ADVERTISEMENT

ಧಾರವಾಡ | ಕೃಷಿ ಮೇಳ ಸಂಪನ್ನ; 23.74 ಲಕ್ಷ ಜನ ಭೇಟಿ

ರಾಜ್ಯವಲ್ಲದೆ, ಹೊರರಾಜ್ಯದಿಂದಲೂ ಹರಿದುಬಂದಿದ್ದ ಜನಸಾಗರ: ರೈತರಿಗೆ ಭರಪೂರ ಮಾಹಿತಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 5:06 IST
Last Updated 17 ಸೆಪ್ಟೆಂಬರ್ 2025, 5:06 IST
<div class="paragraphs"><p>ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಕೃಷಿ ಮೇಳದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು</p></div>

ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಕೃಷಿ ಮೇಳದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು

   

ಧಾರವಾಡ: ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕೃಷಿ ಮೇಳ ಮಂಗಳವಾರ ಸಂಪನ್ನಗೊಂಡಿತು. ನಾಲ್ಕು ದಿನ ಜರುಗಿದ ಈ ಮೇಳ ವೀಕ್ಷಣೆಗೆ ಜನ ಸಾಗರವೇ ಹರಿದುಬಂದಿತ್ತು.

ಮೇಳದ ಮೊದಲ ದಿನ 3.65 ಲಕ್ಷ, ಎರಡನೇ ದಿನ 7.74 ಲಕ್ಷ, ಮೂರನೇ ದಿನ 8.6 ಲಕ್ಷ ಹಾಗೂ ನಾಲ್ಕನೇ ದಿನ 3.75 ಲಕ್ಷ ಸೇರಿ ಒಟ್ಟು 23.74 ಲಕ್ಷ ಜನರು ಭೇಟಿ ನೀಡಿದ್ದಾರೆ. ಎಐ ಕ್ಯಾಮೆರಾ, ಕ್ಯುಆರ್‌ ಕೋಡ್‌ ಮತ್ತು ಸ್ಥಳ ನೋಂದಣಿ ಆಧರಿಸಿ ಭೇಟಿ ನೀಡಿದವರ ಸಂಖ್ಯೆ ಲೆಕ್ಕ ಹಾಕಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ADVERTISEMENT

ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳವರು ಮೇಳಕ್ಕೆ ಭೇಟಿ ನೀಡಿದ್ದರು. ಮೇಳದಲ್ಲಿ 650ಕ್ಕೂ ಹೆಚ್ಚು ಮಳಿಗೆಗಳು ಇದ್ದವು. ಬಿತ್ತನೆ ಬೀಜ, ಯಂತ್ರೋಪಕರಣ, ಕೃಷಿ ಪರಿಕರಗಳು, ಗೃಹಪಯೋಗಿ ವಸ್ತುಗಳು ಮೊದಲಾದವನ್ನು ಜನರು ಖರೀದಿಸಿದರು.

ಹಲವು ರೈತರು ಬೆಳೆ ಪ್ರಯೋಗ ತಾಕುಗಳಿಗೆ ಭೇಟಿ ನೀಡಿ ವೀಕ್ಷಿಸಿದರು. ಮಿಶ್ರ ಬೆಳೆ ಪದ್ಧತಿ ಸಹಿತ ವಿವಿಧ ಬೆಳೆ ವಿಧಾನಗಳ ಕುರಿತು ಮಾಹಿತಿ ಪಡೆದರು. ತಾಕುಗಳಲ್ಲಿ ಬೆಳೆದಿದ್ದ ಶೇಂಗಾ, ಜೋಳ, ತೊಗರಿ ಮೊದಲಾದ ಬೆಳೆಗಳ ತಳಿಗಳು ಮತ್ತು ವಿವರ ತಿಳಿದುಕೊಂಡರು.

ಒಣ ಬೇಸಾಯ ತಾಂತ್ರಿಕತೆ, ಕೃಷಿ ಯಾಂತ್ರೀಕರಣ, ನೈಸರ್ಗಿಕ ಮತ್ತು ಸಾವಯವ ಕೃಷಿ, ಸಿರಿಧಾನ್ಯಗಳು, ಉಪಕಸುಬುಗಳು (ಜೇನುಸಾಕಣೆ, ತರಕಾರಿ ಬೆಳೆ, ಪಶುಸಂಗೋಪನೆ...) ಮೊದಲಾದವುಗಳು ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು. ರೈತರು ಕೃಷಿ ಯಂತ್ರೋಪಕರಣ ಮಳಿಗೆಗಳಲ್ಲಿ ಪ್ರಾತ್ಯಕ್ಷಿಕೆ ಮೂಲಕ ಯಂತ್ರಗಳ ಕಾರ್ಯ ವಿಧಾನವನ್ನು ತಿಳಿದುಕೊಂಡರು.

ವಿಶೇಷ ತರಬೇತಿಗಳ ಸರಣಿಯಡಿ ಕೊನೆ ದಿನ ಬೆಳಿಗ್ಗೆ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಜಾನುವಾರು ನಿರ್ವಹಣೆಯಲ್ಲಿ ನವೀನ ತಂತ್ರಜ್ಞಾನಗಳು ಎಂಬ ತರಬೇತಿ ನಡೆಯಿತು.

ಪ್ರೊ. ಅನಿಲಕುಮಾರ ಜಿ.ಕೆ ಅವರು ರಸಮೇವು ಮತ್ತು ಒಣ ಹಸಿರು ಮೇವಿನ ಉತ್ಪಾದನೆಯ ನಾವೀನ್ಯತೆಗಳನ್ನು ತಿಳಿಸಿದರು.

ಪ್ರೊ. ಜಯಶ್ರೀ ಪತ್ತಾರ ಅವರು ಎತ್ತರಿಸಿದ ಅಟ್ಟಣಿಗೆಯ ಕೊಟ್ಟಿಗೆ ಪದ್ಧತಿಯಲ್ಲಿ ಸಮಗ್ರ ಕುರಿ, ಮೇಕೆ ಮತ್ತು ಕೋಳಿ ಸಾಕಣೆ ಕುರಿತು ವಿವರ ನೀಡಿದರು. ಪ್ರೊ.ವೆಂಕಣ್ಣ ಬಳಗಾನೂರ ಅವರು ಪಶು ಸಂಗೋಪನೆಯಲ್ಲಿ ಸರ್ಕಾರದ ಸವಲತ್ತುಗಳು ಮತ್ತು ಪ್ರೊ.ಮಹೇಶ ಕಡಗಿ ಮೇವಿನ ಬೆಳೆಗಳು ಮತ್ತು ಜಾನುವಾರುಗಳಿಗೆ ಪೂರಕ ಆಹಾರವಾಗಿ ಅಜೊಲ್ಲಾ ಕುರಿತು ತಿಳಿಸಿದರು.

ಹೈಟೆಕ್‌ ತೋಟಗಾರಿಕಾ ತಂತ್ರಜ್ಞಾನಗಳು ಕುರಿತು ಪ್ರೊ. ಎಂ.ಎಸ್. ಬಿರಾದಾರ ಮಾತನಾಡಿ, ‘ಜಾಗತೀಕರಣ, ಆರ್ಥಿಕ ಉದಾರೀಕರಣ ಮತ್ತು ಖಾಸಗೀಕರಣದ ಪ್ರಭಾವದಿಂದ ತೋಟಗಾರಿಕೆಗೆ ವಿಫುಲ ಅವಕಾಶಗಳಿವೆ. ಆಧುನಿಕ ತೋಟಗಾರಿಕೆಗೆ ಹೆಚ್ಚಿನ ಬೇಡಿಕೆಯಿದೆ. ತೋಟಗಾರಿಕೆಯಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ಒತ್ತು ನೀಡಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.