗುತ್ತದೆ. ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ವಿದ್ಯೆಗೆ ತಕ್ಕ ಉದ್ಯೋಗ ಸಾಮಾಜಿಕ ನ್ಯಾಯ ರಾಜಕೀಯ ಸ್ಥಾನಮಾನ ಸಿಗಬೇಕು’ ಎಂದು ಹೇಳಿದರು.

ವಿಶ್ವಕರ್ಮ ಸಮಾಜಕ್ಕೆ ಎಸ್‌ಟಿ ಮೀಸಲಾತಿ ಕೊಡಿಸುವ ಹೋರಾಟವನ್ನು ದಾರಿತಪ್ಪಿಸುವ ಕೆಲಸ ಆಗುತ್ತಿದೆ. ವದಂತಿಗಳಿಗೆ ಯಾರೂ ಕಿವಿಗೊಡಬಾರದು.
–ದೊಡ್ಡೇಂದ್ರ ಸ್ವಾಮೀಜಿ, ಸುಲೇಪೇಟ ವಿಶ್ವಕರ್ಮ ಏಕದಂಡಗಿ ಮಠ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.