ADVERTISEMENT

ಕುಂದಗೋಳ ಉಪ ಚುನಾವಣೆ: ಕುಸುಮಾವತಿ ವಿಜಯವೋ, ಚಿಕ್ಕನಗೌಡ್ರ ಗೆಲುವೋ

ಮತ ಎಣಿಕೆಗೆ ಕ್ಷಣಗಣನೆ: ಮಧ್ಯಾಹ್ನದ ವೇಳೆಗೆ ಅಧಿಕೃತ ಘೋಷಣೆ

​ಪ್ರಜಾವಾಣಿ ವಾರ್ತೆ
Published 22 ಮೇ 2019, 15:26 IST
Last Updated 22 ಮೇ 2019, 15:26 IST
ಎಸ್‌.ಐ.ಚಿಕ್ಕನಗೌಡ್ರ
ಎಸ್‌.ಐ.ಚಿಕ್ಕನಗೌಡ್ರ   

ಹುಬ್ಬಳ್ಳಿ: ತೀವ್ರ ಕುತೂಹಲ ಕೆರಳಿಸಿರುವ ಕುಂದಗೋಳ ಉಪ ಚುನಾವಣೆ ಮತ ಎಣಿಕೆ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆಯಲಿದೆ.

ಮತಯಂತ್ರಗಳು ಭದ್ರವಾಗಿರುವ ಸ್ಟ್ರಾಂಗ್ ರೂಂ ಬೀಗವನ್ನು ಬೆಳಿಗ್ಗೆ 7 ಗಂಟೆಗೆ ತೆರೆಯಲಾಗುತ್ತದೆ. ಎಂಟು ಗಂಟೆಗೆ ಮತ ಎಣಿಕೆ ಆರಂಭವಾಗುತ್ತದೆ. ಮೊದಲು ಅಂಚೆ ಮತ, ಆ ನಂತರ ಮತಯಂತ್ರಗಳ (ಇವಿಎಂ) ಮತ ಎಣಿಕೆ ನಡೆಯಲಿದೆ. ಮಧ್ಯಾಹ್ನ 1 ಗಂಟೆಯ ವೇಳೆಗೆ ಅಧಿಕೃತ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ.

ಕುಂದಗೋಳ ಚುನಾವಣಾ ಕಣದಲ್ಲಿ ಒಟ್ಟು ಎಂಟು ಮಂದಿ ಅಭ್ಯರ್ಥಿಗಳಿದ್ದಾರೆ. ಆದರೆ, ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಹಾಗೂ ಬಿಜೆಪಿಯ ಎಸ್‌.ಐ. ಚಿಕ್ಕನಗೌಡ್ರ ಮಧ್ಯೆ ನೇರ ಪೈಪೋಟಿ ಇದೆ. ಎರಡೂ ಪಕ್ಷದವರು ಗೆಲುವು ನಮ್ಮದೇ ಎಂದು ತಮ್ಮದೇ ವಿಶ್ಲೇಷಣೆ ಮುಂದಿಡುತ್ತಿದ್ದಾರೆ. ಮತದಾರ ಯಾರ ಪರ ಇದ್ದಾನೆ? ವಿಜಯ ಮಾಲೆ ಯಾರ ಕೊರಳಿಗೆ ಎಂಬುದು ಗೊತ್ತಾಗಲಿದೆ.

ADVERTISEMENT

ಮುಖ್ಯಮಂತ್ರಿ ಕುಮಾರಸ್ವಾಮಿ, ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸೇರಿದಂತೆ ಘಟಾನುಘಟಿ ನಾಯಕರು ಕುಸುಮಾವತಿ ಪರ ಪ್ರಚಾರ ಮಾಡಿದ್ದರು. ಸಚಿವ ಡಿ.ಕೆ. ಶಿವಕುಮಾರ್ ಚುನಾವಣಾ ಉಸ್ತುವಾರಿ ವಹಿಸಿದ್ದರು.

ಬಿಜೆಪಿ ಸಹ ಪ್ರಚಾರದಲ್ಲಿ ಹಿಂದೆ ಬಿದ್ದಿರಲಿಲ್ಲ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಖುದ್ದಾಗಿ ಹಲವು ದಿನ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು. ಸಂಸದರಾದ ಪ್ರಹ್ಲಾದ ಜೋಶಿ, ಶ್ರೀರಾಮುಲು, ಜಿ.ಎಂ. ಸಿದ್ದೇಶ್ವರ, ಶೋಭಾ ಕರಂದ್ಲಾಜೆ, ಶಾಸಕರಾದ ಜಗದೀಶ ಶೆಟ್ಟರ್, ಸಿ.ಟಿ. ರವಿ ಸೇರಿದಂತೆ ಹಲವು ಮುಖಂಡರು ತಮ್ಮ ಪಕ್ಷದ ಅಭ್ಯರ್ಥಿ ಪರ ಮತ ಯಾಚನೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.