ADVERTISEMENT

International Labor Day | ಧಾರವಾಡ ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕರು 1.99 ಲಕ್ಷ

ಬಿ.ಜೆ.ಧನ್ಯಪ್ರಸಾದ್
Published 1 ಮೇ 2025, 5:21 IST
Last Updated 1 ಮೇ 2025, 5:21 IST
   

ಧಾರವಾಡ: ಜಿಲ್ಲೆಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿರು 1.99 ಲಕ್ಷ ಇದ್ದರೆ, ಸಂಘಟಿತ ಕಾರ್ಮಿಕರ ಸಂಖ್ಯೆ 54 ಸಾವಿರ. ಅಸಂಘಟಿತ ಕಾರ್ಮಿಕರು 1.30 ಲಕ್ಷ ಇದ್ದಾರೆ.

‘ಕಟ್ಟಡ ಮತ್ತು ಇತರ ನಿರ್ಮಾಣ ಕಲ್ಯಾಣ ಮಂಡಳಿಯ ವಿವಿಧ ಯೋಜನೆಗಳ ನೆರವನ್ನು 50,875 ಫಲಾನುಭವಿಗಳು ಪಡೆದಿದ್ದಾರೆ. ಶೈಕ್ಷಣಿಕ ನೆರವು–35,832, ಮದುವೆಗೆ 13540, ವೈದ್ಯಕೀಯ ನೆರವು 583, ಹೆರಿಗೆ 823 ಮತ್ತು ತಾಯಿ–ಮಗು ಸಹಾಯ ಹಸ್ತದ ಯೋಜನೆಯಡಿ 97 ಮಂದಿ ನೆರವು ಪಡೆದಿದ್ದಾರೆ’ ಎಂದು ಕಾರ್ಮಿಕ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಅಂಬೇಡ್ಕರ್‌ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಅಪಘಾತ ಪರಿಹಾರ ಸೌಲಭ್ಯ ಇದೆ. ಮರಣ ಪ್ರಕರಣದಲ್ಲಿ ನಾಮನಿರ್ದೇಶಿತರಿಗೆ ₹ 1ಲಕ್ಷ ಪರಿಹಾರ ನೀಡಲಾಗುತ್ತದೆ. ಅಪಘಾತದಲ್ಲಿ ಅಂಗ ಊನವಾದರೆ (ಪ್ರಮಾಣ ಆಧರಿಸಿ) ₹ 1 ಲಕ್ಷ ಪರಿಹಾರ, ₹ 50 ಸಾವಿರವರೆಗೆ ಆಸ್ಪತ್ರೆ ವೆಚ್ಚ ಮರುಪಾವತಿ ಸೌಲಭ್ಯ ಇದೆ.

ADVERTISEMENT

ಖಾಸಗಿ ವಾಹನ ಚಾಲಕರ ಅಪಘಾತ ಯೋಜನೆಯಡಿ ಪರಿಹಾರ ಸೌಲಭ್ಯ ಇದೆ. ಮರಣ ಪ್ರಕರಣದಲ್ಲಿ ನಾಮನಿರ್ದೇಶಿತರಿಗೆ ₹ 5ಲಕ್ಷ ಪರಿಹಾರ ನೀಡಲಾಗುತ್ತದೆ. ಅಪಘಾತದಲ್ಲಿ ಗಾಯಗೊಂಡು ಒಳರೋಗಿಯಾಗಿ 15 ದಿನಗಳವರೆಗೆ ಚಿಕಿತ್ಸೆ ಪಡೆದವರಿಗೆ ₹ 50 ಸಾವಿರ ಚಿಕಿತ್ಸೆ ವೆಚ್ಚ, 15 ದಿನಗಳಿಗಿಂತ ಹೆಚ್ಚು ದಿನ ಚಿಕಿತ್ಸೆ ಪಡೆದಿದ್ದರೆ ₹ 1 ಲಕ್ಷದವರೆಗೆ ಚಿಕಿತ್ಸೆ ವೆಚ್ಚ ಪಾವತಿ ಸೌಲಭ್ಯ ಇದೆ.

ಶೈಕ್ಷಣಿಕ ಧನ ಸಹಾಯ ಯೋಜನೆಯಡಿ ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ಪಿಯುಸಿ, ಎಂಜಿನಿಯರಿಂಗ್‌, ವೈದ್ಯಕೀಯ ವಿಜ್ಞಾನ, ಸ್ನಾತಕೋತ್ತರ ಪದವಿ ಕೋರ್ಸ್‌ ಶಿಕ್ಷಣಕ್ಕೆ ನೆರವು ನೀಡಲಾಗುತ್ತದೆ. ಹೆರಿಗೆ ಯೋಜನೆಯಡಿ ಎರಡು ಹೆರಿಗೆಗಳಿಗೆ ಸೀಮಿತವಾಗಿ ತಲಾ ₹ 10 ಸಾವಿರ ನೆರವು ನೀಡಲಾಗುತ್ತದೆ.

ಈ ಶ್ರಮ್‌ ಯೋಜನೆಯಡಿ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಯೋಜನೆಗಳ ಸೌಲಭ್ಯಗಳನ್ನು ಪಡೆಯಬಹುದು. ಗಿಗ್‌ ವರ್ಕರ್ಸ್ ಸ್ಮಾರ್ಟ್‌ ಕಾರ್ಡ್‌ ನೀಡಲಾಗುತ್ತದೆ. ಅಪಘಾತದಲ್ಲಿ ಮೃತಪಟ್ಟರೆ ವಿಮಾ ಪರಿಹಾರ ₹2 ಲಕ್ಷ ಸಹಿತ ಒಟ್ಟು ₹ 4 ಲಕ್ಷ ನೀಡಲಾಗುತ್ತದೆ. ಗಾಯಗೊಂಡವರಿಗೆ ಚಿಕಿತ್ಸೆ ವೆಚ್ಚ ಪಾವತಿ ಸೌಲಭ್ಯ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.