ADVERTISEMENT

ಕುಂದಗೋಳ ವಿಧಾನಸಭೆ ಉಪ ಚುನಾವಣೆ: ‘ಕೈ’ ತಂತ್ರಕ್ಕೆ ‘ಕಮಲ’ ಪ್ರತಿತಂತ್ರ

​ಪ್ರಜಾವಾಣಿ ವಾರ್ತೆ
Published 5 ಮೇ 2019, 13:49 IST
Last Updated 5 ಮೇ 2019, 13:49 IST
   

ಹುಬ್ಬಳ್ಳಿ: ಕುಂದಗೋಳ ವಿಧಾನಸಭೆ ಉಪ ಚುನಾವಣಾ ಗೆಲುವಿಗೆ ಕಾಂಗ್ರೆಸ್‌ ಮುಖಂಡರು ರೂಪಿಸಿರುವ ಕಾರ್ಯತಂತ್ರಗಳಿಗೆ ಪ್ರತಿಯಾಗಿ ಬಿಜೆಪಿ ಮುಖಂಡರು ಸಹ ಭಾನುವಾರ ಪ್ರತಿತಂತ್ರ ಹೆಣೆದರು.

ಬೆಂಗಳೂರಿನಿಂದ ಬೆಳಿಗ್ಗೆಯೇ ಹುಬ್ಬಳ್ಳಿಗೆ ದೌಡಾಯಿಸಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಇಲ್ಲಿನ ಕೇಶ್ವಾಪುರದ ‘ಅನಂತ ಎಕ್ಸಿಕ್ಯೂಟಿವ್‌’ ಸಭಾಂಗಣದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಶಾಸಕರು, ಮುಖಂಡರೊಂದಿಗೆ ಗೌಪ್ಯ ಸಭೆ ನಡೆಸಿ, ತಮ್ಮ ಸಂಬಂಧಿ ಎಸ್‌.ಐ.ಚಿಕ್ಕನಗೌಡ್ರ ಗೆಲುವಿಗೆ ಉಸ್ತುವಾರಿಗಳನ್ನು ನೇಮಕ ಮಾಡುವ ಜೊತೆಗೆ ಕಾರ್ಯತಂತ್ರಗಳ ಕುರಿತು ಪ್ರಮುಖ ಸಲಹೆ, ಸೂಚನೆಗಳನ್ನು ನೀಡಿದರು.

ಶಾಸಕರಾದ ಜಗದೀಶ ಶೆಟ್ಟರ್‌, ಬಸವರಾಜ ಬೊಮ್ಮಾಯಿ, ಕೆ.ಎಸ್.ಈಶ್ವರಪ್ಪ ಮತ್ತು ಸಂಸದ ಪ್ರಹ್ಲಾದ ಜೋಶಿ ಅವರಿಗೆ ಕ್ಷೇತ್ರದ ಸಂಪೂರ್ಣ ಉಸ್ತುವಾರಿಯನ್ನು ವಹಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಈರಣ್ಣ ಜಡಿ ‘ಪ್ರಜಾವಾಣಿ’ಗೆ ಖಚಿತ ಪಡಿಸಿದರು.

ADVERTISEMENT

ಕ್ಷೇತ್ರದ ಪ್ರತಿ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರಾಬಲ್ಯ ಇರುವ ವಿವಿಧ ಜಾತಿ, ಸಮುದಾಯದ ಮತದಾರರನ್ನು ಸೆಳೆಯಲು ಆಯಾ ಜಾತಿಗೆ ಸೇರಿದ ಮುಖಂಡರನ್ನು ಪ್ರಚಾರಕ್ಕೆ ಕಾಂಗ್ರೆಸ್‌ ನಿಯೋಜಿಸಿರುವಂತೆ ಬಿಜೆಪಿಯೂ ಸಹ ಅದೇ ರೀತಿಯಲ್ಲಿ ಶಾಸಕರು, ಮುಖಂಡರನ್ನು ನಿಯೋಜಿಸಲು ನಿರ್ಧರಿಸಲಾಗಿದೆ.

ಪರಿಶಿಷ್ಟ ಜಾತಿಗೆ ಸೇರಿದ ಮತದಾರರನ್ನು ಸೆಳೆಯುವ ಜವಾಬ್ದಾರಿಯನ್ನು ಶಾಸಕ ಗೋವಿಂದ ಕಾರಜೋಳ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಅವರಿಗೆ ಹಾಗೂ ಪರಿಶಿಷ್ಟ ಪಂಗಡದ ಮತಗಳನ್ನು ಸೆಳೆಯಲು ಶಾಸಕ ಶ್ರೀರಾಮುಲು ಅವರಿಗೆ ವಹಿಸಿ, ಪ್ರತ್ಯೇಕ ಸಮಾವೇಶವನ್ನು ಆಯೋಜಿಸುವಂತೆಯೂ ಯಡಿಯೂರಪ್ಪ ಸೂಚಿಸಿದರು.

ಲಿಂಗಾಯತ ಮತಗಳನ್ನು ಸೆಳೆಯಲು ಶಾಸಕರಾದ ಅರವಿಂದ ಬೆಲ್ಲದ, ಶಂಕರಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ಶಿವರಾಜ ಸಜ್ಜನ, ಸಿ.ಸಿ.ಪಾಟೀಲ, ರೇಣುಕಾಚಾರ್ಯ, ಪ್ರದೀಪ ಶೆಟ್ಟರ್‌, ಮೋಹನ ಲಿಂಬಿಕಾಯಿ ಅವರಿಗೆ ಜವಾಬ್ದಾರಿ ವಹಿಸಿದರು.

ಚುನಾವಣೆ ಪ್ರಚಾರಕ್ಕೆ ನಿಯೋಜನೆಗೊಂಡಿರುವ ಶಾಸಕರು, ಮುಖಂಡರು ಕೊನೆಯ ವರೆಗೂ ತಮ್ಮ, ತಮ್ಮ ಸ್ಥಳದಲ್ಲೇ ಇದ್ದು, ಉಸ್ತುವಾರಿ ನೋಡಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ರಾಜ್ಯ ಸಮ್ಮಿಶ್ರ ಸರ್ಕಾರದ ವೈಫಲ್ಯ, ಪ್ರಧಾನಿ ಮೋದಿ ಅವರು ಐದು ವರ್ಷಗಳಲ್ಲಿ ಜಾರಿಗೆ ತಂದಿರುವ ಜನಪರ ಯೋಜನೆಗಳು ಹಾಗೂ ಲೋಕಸಭಾ ಚುನಾವಣೆಯಲ್ಲಿ ನೀಡಿರುವ ಭರವಸೆಗಳನ್ನು ಮುಂದಿಟ್ಟುಕೊಂಡು ಮತಯಾಚಿಸುವಂತೆ ಪಕ್ಷದ ಕಾರ್ಯಕರ್ತರಿಗೆ, ಮುಖಂಡರಿಗೆ ಯಡಿಯೂರಪ್ಪ ಸೂಚಿಸಿದರು.

ಲೋಕಸಭಾ ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಪ್ರಚಾರದ ವೇಳೆ ಮತದಾರರಿಗೆ ಮನವರಿಕೆ ಮಾಡುವ ಬಗ್ಗೆಯೂ ಮುಖಂಡರು ಚರ್ಚೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.