ADVERTISEMENT

ಕುರುಬ ಸಮಾಜಕ್ಕೆ ಎಸ್‌ಟಿ ಮೀಸಲಾತಿಗೆ ಆಗ್ರಹ: ಕುರಿಗಳೊಂದಿಗೆ ಪ್ರತಿಭಟನೆ 14ರಂದು

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 3:20 IST
Last Updated 10 ಆಗಸ್ಟ್ 2025, 3:20 IST
ಸಿದ್ದು ತೇಜಿ
ಸಿದ್ದು ತೇಜಿ   

ಹುಬ್ಬಳ್ಳಿ: ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಗಸ್ಟ್‌ 14 ರಂದು ಕುರಿಗಳೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಪ್ರದೇಶ ಕುರುಬ ಸಮಾಜದ ಒಕ್ಕೂಟದ ಅಧ್ಯಕ್ಷ ಸಿದ್ದಣ್ಣ ತೇಜಿ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11 ಗಂಟೆಗೆ ನಗರದ ಅಂಬೇಡ್ಕರ್‌ ವೃತ್ತದಿಂದ ತಹಶೀಲ್ದಾರ್ ಕಚೇರಿವರಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಗುವುದು ಎಂದರು.

ನಾಲ್ಕು ದಶಕಗಳಿಂದ ಮೀಸಲಾತಿಗಾಗಿ ಹೋರಾಟ ಮಾಡಲಾಗುತ್ತಿದೆ. ಚುನಾವಣೆ ಪೂರ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೀಸಲಾತಿ ಕೊಡಿಸುವ ಭರವಸೆ ನೀಡಿದ್ದರು. ಈಗ ಮುಖ್ಯಮಂತ್ರಿಯಾಗಿ ಎರಡು ವರ್ಷ ಕಳೆದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ADVERTISEMENT

ಕುರಿಗಾಹಿಗಳ ಮೇಲೆ ಆಗುತ್ತಿರುವ ದೌರ್ಜನ್ಯ, ಕೊಲೆ, ಕುರಿಗಳ ಕಳವು ಪ್ರಕರಣ ತಡೆಗೆ ಕಾನೂನು ಜಾರಿಗೆ ತರಲಾಗುವುದು ಎಂಬ ಭರವಸೆ ಸಹ ಈಡೇರಿಲ್ಲ ಎಂದರು.

ಅರಣ್ಯ, ಗುಡ್ಡಗಾಡು ಪ್ರದೇಶ, ಹುಲ್ಲುಗಾವಲುಗಳಲ್ಲಿ ಕುರಿ, ಜಾನುವಾರು ಮೇಯಿಸಲು ನಿರ್ಬಂಧ ವಿಧಿಸಿ ಹೊರಡಿಸಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ನಮ್ಮ ಬೇಡಿಕೆ ಈಡೇರಿಸದಿದ್ದರೆ ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿದರು. 

ರವಿರಾಜ ಕಂಬಳಿ, ಚಂದ್ರಶೇಖರ ಕಣವಿ, ಡಿ.ಟಿ.ಪಾಟೀಲ, ಸಿದ್ದಣ್ಣ ಪ್ಯಾಟಿ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.