
ಹುಬ್ಬಳ್ಳಿ: ದಲಿತ ಸಮುದಾಯ ಹೋರಾಟದ ಚಲನಚಿತ್ರವಾದ ‘ಲ್ಯಾಂಡ್ ಲಾರ್ಡ್’ಗೆ ಶೇ 100ರಷ್ಟು ರಿಯಾಯಿತಿ ನೀಡಬೇಕು ಎಂದು ಆಗ್ರಹಿಸಿ ಸಮತಾಸೇನಾ ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳದ ಸದಸ್ಯರು ತಹಶೀಲ್ದಾರ್‌ಗೆ ಸೋಮವಾರ ಮನವಿ ಸಲ್ಲಿಸಿದರು.
‘ಲಗಾನ್, ಗದರ್, ಕಾಶ್ಮೀರಿ ಫೈಲ್, ಕೇರಳ ಸ್ಟೋರಿ, ಅಸುರನ್, ಕಾಟೇರ್, ಧುರಂದರ್ ಚಿತ್ರದ ಸಾಲಿಗೆ ‘ಲ್ಯಾಂಡ್ ಲಾರ್ಡ್’ ಸಹ ಭಾರತದ ಹೆಮ್ಮೆಯ ಕನ್ನಡ ಭಾಷೆಯ ಚಿತ್ರವಾಗಿದೆ. ಸಮ ಸಮಾಜದ ಹಿತ ಬಯಸುವ, ಅನ್ಯಾಯ, ಅಕ್ರಮ, ಹಿಂಸೆ, ತಾರತಮ್ಯವವನ್ನು ಮನೋಜ್ಞವಾಗಿ ಚಿತ್ರಿಸಿ ಜನರ ಎದುರಿಗೆ ಇಟ್ಟು ಜಾಗೃತರನ್ನಾಗಿ ಮಾಡಿದ್ದು, ಸರ್ಕಾರ ರಿಯಾಯಿತಿ ಘೋಷಿಸಬೇಕು’ ಎಂದು ಸದಸ್ಯರು ಆಗ್ರಹಿಸಿದರು.
‘ಇದು ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ನಿರ್ಮಿಸುವ ಚಿತ್ರವಾಗಿದ್ದು, ಶೋಷಿತ ವರ್ಗದ ಭೂರಹಿತರ ಮಾಹಿತಿ ಹಾಗೂ ಮೇಲ್ವರ್ಗದವರ ಮನಸ್ಥಿತಿಯನ್ನು ಚಿತ್ರದಲ್ಲಿ ವಿವರಿಸಲಾಗಿದೆ. ಪ್ರಸ್ತುತ ದಿನಮಾನಕ್ಕೆ ಸರಿಹೊಂದುವ ವಿಷಯವನ್ನು ಆಯ್ದುಕೊಂಡು ಸೂಕ್ಷ್ಮವಾಗಿ ಕಥೆಯನ್ನು ಹೆಣೆಯಲಾಗಿದೆ. ಸಮಾಜದ ಪ್ರತಿಯೊಬ್ಬರೂ ತಿಳಿದುಕೊಳ್ಳುವ ವಿಷಯ ಅದರಲ್ಲಿದ್ದು, ಸರ್ಕಾರ ಪರಿಶೀಲನೆ ನಡೆಸಿ ರಿಯಾಯಿತಿಗೆ ಮುಂದಾಗಬೇಕು’ ಎಂದು ಮುಖಂಡ ಗುರುನಾಥ ಉಳ್ಳಿಕಾಶಿ ಹೇಳಿದರು.
ಶಂಕರ ಅಜಮನಿ, ಹಣಮಂತ ತಳವಾರ, ಮಂಜುನಾಥ ಸಾಬೂಜಿ, ಪ್ರದೀಪ ಎಚ್.ಬಿ., ರಫಿಕ್ ಮೇಲಮನಿ, ರಾಘವೇಂದ್ರ ಚಲವಾದಿ, ರಮೇಶ ವಡಲಪಲ್ಲಿ ಹಾಗೂ ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.