ADVERTISEMENT

ಕುಂದಗೋಳ; ಕರಿಬಂಡಿ ಉತ್ಸವ 12ಕ್ಕೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 16:02 IST
Last Updated 10 ಜೂನ್ 2025, 16:02 IST
ಕುಂದಗೋಳದಲ್ಲಿ ಕಾರ ಹುಣ್ಣಿಮೆ ಪ್ರಯುಕ್ತ ನಡೆದ ಕರಿಬಂಡಿ ಉತ್ಸವದಲ್ಲಿ ಭಾಗವಹಿಸಿದ್ದ ವೀರಗಾರರು (ಸಂಗ್ರಹ ಚಿತ್ರ)
ಕುಂದಗೋಳದಲ್ಲಿ ಕಾರ ಹುಣ್ಣಿಮೆ ಪ್ರಯುಕ್ತ ನಡೆದ ಕರಿಬಂಡಿ ಉತ್ಸವದಲ್ಲಿ ಭಾಗವಹಿಸಿದ್ದ ವೀರಗಾರರು (ಸಂಗ್ರಹ ಚಿತ್ರ)   

ಕುಂದಗೋಳ: ಉತ್ತರ ಕರ್ನಾಟಕ ಭಾಗದಲ್ಲಿ ಕಾರ ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ,  ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಕರಿಬಂಡಿ ಉತ್ಸವ ಮೂಲಕ ವಿಶಿಷ್ಟವಾಗಿ ಆಚರಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ.

ಇಲ್ಲಿ ಕಾರಹುಣ್ಣಿಮೆಯಂದು ಬ್ರಹ್ಮದೇವರಿಗೆ ಅಗ್ರಪೂಜೆ ನಡೆಯುತ್ತದೆ. ರೈತರು ಎತ್ತುಗಳನ್ನು ವಿಶಿಷ್ಟವಾಗಿ ಸಿಂಗರಿಸಿ ಉತ್ಸವ ನಡೆಯುವ ದಿನ ಎತ್ತುಗಳ ಕರಿ ಹರಿಯುತ್ತಾರೆ. ವಿವಿಧ ಬಗೆಯ  ಆಹಾರ ತಯಾರಿಸಿ ಕುಟುಂಬದವರು, ಸಂಬಂಧಕರು, ಸ್ನೇಹಿತರೊಂದಿಗೆ ಹಬ್ಬ ಆಚರಿಸುತ್ತಾರೆ.

ಕರಿಬಂಡಿ ಉತ್ಸವಕ್ಕೆ ಮೂರು ಶತಮಾನಗಳ ಇತಿಹಾಸ ಇದ್ದು, ಎಲ್ಲ ಸಮುದಾಯದವರು ಭಾಗವಹಿಸಿ ಭಾವೈಕ್ಯತೆ ಮೆರೆಯುತ್ತಾರೆ. ಬ್ರಾಹ್ಮಣ ಸಮುದಾಯದವರು ವೀರಗಾರರಾದರೆ, ಭೋವಿ ಸಮುದಾಯದವರು ಭಂಡಿ ಹೂಡಿ ಜಾಡಿಸುತ್ತಾರೆ.

ADVERTISEMENT

‘ಪಟ್ಟಣದಲ್ಲಿ ಬ್ರಹ್ಮದೇವರ ಗುಡಿ ಇರುವ ಸ್ಥಳದ ಸುತ್ತ ದಟ್ಟ ಅರಣ್ಯವಿತ್ತು. ಅಲ್ಲಿ ವಾಸವಾಗಿದ್ದ ರಾಕ್ಷಸನೂಬ್ಬ ಜನರಿಗೆ  ತೂಂದರೆ ಕೊಡುತ್ತಿದ್ದನ. ಆತನ ಉಪಟಳದಿಂದ ಬೇಸತ್ತ ಗ್ರಾಮಸ್ಥರು ಅವನ ಸಂಹಾರಕ್ಕಾಗಿ ಪಣ ತೂಟ್ಟರು. ಗ್ರಾಮದ 14 ವೀರ ಯುವಕರು ಎರಡು ಬಂಡಿಗಳಲ್ಲಿ ಬ್ರಹ್ಮದೇವರ ಗುಡಿಗೆ ತೆರಳಿ ಪೂಜೆ ಸಲ್ಲಿಸಿ ರಾಕ್ಷಸನ ಸಂಹಾರ ಮಾಡಿದರು. ಅಂದಿನಿಂದ ಕರಿಬಂಡಿ ಉತ್ಸವ ಆಚರಿಸಲಾಗುತ್ತಿದೆ’ ಎನ್ನುತ್ತಾರೆ ಗ್ರಾಮದ ಹಿರಿಯರು.

ಈ ಕರಿಬಂಡಿ ಉತ್ಸವಕ್ಕೆ ರಾಜ್ಯದ ವಿವಿಧ ಜಿಲ್ಲೆಗಳು, ಹೊರರಾಜ್ಯಗಳಿಂದ ಜನರು ಬರುತ್ತಾರೆ. ಜೂನ್ 11ರಂದು  ಹೊನ್ನುಗ್ಗಿ ಹಾಗೂ ಜೂನ್ 12 ರಂದು ಕರಿಬಂಡಿ ಉತ್ಸವ ಜರುಗಲಿದೆ.

ಕುಂದಗೋಳದಲ್ಲಿನ ಬ್ರಹ್ಮಲಿಂಗೇಶ್ವರ ದೇವಸ್ಥಾನ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.