ADVERTISEMENT

ಧಾರವಾಡ| ಕೃಷಿಮೇಳ ಇಂದಿನಿಂದ: ಸಿಎಂ ಸಿದ್ದರಾಮಯ್ಯ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2023, 5:20 IST
Last Updated 9 ಸೆಪ್ಟೆಂಬರ್ 2023, 5:20 IST
ಕೃಷಿ ಮೇಳ ನಡೆಯುವ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪ್ರವೇಶದ್ವಾರದಲ್ಲಿ ಸ್ವಾಗತ ಫಲಕ ಹಾಕಲಾಗಿದೆ  –ಪ್ರಜಾವಾಣಿ ಚಿತ್ರ
ಕೃಷಿ ಮೇಳ ನಡೆಯುವ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪ್ರವೇಶದ್ವಾರದಲ್ಲಿ ಸ್ವಾಗತ ಫಲಕ ಹಾಕಲಾಗಿದೆ  –ಪ್ರಜಾವಾಣಿ ಚಿತ್ರ   

ಧಾರವಾಡ: ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಮೇಳದ ಸಿದ್ಧತೆ ಪೂರ್ಣಗೊಂಡಿದ್ದು, ಶನಿವಾರದಿಂದ ನಾಲ್ಕು ದಿನ ಮೇಳ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಳದ ಉದ್ಘಾಟನೆ ನೆರವೇರಿಸುವರು.

ವಿಶ್ವವಿದ್ಯಾಲಯ ಆವರಣದ ಮುಖ್ಯವೇದಿಕೆಯಲ್ಲಿ ಬೆಳಿಗ್ಗೆ 11.30ಕ್ಕೆ ಉದ್ಘಾಟನೆ ನೆರವೇರಲಿದೆ. ಕೃಷಿ ಸಚಿವ ಎನ್‌. ಚಲುವರಾಯ ಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಪಾಲ್ಗೊಳ್ಳುವರು. ಶ್ರೇಷ್ಠ ಕೃಷಿಕ, ಕೃಷಿ ಮಹಿಳೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

‘ಸುಸ್ಥಿರ ಕೃಷಿಗಾಗಿ ಸಿರಿಧಾನ್ಯಗಳು’ ಘೋಷವಾಕ್ಯದಲ್ಲಿ ಈ ಬಾರಿ ಮೇಳ ಜರುಗಲಿದೆ. ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಬೆಳಿಗ್ಗೆ 10.30ಕ್ಕೆ ಫಲಪುಷ್ಪ, ಗಡ್ಡೆಗೆಣಸು, ವಿಸ್ಮಯಕಾರಿ ಕೀಟ ಪ್ರಪಂಚ ಪ್ರದರ್ಶನ ಉದ್ಘಾಟನೆ ನೆರವೇರಲಿದೆ. ಮಧ್ಯಾಹ್ನ 2.30ಕ್ಕೆ ಮುಖ್ಯ ವೇದಿಕೆಯಲ್ಲಿ ರೈತರಿಂದ ರೈತರಿಗಾಗಿ ಕಾರ್ಯಕ್ರಮ ನಡೆಯಲಿದೆ.

ADVERTISEMENT

674 ಮಳಿಗೆ ಸಜ್ಜು: ಆವರಣದಲ್ಲಿ ಒಟ್ಟು 674 ವಿವಿಧ ಮಳಿಗೆಗಳನ್ನು ಸಜ್ಜುಗೊಳಿಸಲಾಗಿದೆ. ಕೃಷಿವಸ್ತುಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಜಾನುವಾರು, ಆಹಾರ, ಯಂತ್ರೋಪಕರಣ ಮೊದಲಾದ ಮಳಿಗೆಗಳು ಇರಲಿವೆ. ಕೃಷಿಯಲ್ಲಿ ಡ್ರೋನ್‌ ಬಳಕೆ, ಕೊಯ್ಲು ಯಂತ್ರ, ನೀರಾವರಿ ಉಪಕರಣ ಮೊದಲಾದವು ಇರಲಿವೆ.

ಬೀಜ ಮೇಳ: ಬೀಜ ಮೇಳದಲ್ಲಿ ರೈತರು ಜೋಳ, ಕುಸಬೆ, ಕಡಲೆ ಮೊದಲಾದ ಬಿತ್ತನೆಬೀಜಗಳು, ಜೈವಿಕ ಗೊಬ್ಬರ ಪುಡಿಗಳು ಇರಲಿವೆ. ಇವು ಮಾರಾಟಕ್ಕೆ ಲಭ್ಯ ಇರಲಿವೆ.

ಜವೆ ಗೋಧಿ ಡಿಡಿಕೆ–1063, ಅಗಸೆ ಡಿಎಲ್‌ವಿ–7, ಕುದುರೆ ಮೆಂತೆ (ಲೂರ್ಸನ್‌), ಗುಲಾಬಿ ಅರ್ಕಾ ಐವರಿ ಮತ್ತು ಅರ್ಕಾ ಕಿನ್ನರಿ ಮೊದಲಾದ 24 ತಳಿಗಳನ್ನು ಬಿಡಗಡೆ ಮಾಡಲಾಗುತ್ತದೆ.

ಮೇಳದಲ್ಲಿ ನಾಲ್ಕುದಿನ ವಿವಿಧ ಗೋಷ್ಠಿಗಳಲು ನಡೆಯಲಿದೆ. ಜಲ ಸಾಕ್ಷರತೆ, ನೀರಿನ ಸಂರಕ್ಷಣೆ, ಮಣ್ಣು ರಕ್ಷಣೆ, ಸಿರಿಧಾನ್ಯಗಳ ಉತ್ಪಾದನೆ, ಮೌಲ್ಯವರ್ಧನೆ ಕುರಿತು ಮೊದಲಾದ ವಿಷಯಗಳ ಕುರಿತು ಗೋಷ್ಠಿಗಳು ಜರುಗಲಿವೆ. ಸಾಧಕ ರೈತರು ಯಶೋಗಾಥೆಗಳನ್ನು ಹಂಚಿಕೊಳ್ಳುವರು.

ನಾಡಿನ ವಿವಿಧೆಡಗಳ ಲಕ್ಷಾಂತರ ರೈತರು ಮೇಳದಲ್ಲಿ ಪಾಲ್ಗೊಳ್ಳಲಿದ್ಧಾರೆ. ವಿಶ್ವವಿದ್ಯಾಲಯದ ಆವರಣದಲ್ಲಿ ಮೊಬೈಲ್‌ ಎಟಿಎಂ, ಕ್ಷೇತ್ರ ಪ್ರಾತ್ಯಕ್ಷಿಕೆ ಭೇಟಿಗೆ ವ್ಯವಸ್ಥೆ, ಪೊಲೀಸ್‌ ಸಹಾಯ ಕೇಂದ್ರ ಇತ್ಯಾದಿ ಕಲ್ಪಿಸಲಾಗಿದೆ. ಕೀಡಾಂಗಣದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

10ರಂದು ಬೆಳಿಗ್ಗೆ 10.30ಕ್ಕೆ ಬೀಜ ಮೇಳ ಉದ್ಘಾಟನೆ, 11ರಂದು ಪೌಷ್ಟಿಕತೆ ಮತ್ತು ಆರ್ಥಿಕತೆಗೆ ಸಿರಿಧಾನ್ಯಗಳು ವಿಚಾರ ಸಂಕಿರಣ, 12ರಂದು ಕೊನೆ ದಿನ ಚರ್ಚಾಗೋಷ್ಠಿ ಮಧ್ಯಾಹ್ನ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.

ಕೃಷಿ ಮೇಳದಲ್ಲಿ ಕೃಷಿ ಯಂತ್ರೋಪಕರಣ ಪ್ರದರ್ಶನಕ್ಕೆ ಶುಕ್ರವಾರ ಲಾರಿಯಲ್ಲಿ ಯಂತ್ರಗಳನ್ನು ಕೃಷಿ ವಿಶ್ವವಿದ್ಯಾಲಯ ಆವರಣಕ್ಕೆ ತರಲಾಯಿತು  –ಪ್ರಜಾವಾಣಿ ಚಿತ್ರ

‘ಸುಸ್ಥಿರ ಕೃಷಿಗಾಗಿ ಸಿರಿಧಾನ್ಯಗಳು’ ಶೀರ್ಷಿಕೆಯಡಿ ಮೇಳ ಆಯೋಜನೆ ಕ್ರೀಡಾಂಗಣದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ರೈತರಿಗೆ ಭರಪೂರ ಮಾಹಿತಿ ವ್ಯವಸ್ಥೆ

ನೋಂದಣಿ ಕೇಂದ್ರದಲ್ಲಿ ಕೃಷಿ ಮೇಳದ ಮಾರ್ಗ ನಕ್ಷೆ ಪ್ರತಿ ನೀಡಲಾಗುವುದು. ಮಳಿಗೆ ವೇದಿಕೆ ದಾರಿ ಮಾರ್ಗಸೂಚಿಯಲ್ಲಿ ಇರುತ್ತವೆ
ಎಸ್‌.ಎನ್‌. ಜಾಧವ್‌ ಅಧ್ಯಕ್ಷ ಕೃಷಿ ಮೇಳ ಪ್ರಚಾರ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.