ADVERTISEMENT

ಜೈನರಿಗೆ 2ಬಿ ಮೀಸಲಾತಿಗೆ ಲಲಿತ್‌ ಗಾಂಧಿ ಆಗ್ರಹ

ಜೈನ ಅಲ್ಪಸಂಖ್ಯಾತರಿಗೆ ಸೌಲಭ್ಯ ಕಲ್ಪಿಸಲು ಸಚಿವರ ಜೊತೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2021, 13:21 IST
Last Updated 16 ಮಾರ್ಚ್ 2021, 13:21 IST

ಹುಬ್ಬಳ್ಳಿ: ದೇಶದಲ್ಲಿ ಜೈನ ಸಮುದಾಯದ ಅಲ್ಪಸಂಖ್ಯಾತ ಜನ ಎರಡು ಕೋಟಿಗೂ ಹೆಚ್ಚಿನ ಸಂಖ್ಯೆಯಲ್ಲಿದ್ದರೂ, 2011ರ ಜನಸಂಖ್ಯೆ ಪ್ರಕಾರ ಸರ್ಕಾರದ ಲೆಕ್ಕದಲ್ಲಿ 45 ಲಕ್ಷ ಜನ ಮಾತ್ರ ಇದ್ದೇವೆ. ಇದರಿಂದ ಸರ್ಕಾರದಿಂದ ಸಿಗುವ ಸೌಲಭ್ಯದಲ್ಲಿ ಸಾಕಷ್ಟು ವ್ಯತ್ಯಾಸವಾಗುತ್ತಿದೆ. ಆದ್ದರಿಂದ ನಮ್ಮ ಸಮಾಜಕ್ಕೆ 2 ಬಿ ಮೀಸಲಾತಿ ನೀಡಬೇಕು ಎಂದು ಅಖಿಲ ಭಾರತ ಜೈನ ಅಲ್ಪಸಂಖ್ಯಾತ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಲಲಿತ್ ಗಾಂಧಿ ಆಗ್ರಹಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಆಂತರಿಕವಾಗಿ ನಾವು ಕಲೆ ಹಾಕಿದ ಮಾಹಿತಿಯಲ್ಲಿ ಕರ್ನಾಟಕದಲ್ಲಿ 30 ಲಕ್ಷ, ಮಹಾರಾಷ್ಟ್ರದಲ್ಲಿ 60 ಲಕ್ಷ ಜನ ಜೈನ ಅಲ್ಪಸಂಖ್ಯಾತರು ಇದ್ದಾರೆ. ಆದರೆ, ಸರ್ಕಾರದ ಜೈನ ಅಲ್ಪಸಂಖ್ಯಾತರಿಗೆ ಸೌಲಭ್ಯಗಳನ್ನು ನೀಡುವಾಗ ಇದನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ’ ಎಂದರು.

‘ಜೈನರಿಗೆ ಸೌಲಭ್ಯಗಳನ್ನು ಕಲ್ಪಿಸುವಂತೆ ಕೋರಲು ಸೋಮವಾರ ಬೆಂಗಳೂರಿನಲ್ಲಿ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಶ್ರೀಮಂತ ಪಾಟೀಲ ಅವರೊಂದಿಗೆ ಚರ್ಚಿಸಲಾಗಿದೆ. ರಾಜ್ಯದ ಗ್ರಾಮೀಣ ಪ್ರದೇಶದಲ್ಲಿರುವ ಬಸದಿಗಳ ಜೀರ್ಣೋದ್ದಾರಕ್ಕೆ ಪ್ರತಿ ಬಸದಿಗೆ ₹25 ಲಕ್ಷ ನೀಡುವಂತೆ ಬೇಡಿಕೆ ಸಲ್ಲಿಸಿದ್ದವು. ಆದರೆ ಸರ್ಕಾರ ₹10 ಲಕ್ಷ ನೀಡಲು ಒಪ್ಪಿಕೊಂಡಿದೆ. ಜೈನ ಅಭಿವೃದ್ಧಿ ಮಂಡಳಿ ಆರಂಭಿಸಬೇಕು. ಪುರಾತತ್ವ ಇಲಾಖೆ ಸರ್ವೇಕ್ಷಣೆ ಸಮಯದಲ್ಲಿ ತನಗೆ ಲಭಿಸುವ ಜೈನ ಮೂರ್ತಿಗಳನ್ನು ಸಮಾಜದ ಸುಪರ್ದಿಗೆ ಒಪ್ಪಿಸಿದರೆ ನಾವು ದೇವಸ್ಥಾನದಲ್ಲಿ ನಿರ್ವಹಣೆ ಮಾಡುತ್ತೇವೆ. ಜೈನ ಸಮಾಜದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ವಸತಿ ನಿಲಯಗಳನ್ನು ಆರಂಭಿಸಲು ಅನುದಾನ ನೀಡಬೇಕೆಂದು ಕೋರಿದ್ದೇವೆ’ ಎಂದು ತಿಳಿಸಿದರು.

ADVERTISEMENT

ಜೈನ ಸಮಾಜದ ಮುಖಂಡ ಮಹೇಂದ್ರ ಸಿಂಘಿ ಮಾತನಾಡಿ ‘ನಾವು ಸಮಾಜಕ್ಕೆ ಸಾಕಷ್ಟು ದೇಣಿಗೆ ಸಿಕ್ಕರೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜೈನರಿಗೆ ಸ್ಥಾನಮಾನ ನೀಡಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ನಮ್ಮ ಸಮಾಜದ ಹಲವಾರು ಜನ ಕಾಲ್ನಡಿಗೆ ಮೂಲಕ ರಾಜ್ಯದಾದ್ಯಂತ ಸಂಚರಿಸುತ್ತಾರೆ. ಅವರಿಗೆ ತಂಗಲು ರಾಜ್ಯದಲ್ಲಿ ಅಲ್ಲಲ್ಲಿ ವಿಹಾರಧಾಮಗಳನ್ನು ನಿರ್ಮಿಸಿಕೊಡಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.