ADVERTISEMENT

ಆರಗ ಜ್ಞಾನೇಂದ್ರ ಹೇಳಿಕೆ ಖಂಡನೀಯ: ಕೆಪಿಸಿಸಿ ವಕ್ತಾರ ಪಿ.ಎಚ್ ನೀರಲಕೇರಿ

ಕೆಪಿಸಿಸಿ ವಕ್ತಾರ ಪಿ.ಎಚ್‌.ನೀರಲಕೇರಿ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2023, 16:07 IST
Last Updated 4 ಆಗಸ್ಟ್ 2023, 16:07 IST
ಪಿ.ಎಚ್. ನೀರಲಕೇರಿ
ಪಿ.ಎಚ್. ನೀರಲಕೇರಿ   

ಧಾರವಾಡ: ‘ಶಾಸಕ ಆರಗ ಜ್ಞಾನೇಂದ್ರ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅರಣ್ಯ ಸಚಿವ ಈಶ್ವರ ಖಂಡ್ರೆ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ. ಈ ಆರ್.ಎಸ್‌.ಎಸ್‌ ಸಂಸ್ಖೃತಿ ಶೋಭೆ ತರುವಂಥದ್ದಲ್ಲ’ ಎಂದು ಕೆಪಿಸಿಸಿ ವಕ್ತಾರ ಪಿ.ಎಚ್‌.ನೀರಲಕೇರಿ ಕುಟುಕಿದರು.

‘ಖರ್ಗೆ ಬಣ್ಣ ಕಪ್ಪು, ಈಶ್ವರ ಖಂಡ್ರೆ ಅವರಿಗೆ ಪರಿಸರ ಬಗ್ಗೆ ಗೊತ್ತಿಲ್ಲ ಎಂದು ಹೇಳಿಕೆ ನೀಡಿ ಅಪಮಾನ ಮಾಡಿದ್ಧಾರೆ. ಈ ಹೇಳಿಕೆ ಆರ್‌.ಎಸ್‌.ಎಸ್‌ ಪೀಠಿಕೆ, ಜ್ಞಾನೇಂದ್ರ ಮುಖವಾಣಿ ಅಷ್ಟೆ. ಬಿಜೆಪಿ, ಆರ್.ಎಸ್‌.ಎಸ್‌, ಜ್ಞಾನೇಂದ್ರ ಅವರು ಮನು ಸ್ಮೃತಿ ಪಠಣದಲ್ಲಿ ತೊಡಗಿದ್ಧಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.

‘ಮಣಿಪುರ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಆರ್‌.ಎಸ್‌.ಎಸ್‌ ಪ್ರೇರಿತ ಬಿಜೆಪಿ ಸರ್ಕಾರ ದೇಶ ಮುನ್ನಡೆಸಲು ಮತ್ತು ಜನರ ರಕ್ಷಣೆ ಮಾಡಲು ವಿಫಲವಾಗಿದೆ. ಮಣಿಪುರದಲ್ಲಿ ರಾಷ್ಟ್ರಪ್ರತಿ ಆಳ್ವಿಕೆ ಹೇರಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಕರ್ನಾಟಕ ವಿಶ್ವವಿದ್ಯಾಲಯ ಆರ್ಥಿಕ ಸಂಕಷ್ಟದಲ್ಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ ಹೇಳಿದ್ದಾರೆ. ಹಿಂದೆ ನಾಲ್ಕು ವರ್ಷ ಅವರದ್ದೇ ಸರ್ಕಾರ ಇದ್ದಾಗ ಯಾಕೆ ಅವರು ಧ್ವನಿ ಎತ್ತಲ್ಲಿಲ್ಲ’ ಎಂದು ಪ್ರಶ್ನಿಸಿದರು.

‘ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದರಿಂದ ಕೆಲ ತಿಂಗಳ ಹಿಂದೆ ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ ನಿಮ್ಮ ಕಾರ್ಯವನ್ನು ಪರಿಗಣಿಸುತ್ತೆವೆ, ವಕ್ತಾರರಾಗಿ ಮುಂದುವರಿಯಲು ತಿಳಿಸಿದರು’ ಎಂದರು.

‘ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದೇನೆ. ಹೈಕಮಾಂಡ್‌ ಅವಕಾಶ ಕಲ್ಪಿಸಿದರೆ ಕಣಕ್ಕಿಳಿಯುತ್ತೇನೆ’ ಎಂದು ಉತ್ತರಿಸಿದರು.

ಸಿದ್ದಣ್ಣ ಕಂಬಾರ, ವಿ.ಜಿ.ಕೊಂಗವಾಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.