ADVERTISEMENT

ಶೇ 82.42 ಮತದಾನ; ದಾಖಲೆ ಬರೆದ ಮತದಾರರು

ಉರಿ ಬಿಸಿಲಲ್ಲೂ ಕುಗ್ಗದ ಉತ್ಸಾಹ; ಎಲ್ಲೆಡೆ ಶಾಂತಿಯುತ; ಫಲಿತಾಂಶದತ್ತ ಎಲ್ಲರ ಚಿತ್ತ

​ಪ್ರಜಾವಾಣಿ ವಾರ್ತೆ
Published 20 ಮೇ 2019, 10:21 IST
Last Updated 20 ಮೇ 2019, 10:21 IST
ಯರಗುಪ್ಪಿ ಗ್ರಾಮದಲ್ಲಿ ಮತ ಚಲಾಯಿಸಿದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಹಾಗೂ ಅವರ ಪುತ್ರಿ ದೀಪಾ ಶಿವಳ್ಳಿ ಬೆರಳಿಗೆ ಹಚ್ಚಿದ ಶಾಯಿ ಪ್ರದರ್ಶಿಸಿದರು
ಯರಗುಪ್ಪಿ ಗ್ರಾಮದಲ್ಲಿ ಮತ ಚಲಾಯಿಸಿದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಹಾಗೂ ಅವರ ಪುತ್ರಿ ದೀಪಾ ಶಿವಳ್ಳಿ ಬೆರಳಿಗೆ ಹಚ್ಚಿದ ಶಾಯಿ ಪ್ರದರ್ಶಿಸಿದರು   

ಕುಂದಗೋಳ (ಹುಬ್ಬಳ್ಳಿ): ಕುಂದಗೋಳ ಉಪ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಶೇ82.42ರಷ್ಟು ದಾಖಲೆಯ ಮತದಾನವಾಗಿದೆ.

ಮತದಾರರ ಅತ್ಯುತ್ಸಾಹದ ಪಾಲ್ಗೊಳ್ಳುವಿಕೆಗೆ ಕುಂದಗೋಳ ಸಾಕ್ಷಿಯಾಯಿತು. ಕಳೆದ ಒಂಬತ್ತು ಚುನಾವಣೆಗಳಲ್ಲೇ ಈ ಬಾರಿ ಅತ್ಯಧಿಕ ಮತದಾನವಾಗಿದ್ದು, ಫಲಿತಾಂಶ ಏನಾಗಬಹುದೆಂಬ ಕುತೂಹಲ ಹೆಚ್ಚಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೇ 78.89 ಮತದಾನವಾಗಿತ್ತು.

ಒಟ್ಟು 1,89,441 ಮತದಾರರ ಪೈಕಿ 1,56,128 ಮಂದಿ ತಮ್ಮ ಹಕ್ಕು ಚಲಾಯಿಸಿದರು. ಈ ಪೈಕಿ 81,938 ಪುರುಷರು, 74,188 ಮಹಿಳೆಯರು ಹಾಗೂ ನಾಲ್ವರು ತೃತೀಯ ಲಿಂಗಿಗಳಲ್ಲಿ ಇಬ್ಬರು ಮತದಾನ ಮಾಡಿದರು. ಬೆಳಿಗ್ಗೆ ಉತ್ಸಾಹದಿಂದ ನಡೆದ ಮತದಾನ, ಮಧ್ಯಾಹ್ನ ನೀರಸಗೊಂಡಿತು. ಸಂಜೆ 4ರ ಬಳಿಕ ಬಿರುಸುಗೊಂಡಿತು.

ADVERTISEMENT

ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ಬಹುತೇಕ ಮತಗಟ್ಟೆಗಳಲ್ಲಿ ಮತದಾರರು ಸರದಿಯಲ್ಲಿ ನಿಲ್ಲಲ್ಲು ಅನುಕೂಲವಾಗುವಂತೆ ಶಾಮಿಯಾನ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ, ಆಟೊ ಅಥವಾ ಇನ್ನಿತರ ವಾಹನಗಳಲ್ಲಿ ಬರುತ್ತಿದ್ದ ಅಂಗವಿಕಲರನ್ನು, ಸಹಾಯಕರು‌ ವೀಲ್‌ ಚೇರ್‌ಗಳ ಮೂಲಕ ಮತಗಟ್ಟೆಯೊಳಕ್ಕೆ ಕರೆದೊಯ್ದು, ಮತದಾನ ಮಾಡಲು ನೆರವಾದರು.

ಅಭ್ಯರ್ಥಿಗಳ ಟೆಂಪಲ್ ರನ್:

ಕಣದಲ್ಲಿದ್ದ ಎಂಟು ಅಭ್ಯರ್ಥಿಗಳ ಪೈಕಿ, ನೇರ ಹಣಾಹಣಿ ಇದ್ದ ಕಾಂಗ್ರೆಸ್‌ನ ಕುಸುಮಾವತಿ ಶಿವಳ್ಳಿ ಹಾಗೂ ಬಿಜೆಪಿಯ ಎಸ್.ಐ. ಚಿಕ್ಕನಗೌಡ್ರ ಅವರು ಮತ ಚಲಾಯಿಸುವುದಕ್ಕೂ ಮೊದಲು ಬೆಳಿಗ್ಗೆ ದೇವಸ್ಥಾನಗಳಿಗೆ ಭೇಟಿ ನೀಡಿದರು.

ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ ನಮಿಸಿದ ಕುಸುಮಾವತಿ, ಬಳಿಕ ಸ್ವಗ್ರಾಮ ಯರಗುಪ್ಪಿಗೆ ತೆರಳಿ ಪತಿ ಸಿ.ಎಸ್. ಶಿವಳ್ಳಿ ಸಮಾಧಿಗೆ ಪೂಜೆ ಸಲ್ಲಿಸಿದರು. ನಂತರ, ಕುಟುಂಬ ಸಮೇತ ಯರಗಪ್ಪಿಯ ಸರ್ಕಾರಿ ಗಂಡುಮಕ್ಕಳ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು.

ಅದರಗುಂಚಿಯಲ್ಲಿ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡ್ರ ಅವರು ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ, ಕುಟುಂಬದ ಸದಸ್ಯರೊಂದಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಮುಂಜಾಗ್ರತಾ ಕ್ರಮವಾಗಿ ಅಭ್ಯರ್ಥಿಗಳಿಬ್ಬರ ಸ್ವಗ್ರಾಮವಾದ ಅದರಗುಂಚಿ ಹಾಗೂ ಯರಗುಪ್ಪಿ ಗ್ರಾಮದಲ್ಲಿ ಸಂಜೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.

ಮತಗಟ್ಟೆಗೆ ಬೆಂಬಲಿಗರ ಪೂಜೆ

ಉಪ ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳ ಊರಿನಲ್ಲಿ ಬೆಂಬಲಿಗರು ಮತಗಟ್ಟೆಗೆ ಪೂಜೆ ಮಾಡುವ ಮೂಲಕ, ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಗೆಲುವಿಗಾಗಿ ಅದರಗುಂಚಿಯಲ್ಲಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಲಕ್ಷ್ಮವ್ವ ಅವರು ಸರ್ಕಾರಿ ಪ್ರಾಥಮಿಕ ಗಂಡುಮಕ್ಕಳ ಶಾಲೆಯಲ್ಲಿ ಸ್ಥಾಪಿಸಿದ್ದ ಮತಗಟ್ಟೆ ಸಂಖ್ಯೆ 25ರಲ್ಲಿ ಪೂಜೆ ಸಲ್ಲಿಸಿದರು. ಬಾಗಿಲಿಗೆ ವಿಭೂತಿ, ಕುಂಕುಮ ಹಚ್ಚಿ, ಆರತಿ ಬೆಳಗಿದ ಲಕ್ಷ್ಮವ್ವ, ಬಳಿಕ ತೆಂಗಿನ ಕಾಯಿ ಒಡೆದರು.

ಅದೇ ರೀತಿ ಅದರಗುಂಚಿಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡ್ರ ವಿಜಯಕ್ಕಾಗಿ ಬೆಂಬಲಿಗರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 65ರಲ್ಲಿ ಪೂಜೆ ಮಾಡಿದರು. ಬಾಗಿಲಿಗೆ ಅರಿಸಿಣ ಕುಂಕುಮವಿಟ್ಟು ಹೂವಿನ ಮಾಲೆಯಿಂದ ಅಲಂಕರಿಸಿ, ಅವರೂ ತೆಂಗಿನಕಾಯಿ ಒಡೆದು ಗೆಲುವಿಗೆ ಪ್ರಾರ್ಥಿಸಿದರು.

ಚುನಾವಣಾ ಆಯೋಗದ ನಿಯಮದ ಪ್ರಕಾರ, ಮತಗಟ್ಟೆಗೆ ಪೂಜೆ ಮಾಡುವಂತಿಲ್ಲ.

ಮೊದಲ ಬಾರಿ ಮತದಾನ ಮಾಡಿದ ಶಿವಳ್ಳಿ ಪುತ್ರಿ

ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರ ಹಿರಿಯ ಪುತ್ರಿ ದೀಪಾ ಶಿವಳ್ಳಿ ಅವರು ಮೊದಲ ಬಾರಿಗೆ ಮತದಾನ ಮಾಡಿದರು.

ಬಳಿಕ ಮಾತನಾಡಿ, ‘ಮೊದಲ ಸಲ ಹಕ್ಕು ಚಲಾಯಿಸಿದ್ದಕ್ಕೆ ಖುಷಿ ಎನಿಸಿದೆ. ಅಪ್ಪ (ಸಿ.ಎಸ್. ಶಿವಳ್ಳಿ) ಇದ್ದಾಗ ಯಾವುದೇ ಕಾರಣಕ್ಕೂ ಮತ ಚಲಾಯಿಸುವುದರಿಂದ ತಪ್ಪಿಸಿಕೊಳ್ಳಬಾರದು ಎನ್ನುತ್ತಿದ್ದರು’ ಎಂದು ನೆನಪು ಮಾಡಿಕೊಂಡ ಅವರು, ‘ಚುನಾವಣೆಯಲ್ಲಿ ಅಮ್ಮ ಗೆಲುವು ಸಾಧಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮತದಾನದಲ್ಲೂ ನೀರ ಧ್ಯಾನ

ಕುಂದಗೋಳ ಕ್ಷೇತ್ರದಲ್ಲಿ ಮತದಾನದ ಭರಾಟೆ ಜೋರಾಗಿರುವಂತೆ, ಅಲ್ಲಲ್ಲಿ ಖಾಲಿ ಕೊಡಗಳನ್ನು ಸಾಲಾಗಿಟ್ಟುಕೊಂಡು ಕುಡಿಯುವ ನೀರಿಗಾಗಿ ಮಂದಿ ಕಾಯುತ್ತಿದ್ದ ದೃಶ್ಯ ಕಂಡುಬಂತು. ಅದರಗುಂಚಿ, ಹಿರೇನರ್ತಿ, ಚಿಕ್ಕನರ್ತಿ, ಶರೇವಾಡ, ನೂಲ್ವಿ, ದೇವನೂರ, ಶಿರೂರು, ರೊಟ್ಟಿಗವಾಡ ಸೇರಿದಂತೆ ಹಲವು ಗ್ರಾಮಗಳಲ್ಲಿ ಊರಿನ ಟ್ಯಾಂಕರ್ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳ ಮುಂದೆ ಖಾಲಿ ಬಿಂದಿಗೆಗಳ ಕ್ಯೂ ಸಾಮಾನ್ಯವಾಗಿತ್ತು.

‘ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಶಿವಳ್ಳಿ ಇದ್ದಾಗ ನದಿ ನೀರು ತರುವ ಯತ್ನ ಮಾಡಿದರು. ಆದರೆ, ಕನಸು ಕೈಗೂಡುವ ಮುಂಚೆಯೇ ಅವರು ಮರೆಯಾದರು. ಉಪ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳು, ಕುಂದಗೋಳ ಕ್ಷೇತ್ರಕ್ಕೆ ಶಾಶ್ವತ ನೀರಿನ ವ್ಯವಸ್ಥೆ ಮಾಡಿದರೆ ಜನ ಅವರನ್ನು ಸದಾ ಸ್ಮರಿಸುತ್ತಾರೆ’ ಎಂದು ಶರೇವಾಡದ ಹನುಮಂತು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.