ಕುಂದಗೋಳ: ತಾಲ್ಲೂಕಿನ ಇಂಗಳಗಿ ಗ್ರಾಮದ ಹೊಸಗೇರಿ ಓಣೆಯಲ್ಲಿ ಇರುವ ಹರಣಶಿಕಾರಿ ಹಾಗೂ ಪಾರಧಿ ಸಮುದಾಯದವರಿಗೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ನಿವಾಸಿಗಳು ಇಲ್ಲಿನ ತಹಶೀಲ್ದಾರ್ ಕಚೇರಿ ಆವರಣಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಚನ್ನಮ್ಮ ಹರಣಸಿಕಾರಿ ಮಾತನಾಡಿ, ಮೂರು ತಲೆಮಾರುಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ. ನಮ್ಮ ಓಣಿಯಲ್ಲಿ ಒಳಚರಂಡಿ ಸೇರಿದಂತೆ ಅಗತ್ಯ ಮೂಲಸೌಕರ್ಯಗಳಿಲ್ಲ. ಗ್ರಾಮ ಪಂಚಾಯಿತಿ ಸಿಬ್ಬಂದಿ ಹಕ್ಕುಪತ್ರ ನೀಡದೆ ಅಲೆದಾಡಿಸುತ್ತಿದ್ದಾರೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾದ ಸಂಘಟನಾ ಕಾರ್ಯದರ್ಶಿ ಹನುಮಂತ ಟಿಕೋಳೆ ಮಾತನಾಡಿ, ಇಂಗಳಗಿ ಗ್ರಾಮದ ಸರ್ವೆ ಸಂಖ್ಯೆ 211ರಲ್ಲಿ 3 ಎಕರೆ 14 ಗುಂಟೆ ಜಾಗದಲ್ಲಿ ಈ ಸಮುದಾಯದವರು 90 ವರ್ಷಗಳಿಂದ ವಾಸಿಸುತ್ತಿದ್ದಾರೆ. ಸರ್ವೆ ನಕಾಶೆಯಲ್ಲಿ ಕೆರೆ ಎಂದು ನಮೂದಾಗಿದ್ದು, ಆರ್‌ಟಿಸಿಯಲ್ಲಿ ಜಮೀನು ಎಂದು ಇದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ಈ ಬಗ್ಗೆ ಪರಿಶೀಲಿಸಬೇಕು ಎಂದರು.
ತಹಶೀಲ್ದಾರ್ ರಾಜು ಮಾವರಕರ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾ ಘಟಕದ ಕಾರ್ಯದರ್ಶಿ ಅಣ್ಣಪ್ಪ ಚವ್ಹಾಣ, ಮಾರುತಿ ಕಾಳೆ, ಪಾರವ್ವ ಹರಣಸಿಕಾರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.