ADVERTISEMENT

ಹುಬ್ಬಳ್ಳಿ- ಧಾರವಾಡ | ಸಾರ್ವಜನಿಕ ಮೂತ್ರಾಲಯ ಕೊರತೆ

ಅವಳಿನಗರದಲ್ಲಿ ಮಂದಗತಿಯಲ್ಲಿ ಸಾಗಿದ ಮೂತ್ರಾಲಯಗಳ ನಿರ್ಮಾಣ ಕಾಮಗಾರಿ

ಶಿವರಾಯ ಪೂಜಾರಿ
Published 12 ಫೆಬ್ರುವರಿ 2025, 5:36 IST
Last Updated 12 ಫೆಬ್ರುವರಿ 2025, 5:36 IST
ರುದ್ರೇಶ ಘಾಳಿ
ರುದ್ರೇಶ ಘಾಳಿ   

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಅವಳಿನಗರದಲ್ಲಿ ಸ್ವಚ್ಛ ಭಾರತ್ ಮಿಷನ್ 2.0 ಯೋಜನೆ ಅಡಿ ಶೌಚಾಲಯ ಮತ್ತು ಮೂತ್ರಾಲಯಗಳ ನಿರ್ಮಾಣ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. 2024ರ ಜನವರಿಯಲ್ಲಿ ಕಾಮಗಾರಿ ಆರಂಭವಾದಾಗಿನಿಂದ ಮಂಜೂರಾದ 17 ಮೂತ್ರಾಲಯ ಮತ್ತು ಒಂದು ಶೌಚಾಲಯದಲ್ಲಿ 10 ಮೂತ್ರಾಲಯಗಳು ಮಾತ್ರ ಪೂರ್ಣಗೊಂಡಿವೆ.

ಸ್ವಚ್ಛ ಭಾರತ್ ಮಿಷನ್ 2.0 ಯೋಜನೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ₹46.08 ಲಕ್ಷ ಅನುದಾನದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. 18ರಲ್ಲಿ ಸದ್ಯ ಹುಬ್ಬಳ್ಳಿಯ 10 ಕಡೆಗಳಲ್ಲಿ ಮೂತ್ರಾಲಯ ನಿರ್ಮಿಸಲಾಗಿದೆ. ಧಾರವಾಡದ ಮೀನು ಮಾರುಕಟ್ಟೆಯಲ್ಲಿ ಸುಮಾರು ₹25 ಲಕ್ಷ ಅನುದಾನದಲ್ಲಿ ಒಂದು ಹೈಟೆಕ್ ಶೌಚಾಲಯ ನಿರ್ಮಿಸಲಾಗುತ್ತಿದ್ದು, ಕಟ್ಟಡ ನಿರ್ಮಾಣ ಕಾಮಗಾರಿ ಬಹುತೇಕ ಮುಗಿದಿದ್ದು, ಶೀಘ್ರ ಉದ್ಘಾಟನೆ ಆಗಬೇಕಿದೆ.

ಎಲ್ಲೆಲ್ಲಿ ನಿರ್ಮಾಣ?: 

ADVERTISEMENT

ಜನದಟ್ಟಣೆ ಹೆಚ್ಚಿರುವ ಪ್ರದೇಶಗಳನ್ನು ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆಯಿಂದ ಗುರುತಿಸಿ ಮೂತ್ರಾಲಯ ನಿರ್ಮಾಣ ಮಾಡಲಾಗುತ್ತಿದೆ. ಸದ್ಯ ಹುಬ್ಬಳ್ಳಿಯ ಕುಬಸದ ಗಲ್ಲಿ, ಹಳೇ ಹುಬ್ಬಳ್ಳಿ, ಎಸ್‌.ಎಂ. ಕೃಷ್ಣ ನಗರ, ಬೈರಿದೇವರಕೊಪ್ಪ, ಅಮರಗೋಳದ ಎಪಿಎಂಸಿ ಬಳಿ, ಖಾದಿ ಗ್ರಾಮದ್ಯೋಗ ಬಳಿ, ಬೆಂಗೇರಿ ಸಂತೆ ಮೈದಾನ, ಬೃಂದಾವನ ಕಾಲೊನಿ, ಟೌನ್‌ಹಾಲ್‌ ಎದುರು ಪುರುಷರಿಗೆ ಮೂತ್ರಾಲಯ ನಿರ್ಮಿಸಲಾಗಿದೆ.

ಧಾರವಾಡದ ಮಾಳಮಡ್ಡಿ, ಸಪ್ತಾಪುರ, ಪದ್ಮಾವತಿ ಥಿಯೇಟರ್ ಸಮೀಪ, ನೆಹರು ನಗರ, ಕೆಲಗೇರಿ, ಹುಬ್ಬಳ್ಳಿಯ ದುರ್ಗದಬೈಲ್, ಗೋಕುಲ ರಸ್ತೆ, ಶಿರೂರು ಪಾರ್ಕ್ ಬಳಿ ಮೂತ್ರಾಲಯ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ. ಆದರೆ ಇಲ್ಲಿ ಇನ್ನೂ ಮೂತ್ರಾಲಯ ನಿರ್ಮಿಸಿಲ್ಲ. ಮೂತ್ರಾಲಯಗಳ ಕೊರತೆಯಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಅನಿವಾರ್ಯವಾಗಿ ಸಾರ್ವಜನಿಕ ಸ್ಥಳ ಹಾಗೂ ಸಂದಿಗಳಲ್ಲಿ ಮೂತ್ರ ವಿಸರ್ಜನೆ ಮಾಡಿ ಮುಜುಗರ ಅನುಭವಿಸುವಂತಾಗಿದೆ.

ಮೂತ್ರಾಲಯ ನಿರ್ಮಾಣಕ್ಕೆ ಕೆಲವರ ವಿರೋಧ: 

‘ಜನದಟ್ಟಣೆಯಿಂದ ಕೂಡಿದ ಪ್ರದೇಶಗಳಲ್ಲಿ ಮೂತ್ರಾಲಯ ನಿರ್ಮಾಣ ಮಾಡಲಾಗುತ್ತಿದೆ. ಪಾಲಿಕೆಯ ಜಾಗದಲ್ಲಿಯೇ ಮೂತ್ರಾಲಯ, ಶೌಚಾಲಯ ನಿರ್ಮಾಣ ಮಾಡಬೇಕು. ಕೆಲವು ಪ್ರದೇಶಗಳಲ್ಲಿ ಮೂತ್ರಾಲಯ ನಿರ್ಮಾಣಕ್ಕೆ ಸ್ಥಳೀಯರು, ಸುತ್ತಮುತ್ತಲಿನ ನಿವಾಸಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮೂತ್ರಾಲಯ ನಿರ್ಮಾಣದಿಂದ ದುರ್ನಾತ, ಸಾಂಕ್ರಾಮಿಕ ರೋಗಗಳು ಹರಡುತ್ತವೆ ಎಂದು ಬೇರೆ ಕಡೆಗೆ ನಿರ್ಮಿಸುವಂತೆ ಒತ್ತಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉಳಿದ ಏಳು ಮೂತ್ರಾಲಯಗಳ ನಿರ್ಮಾಣ ವಿಳಂಬವಾಗಿದೆ’ ಎಂದು ಎಚ್‌ಡಿಎಂಸಿ ಕಾರ್ಯಪಾಲಕ ಎಂಜಿನಿಯರ್ ವಿಜಯಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸೂಕ್ತ ನಿರ್ವಹಣೆ ಆಗಲಿ:

‘ಅವಳಿ ನಗರದಲ್ಲಿ ಈ ಹಿಂದೆ ನಿರ್ಮಿಸಿದ ಬಹುತೇಕ ಮೂತ್ರಾಲಯ, ಶೌಚಾಲಯಗಳು ಬಳಕೆಗೆ ಯೋಗ್ಯವಾಗಿಲ್ಲ. ಸ್ವಚ್ಛತೆ ಕಾಣದೆ ದುರ್ನಾತ  ಬೀರುತ್ತಿವೆ. ಇವುಗಳ ಹಾಗೂ ಹೊಸದಾಗಿ ನಿರ್ಮಿಸುತ್ತಿರುವ ಮೂತ್ರಾಲಯಗಳನ್ನು ಪ್ರತಿದಿನ ಸ್ವಚ್ಛಗೊಳಿಸಬೇಕು. ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಬೇಕು’ ಎಂದು ಹುಬ್ಬಳ್ಳಿ ನಿವಾಸಿ ಮಹೇಶ ಮೇಲ್ಗಡೆ ಒತ್ತಾಯಿಸಿದರು.

ಸುವರ್ಣಾ ಕಲಕುಂಟ್ಲ
ಸ್ವಚ್ಛ ಭಾರತ ಮಿಷನ್ 2.0 ಯೋಜನೆಯಡಿ ಧಾರವಾಡದ ಮೀನು ಮಾರುಕಟ್ಟೆಯಲ್ಲಿ ನಿರ್ಮಿಸುತ್ತಿರುವ ಶೌಚಾಲಯ

ಅವಳಿ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರಾಲಯಗಳ ನಿರ್ಮಾಣ ಕಾಮಗಾರಿ ನಡೆದಿದೆ. ಮಹಿಳೆಯರಿಗೂ ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯ ನಿರ್ಮಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ರುದ್ರೇಶ ಘಾಳಿ ಆಯುಕ್ತ ಹು–ಧಾ ಮಹಾನಗರ ಪಾಲಿಕೆ

ಧಾರವಾಡದಲ್ಲಿದೆ ಹೈಟೆಕ್ ಶೌಚಾಲಯ ಸ್ವಚ್ಛ ಭಾರತ ಮಿಷನ್‌ 2.0 ಯೋಜನೆಯಡಿ ಧಾರವಾಡದ ಮೀನು ಮಾರುಕಟ್ಟೆ ಬಳಿ ಹೈಟೆಕ್  ಶೌಚಾಲಯ (ಆಕಾಂಕ್ಷಿ ಶೌಚಾಲಯ) ನಿರ್ಮಿಸಲಾಗುತ್ತಿದೆ. ಸ್ನಾನದ ಗೃಹಗಳು ಶವರ್ ಸೌಲಭ್ಯ ಟಚ್‌ಲೆಸ್ ಫ್ಲಶಿಂಗ್ ಹ್ಯಾಂಡ್ ಡ್ರೈಯರ್ ಸ್ತನ್ಯಪಾನ ಕೊಠಡಿಗಳು ಸ್ವಯಂಚಾಲಿತ ಸ್ಯಾನಿಟರಿ ನ್ಯಾಪ್‌ಕಿನ್ ಇನ್ಸಿನರೇಟರ್‌ ಯಂತ್ರ ಅಂಗವಿಕಲರಿಗೆ ಪ್ರತ್ಯೇಕ ಶೌಚಾಲಯ ವ್ಹೀಲ್ ಚೇರ್ ಅನ್ನು ಇದು ಒಳಗೊಂಡಿರಲಿದೆ.

‘ಮಹಿಳೆಯರಿಗೆ ಸಾರ್ವಜನಿಕ ಶೌಚಾಲಯ ನಿರ್ಮಿಸಲಿ’ ‘ಚನ್ನಮ್ಮ ವೃತ್ತ ಮಾರುಕಟ್ಟೆ ಪ್ರದೇಶಗಳಲ್ಲಿ ಸಾರ್ವಜನಿಕ ಶೌಚಾಲಯ ಮೂತ್ರಾಲಯಗಳಿಲ್ಲ. ಇಲ್ಲಿ ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸಂಚರಿಸುತ್ತಾರೆ. ಅದರಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯಗಳ ಕೊರತೆಯಿಂದ ಮಹಿಳೆಯರು ತೀವ್ರ ಸಮಸ್ಯೆ ಅನುಭವಿಸುವಂತಾಗಿದೆ. ಪಾಲಿಕೆಯಿಂದ ಮೊದಲ ಆದ್ಯತೆ ನೀಡಿ ಪ್ರಮುಖ ಸ್ಥಳಗಳಲ್ಲಿ ಮಹಿಳೆಯರಿಗಾಗಿ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು’ ಎಂದು ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ ಸದಸ್ಯೆ ಸುವರ್ಣಾ ಕಲಕುಂಟ್ಲಾ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.