ADVERTISEMENT

ಟ್ರ್ಯಾಕ್ಟರ್‌ಗಳಿಗೆ ಬೆಂಕಿ | ನುಸುಳುಕೋರರ ಕೃತ್ಯ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 8:20 IST
Last Updated 14 ನವೆಂಬರ್ 2025, 8:20 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: 'ಬಾಗಲಕೋಟೆಯ ರಬಕವಿ-ಬನಹಟ್ಟಿಯ ಸಮೀರವಾಡಿಯಲ್ಲಿ ರೈತರು ನಡೆಸುತ್ತಿದ್ದ ಹೋರಾಟದಲ್ಲಿ ಕಿಡಿಗೇಡಿ ನುಸುಳುಕೋರರು ಕಬ್ಬು ಹಾಗೂ ಟ್ರ್ಯಾಕ್ಟರ್‌ಗಳನ್ನು ಸುಟ್ಟಿದ್ದು ರಾಜ್ಯ ಸರ್ಕಾರದ ಕಾನೂನು ಸುವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ' ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.

'ಕಬ್ಬು ಹೋರಾಟ ರೈತರ ಸಮಸ್ಯೆಗ ಪರಿಹಾರ ನೀಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಲು ಮುಂದಾಗಬೇಕಿತ್ತು. ಪ್ರತಿಭಟನೆ ವೇಳೆ ನುಸುಳುಕೋರ ಕಿಡಿಗೇಡಿಗಳು ಬಂದು ವಿದ್ವಂಸಕ ಕೃತ್ಯ ಎಸಗುವವರೆಗೆ ಸರ್ಕಾರ ಏನು ಮಾಡುತ್ತಿತ್ತು' ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

'ನಿಜವಾದ ರೈತರಿಗೆ ಹೊಲದಲ್ಲಿ ಬೆಳೆ ಬೆಳೆಯುವುದು ಎಷ್ಟು ಕಷ್ಟ ಎನ್ನುವ ಪರಿಜ್ಞಾನವಿರುತ್ತದೆ. ಬೆವರಿಗೆ ತಕ್ಕ ಫಲ ಹಾಗೂ ಹಣದ ಅಗತ್ಯ ಅವರಿಗೆ ಇರುತ್ತದೆ. ಅವರ‌್ಯಾರು ಇಂಥ ಕೃತ್ಯ ಎಸಗುವುದಿಲ್ಲ. ಪೊಲೀಸ್ ಅಧಿಕಾರಿ ಮೇಲೂ ಹಲ್ಲೆ ನಡೆಸಲಾಗಿದೆ. ಕಿಡಿಗೇಡಿಗಳ ಕೃತ್ಯ ಎಂದು ರಾಜ್ಯ ಸರ್ಕಾರವೇ ಹೇಳಿಕೆ ನೀಡುತ್ತದೆ ಎಂದರೆ, ಪರಿಸ್ಥಿತಿಯನ್ನು ಅಲ್ಲಿವರೆಗೆ ಕೊಂಡೊಯ್ಯಲು ಅವಕಾಶ ಮಾಡಿಕೊಟ್ಟಿದ್ದು ಯಾಕೆ?' ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.