ADVERTISEMENT

ಹುಬ್ಬಳ್ಳಿ | ಕಲಿತಿದ್ದು ಕಮ್ಮಿ; ಕೃಷಿ ಪ್ರಯೋಗ ವಿಭಿನ್ನ

ಇತರರಿಗೆ ಮಾದರಿಯಾದ ಹೊಸತೇಗೂರ ರೈತ ಮಹಾಂತೇಶರ ಬೇಸಾಯ

ಕೃಷ್ಣಿ ಶಿರೂರ
Published 13 ಡಿಸೆಂಬರ್ 2024, 4:40 IST
Last Updated 13 ಡಿಸೆಂಬರ್ 2024, 4:40 IST
ಟೊಮೆಟೊ ಬೇಸಾಯದ ಜೊತೆ ರೈತ ಮಹಾಂತೇಶ ಪಟ್ಟಣಶೆಟ್ಟಿ
ಟೊಮೆಟೊ ಬೇಸಾಯದ ಜೊತೆ ರೈತ ಮಹಾಂತೇಶ ಪಟ್ಟಣಶೆಟ್ಟಿ   

ಹುಬ್ಬಳ್ಳಿ: ನೆಚ್ಚಿಕೊಂಡ ಕೃಷಿಯಲ್ಲಿ ಏನಾದರೂ ವಿಭಿನ್ನ ಪ್ರಯೋಗ ನಡೆಸಿ ಪ್ರಗತಿಪರ ರೈತರು ಎಂದು ಗುರುತಿಸಿಕೊಳ್ಳುವವರ ನಡುವೆ ಹೊಸತೇಗೂರಿನ ರೈತ ಮಹಾಂತೇಶ ಪಟ್ಟಣಶೆಟ್ಟಿ ಇನ್ನಷ್ಟು ಮುಂದೆ ಸಾಗಿ ಯಶಸ್ಸು ಕಂಡಿದ್ದಾರೆ. ಸಮಗ್ರ ಕೃಷಿಯಲ್ಲಿ ಭರಪೂರ ಆದಾಯ ಕಂಡುಕೊಂಡಿದ್ದಾರೆ. ಮುಖ್ಯವಾಗಿ ತರಕಾರಿಗಳನ್ನು ಕೀಟಗಳಿಂದ ರಕ್ಷಿಸಲು ಕೀಟನಾಶಕ ಸಿಂಪಡಣೆಯನ್ನು ತಪ್ಪಿಸುವುದನ್ನು ಸವಾಲಾಗಿ ಸ್ವೀಕರಿಸಿ, ಗೆಲುವು  ಸಾಧಿಸಿದ್ದಾರೆ.

‘ನಾನು ಓದಿದ್ದೇ 6ನೇತ್ತಾರಿ. ಮುಂದೆ ಓದೋಕೆ ಮನ್ಸು ಮಾಡಿಲ್ಲರಿ. ನನ್ನ 13ನೇ ವಯಸ್ಸಿಗೆ ಅಪ್ಪ ನಡೆಸಿಕೊಂಡ ಬಂದ ಹೊಲದಾಗ ಕೃಷಿ ಶುರುಮಾಡೇನ್ರಿ. ಬ್ಯಾರೆ ಬ್ಯಾರೆ ಪ್ರಯೋಗಾನೂ ಮಾಡಿ, ವರ್ಷಕ್ಕೆ ಏನಿಲ್ಲ ಅಂದ್ರೂನು 10 ಲಕ್ಷ ಲಾಭ ಕಂಡೇನ್ರಿ’ ಎಂದು ತಮ್ಮ ಮುಗ್ಧ ಮಾತನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡವರು ಮಹಾಂತೇಶ ಪಟ್ಟಣಶೆಟ್ಟಿ.

‘ನಮ್ಮ ಹೊಲಕ್ಕೆ ಹುಳುಗಳು ದಾಳಿ ಮಾಡಿಮುಂದ ಯೋಚಿಸುವಂತೆ ಮಾಡೇನ್ರಿ. ಹೊಲದ ಸುತ್ತ 10 ವರ್ಷಕ್ಕೆ ತೇಗದ ಸಸಿ ಹಚ್ಚೇನ್ರಿ. ಅವು 10 ವರ್ಷಕ್ಕೆ ಕಟಾವಿಗೆ ಬರ್ತಾವ್ರಿ. ಅದರ ನಂತ್ರ 5 ಎಕರೇಲಿ ಕಬ್ಬು ಬೆಳೆದೇನ್ರಿ. ಈ ಕಬ್ಬಿನ ನಡುವಿನ ಜಾಗದಾಗ ಟೊಮೆಟೊ, ಮೆಣಸು, ಮೆಂತೆ, ಸೌತೆ, ಬದನೆ ಬೇಳೆದೇನ್ರಿ.... ಹೂಳುಗಳು ನಮ್ಮ ತರಕಾರಿಯತ್ತ ಬರಬೇಕಂದ್ರ ಎರಡು ರಕ್ಷಣಾ ಕೋಟೆ ದಾಟ್‌ ಬರಬೇಕ್ರಿ. ಅದಕ್ಕ ತರಕಾರಿಗೆ ನಾನು ಔಷಧ ಹೊಡೆಯಂಗಿಲ್ಲರಿ. ಅದ್ರಿಂದ ನಮ್ಮ ತರಕಾರಿಗ ಮಾರ್ಕೆಟ್‌ನ್ಯಾಗ ಒಳ್ಳೆ ಬೇಡಿಕೆ ಜೊತೆ ಬೆಲೆಯೂ ಕೊಡ್ತಾರ‍್ರೀ...’ ಎಂದು ಕೃಷಿಯಲ್ಲಿ ತಾವು ಕಂಡುಕೊಂಡ ತಂತ್ರಗಳನ್ನು ಬಿಚ್ಚಿಟ್ಟರು ಮಹಾಂತೇಶ.

ADVERTISEMENT

ಇಷ್ಟೇ ಅಲ್ಲ; ಋತುಮಾನಕ್ಕೆ ತಕ್ಕಂತೆ ತರಕಾರಿ ಬೆಳೆಗಳ ಏರಿಳಿತವನ್ನು ಲೆಕ್ಕಾಚಾರ ಹಾಕಿ ಬಿತ್ತನೆ ಮಾಡುವ ಕೌಶಲ ಮಹಾಂತೇಶ ಪಟ್ಟಣಶೆಟ್ಟಿ ಅವರು ಪಾಲಿಸಿಕೊಂಡು ಬರುತ್ತಿದ್ದಾರೆ. ತರಕಾರಿ ಬೇಸಾಯದಲ್ಲಿ ಮಲ್ಚಿಂಗ್‌ ಪದ್ಧತಿ, ಸಾವಯವ ಪದ್ಧತಿ, ಹನಿ ನೀರಾವರಿಗೆ ಒತ್ತು ಕೊಟ್ಟಿದ್ದಾರೆ. ಇವರ ತರಕಾರಿ ಹೊಲದ ನಡುವೆ ಬೆರ್ಚಪ್ಪಗಳೂ ಇರುವುದು ವಿಶೇಷ.  

ಇವರೇ ಹೇಳುವಂತೆ ತರಕಾರಿ ಒಳ್ಳೆ ಆದಾಯ ತಂದು ಕೊಡುತ್ತಿದೆ. ಇವರು ಬೆಳೆದ ತರಕಾರಿಗಳಿಗೆ ಹುಬ್ಬಳ್ಳಿ, ಧಾರವಾಡ ಹಾಗೂ ಬೆಳಗಾವಿಯಲ್ಲಿ ಮಾರುಕಟ್ಟೆಯನ್ನು ಕಂಡುಕೊಂಡಿದ್ದಾರೆ. ಕೋಲಾರದಿಂದ ಟೊಮೆಟೊ ಬೀಜ ತರಿಸಿ ಹಾಕಿದ್ದು, ಜವಾರಿಗೆ ಹೋಲಿಸಿದಲ್ಲಿ ₹ 200 ಕಮ್ಮಿ ದರ ಸಿಕ್ಕರೂ ಇಳುವರಿಯಲ್ಲಿ ಹೆಚ್ಚು ಟೊಮೆಟೊ ಬರುವುದರಿಂದ ಆದಾಯ ಸಿಗುತ್ತಿದೆ. 15 ಗುಂಟೆ ಜಾಗದಲ್ಲಿ ಬೆಳೆಯಲಾದ ಟೊಮೆಟೊ ನಿರಂತರ ಆದಾಯಕ್ಕೆ ದಾರಿಯಾಗಿದೆ. 32 ಗುಂಟೆಯಲ್ಲಿ ₹1 ಲಕ್ಷ ಖರ್ಚು ಮಾಡಿ ಮಲ್ಚಿಂಗ್‌ ಪದ್ಧತಿಯಲ್ಲಿ ಮೆಣಸು ಬೆಳೆದಿದ್ದು, ₹5 ಲಕ್ಷ ಆದಾಯ ಬಂದಿದೆ. ಖರ್ಚು ಕಳೆದು ₹4 ಲಕ್ಷ ಲಾಭ ಮೆಣಸು ಒಂದರಿಂದಲೇ ಕಂಡಿದ್ದಾರೆ. ಒಟ್ಟಾರೆ ಐದು ಎಕರೆಯಲ್ಲಿನ ಕಬ್ಬು ಹಾಗೂ ತರಕಾರಿ ಬೇಸಾಯದಿಂದ ಖರ್ಚು ಕಳೆದು ₹10 ಲಕ್ಷ ಲಾಭ ಕಂಡಿದ್ದಾರೆ.

ಮಹಾಂತೇಶ ಅವರ ಕೃಷಿಗೆ ಅವರ ಪತ್ನಿ ಶ್ರೀದೇವಿ ಪಟ್ಟಣಶೆಟ್ಟಿ ಸಾಥ್‌ ನೀಡಿದ್ದಾರೆ. ಮಹಾಂತೇಶರ ಕೃಷಿ ಪದ್ಧತಿಗೆ ಮಾರು ಹೋದ ಸುತ್ತಮುತ್ತಲಿನ ರೈತರು ಕೂಡ ಇವರ ಬೇಸಾಯ ಕ್ರಮವನ್ನು ಅನುಸರಿಸುತ್ತಿದ್ದಾರೆ. (ಸಂಪರ್ಕ ಮೊಬೈಲ್‌ ಫೋನ್‌: 9019687965)

ಟೊಮೆಟೊ ಬೇಸಾಯದ ಜೊತೆ ರೈತ ಮಹಾಂತೇಶ ಪಟ್ಟಣಶೆಟ್ಟಿ
ಕೃಷಿಯಾಗ ಬಾಳ್‌ ಖುಷಿಐತ್ರಿ. ಹೆಚ್ಚು ಕಲಿತಿಲ್ಲ ಅಂದ್ರೂನು ಉಳಿದ ರೈತರು ನನ್ನ ಕೃಷಿ ಪದ್ಧತಿಯನ್ನು ಬಂದು ನೋಡಿ ಅಳವಡಿಸಿಕೊಳ್ಳೊದು ಇನ್ನೂ ಖುಷಿ ಅನ್ನಿಸ್ತದ
ಮಹಾಂತೇಶ ಪಟ್ಟಣಶೆಟ್ಟಿ ಹೊಸತೇಗೂರ ರೈತ
ಮಹಾಂತೇಶ ಅವರು ಸಹಜ ಕೃಷಿ ಜೊತೆ ಹೈಟೆಕ್‌ ಪದ್ಧತಿ ಹಾಗೂ ಲಾಭದಾಯಕ ತಂತ್ರಗಳನ್ನೂ ಅಳವಡಿಸಿಕೊಂಡಿದ್ದರಿಂದ ಮಾದರಿಯೆನಿಸಿದ್ದಾರೆ
ಸಂಗಮೇಶ ಮಂಗೋಜಿ ಉಪಯೋಜನಾ ನಿರ್ದೇಶಕ ಆತ್ಮಯೋಜನೆ ಧಾರವಾಡ ಕೃಷಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.