ADVERTISEMENT

ಗೆಲ್ಲುವುದಷ್ಟೇ ಗುರಿಯಲ್ಲ; ಜನರ ಧ್ವನಿಯಾಗಿ–ಎಂ.ಸಿ.ವೇಣುಗೋಪಾಲ್

‘ನವ ಸಂಕಲ್ಪ ಚಿಂತನಾ ಶಿಬಿರ’ದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಎಂ.ಸಿ. ವೇಣುಗೋಪಾಲ್ ಸಲಹೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 6:54 IST
Last Updated 15 ಜೂನ್ 2022, 6:54 IST
ದಾವಣಗೆರೆಯಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಚಿಂತನ ಶಿಬಿರನ್ನು ಕೆಪಿಸಿಸಿ ಉಪಾಧ್ಯಕ್ಷ ಎಂ.ಸಿ. ವೇಣುಗೋಪಾಲ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಕೆಪಿಸಿಸಿ ಮಾಧ್ಯಮ ವಕ್ತಾರ ಡಿ. ಬಸವರಾಜ್, ಮುಖಂಡರಾದ ಬಸವಂತಪ್ಪ, ದಿನೇಶ ಶೆಟ್ಟಿ, ಶಾಸಕ ರಾಮಪ್ಪ ಇದ್ದಾರೆ –ಪ್ರಜಾವಾಣಿ ಚಿತ್ರ
ದಾವಣಗೆರೆಯಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಚಿಂತನ ಶಿಬಿರನ್ನು ಕೆಪಿಸಿಸಿ ಉಪಾಧ್ಯಕ್ಷ ಎಂ.ಸಿ. ವೇಣುಗೋಪಾಲ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಕೆಪಿಸಿಸಿ ಮಾಧ್ಯಮ ವಕ್ತಾರ ಡಿ. ಬಸವರಾಜ್, ಮುಖಂಡರಾದ ಬಸವಂತಪ್ಪ, ದಿನೇಶ ಶೆಟ್ಟಿ, ಶಾಸಕ ರಾಮಪ್ಪ ಇದ್ದಾರೆ –ಪ್ರಜಾವಾಣಿ ಚಿತ್ರ   

ದಾವಣಗೆರೆ: ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸುವುದಷ್ಟೇ ನಮ್ಮ ಗುರಿ. ಚಿಂತನಾ ಶಿಬಿರ ಈ ಚೌಕಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ, ಜಿಲ್ಲೆಯ ವೀಕ್ಷಕ ಎಂ.ಸಿ. ವೇಣುಗೋಪಾಲ್ ಕಾರ್ಯಕರ್ತರಿಗೆ ಸಲಹೆ ನೀಡಿದರು.

ಇಲ್ಲಿನ ಬಾಪೂಜಿ ಎಂಬಿಎ ಕಾಲೇಜಿನಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಮಂಗಳವಾರ ನಡೆದ ‘ನವ ಸಂಕಲ್ಪ ಚಿಂತನಾ ಶಿಬಿರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯವಷ್ಟೇ ಅಲ್ಲ ದೇಶದ ಜನರ ಸ್ಥಿತಿ ಚಿಂತಾಜನಕವಾಗಿದೆ. ಮೋದಿಯವರ ಘೋಷಣೆಗಳು ಕಾರ್ಯರೂಪಕ್ಕೆ ಬಂದಿಲ್ಲ.ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಸರ್ಕಾರ ಯೋಚಿಸುತ್ತಿಲ್ಲ. ಬದಲಾಗಿ ತಂತ್ರಗಾರಿಕೆ ಮಾಡಿ ಚುನಾವಣೆ
ಯಲ್ಲಿ ಗೆಲ್ಲುವುದೊಂದೇ ಅದರ ಉದ್ದೇಶವಾಗಿದೆ. ಜನಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡುವುದು ಚಿಂತನಾ ಶಿಬಿರದ ಉದ್ದೇಶವಾಗಬೇಕು. ಅಧಿಕಾರಕ್ಕೆ ಬರುವುದಕ್ಕಿಂತ ಮುಖ್ಯವಾಗಿ ರಾಜ್ಯದ ಜನತೆಯನ್ನು ರಕ್ಷಣೆ ಮಾಡಬೇಕಾಗಿದೆ’ ಎಂದು ಹೇಳಿದರು.

ADVERTISEMENT

‘ದೇಶಕ್ಕಾಗಿ ಹೋರಾಟ ಮಾಡಿದ ಗಾಂಧೀಜಿ ಈ ದೇಶದ ಪ್ರಧಾನಿಯಾಗಲಿಲ್ಲ. ಸಂವಿಧಾನ ರಚಿಸಿದ ಅಂಬೇಡ್ಕರ್ ಅಧಿಕಾರಕ್ಕಾಗಿ ಆಸೆ ಪಡಲಿಲ್ಲ. ದೇಶದ ಜನ ನೆಮ್ಮದಿಯಿಂದ ಇರಬೇಕು ಎಂಬುದು ಅವರ ಚಿಂತನೆಯಾಗಿತ್ತು. ಆದರೆ ಆ ಚಿಂತನೆ ಆಡಳಿತ ಮಾಡುತ್ತಿರುವ ನಾಯಕರಲ್ಲಿ ಅದು ಕಣ್ಮರೆಯಾಗುತ್ತಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಮಹಾತ್ಮಗಾಂಧೀಜಿಯವರು ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಸ್ವಾತಂತ್ರ್ಯ ತಂದುಕೊಟ್ಟರೋ ಅದೇ ರೀತಿ ದೇಶದ ಜನತೆಯನ್ನು ಉಳಿಸಲು ಕಾಂಗ್ರೆಸ್ ಎರಡನೇ ಸ್ವಾತಂತ್ರ್ಯ ಮಾಡಬೇಕಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕೆಪಿಸಿಸಿ ವಕ್ತಾರ ನಿಕೇತ್‌ರಾಜ್ ಮಾತನಾಡಿ, ‘ಕಾಂಗ್ರೆಸ್ ಹಡಗು ಮುಳುಗಿ ಹೋಯಿತು ಎನ್ನುವ ಮೂರ್ಖ ಮಾತುಗಳನ್ನು ಬಿಜೆಪಿ ಸಾಮಾಜಿಕ ಮಾಧ್ಯಮಗಳ ಮೂಲಕ ಜನಸಾಮಾನ್ಯರಿಗೆ ಬಿತ್ತುತ್ತಿದೆ. ಶಾಸಕರು, ಸಂಸದರು ಹಾಗೂ ರಾಹುಲ್‌ಗಾಂಧಿ ಸೋತಿರಬಹುದು. ಆದರೆ ಚುನಾವಣೆಯ ಸೋಲು ಸಾವಲ್ಲ. ಕಾಂಗ್ರೆಸ್‌ಗೆ ಸೋಲುವುದು ಗೊತ್ತು. ಮೇಲೇಳುವುದು ಗೊತ್ತು. ಕಾಂಗ್ರೆಸ್ ಸೋತರೆ ಸಂವಿಧಾನದ ಆಶಯಗಳು ಸೋಲುತ್ತವೆ ಎಂದು ಜ್ಯೋತಿ ಬಸು ಹೇಳಿದ್ದರು’ ಎಂದು ಎಂದರು.

‘ಬಿಜೆಪಿಯವರು ರಾಜಕೀಯಕ್ಕಾಗಿ ರಾಮನ ಹೇಸರೇಳುತ್ತಿದ್ದಾರೆ. ಆದರೆ ಆ ರಾಮನನ್ನು ಉಸಿರಾಗಿಸಿಕೊಂಡಿದ್ದವರು ಮಹಾತ್ಮಗಾಂಧೀಜಿ, ಚುನಾವಣೆ ಬಂದಾಗ ಬಿಜೆಪಿಯವರು ಜೈಶ್ರೀರಾಮ್, ರಾಮಮಂದಿರದ ಜಪ ಮಾಡುತ್ತಾರೆ. ಆದರೆ ಗಾಂಧೀಜಿಯವರ ಎದೆಗೆ ಗುಂಡು ಬಿದ್ದಾಗ ಹೇ ರಾಮ್, ಅದು ರಾಮಭಕ್ತಿ. ಆ ರಾಮಪ್ರೀತಿ ಕಾಂಗ್ರೆಸ್‌ನಲ್ಲಿ ಇದೆಯೇ ಹೊರತು ಚುನಾವಣೆಯ ರಾಮ ಪ್ರೀತಿಯಲ್ಲ’ ಎಂದು ಟೀಕಿಸುತ್ತಾರೆ.

ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ. ಮಂಜಪ್ಪ ಪ್ರಾಸ್ತಾವಿಕ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಕೆ. ಅಬ್ದುಲ್ ಜಬ್ಬಾರ್, ಶಾಸಕ ಎಸ್. ರಾಮಪ್ಪ, ಮಾಜಿ ಶಾಸಕರಾದ ಕೆ. ಶಿವಮೂರ್ತಿ, ಡಿ.ಜಿ. ಶಾಂತನಗೌಡ, ಎಚ್.ಪಿ. ರಾಜೇಶ್, ಮುಖಂಡರಾದ ಡಿ. ಬಸವರಾಜ್, ಎ. ನಾಗರಾಜ್, ಅನಿತಾಬಾಯಿ, ಕೆ.ಎಸ್. ಬಸವಂತಪ್ಪ, ನಿಖಿಲ್ ಕೊಂಡಜ್ಜಿ, ಜಿ.ಎಸ್. ಮಂಜುನಾಥ್, ಬಿ.ಎಚ್. ವೀರಭದ್ರಪ್ಪ, ಲತಾ ಮಲ್ಲಿಕಾರ್ಜುನ, ನಂಜಾನಾಯ್ಕ, ಅಸಗೋಡು ಜಯಸಿಂಹ ಇದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಸ್ವಾಗತಿಸಿದರು. ಎಸ್. ಮಲ್ಲಿಕಾರ್ಜುನ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.