ADVERTISEMENT

ಕಡಲೆ ಬೆಳೆಗೆ ಕೀಟಬಾಧೆ; ರಿಯಾಯತಿ ದರದಲ್ಲಿ ಕೀಟನಾಶಕ ಸಿಗದೆ ರೈತರ ಪರದಾಟ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 5:01 IST
Last Updated 19 ನವೆಂಬರ್ 2021, 5:01 IST
ನವಲಗುಂದ ತಾಲ್ಲೂಕಿನಲ್ಲಿ ಬೆಳೆದು ನಿಂತ ಕಡಲೆ ಬೆಳೆ
ನವಲಗುಂದ ತಾಲ್ಲೂಕಿನಲ್ಲಿ ಬೆಳೆದು ನಿಂತ ಕಡಲೆ ಬೆಳೆ   

ನವಲಗುಂದ: ಹಿಂಗಾರು ಮಳೆ ಚೆನ್ನಾಗಿ ಸುರಿದ ಪರಿಣಾಮ ತಾಲ್ಲೂಕಿನ ರೈತರು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬಿತ್ತನೆ ಮಾಡಿದ್ದಾರೆ. ಆದರೆ, ಮೋಡ ಕವಿದ ವಾತಾವರಣ, ಮಳೆಯಿಂದಾಗಿ ಕೀಟಬಾಧೆಯಿಂದಾಗಿ ನಷ್ಟದ ಭೀತಿ ಎದುರಿಸುತ್ತಿದ್ದಾರೆ.

ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಔಷಧ ಲಭ್ಯ ಇಲ್ಲದಿರುವುದು ರೈತರ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.

ಪ್ರಮುಖ ಹಿಂಗಾರು ಬೆಳೆಗಳಾದ ಕಡಲೆ, ಕುಸುಬೆ ಹಾಗೂ ಜೋಳ ಅತಿವೃಷ್ಟಿ– ಅಕಾಲಿಕ ಮಳೆಯ ನಡುವೆಯೂ ಮೊಳಕೆಯೊಡೆದಿವೆ. ಕಾಂಡಕೊರಕ ಕೀಟಬಾಧೆಯಿಂದಾಗಿ ಕಡಲೆ ಬೆಳೆ ಹಳದಿಗೆ ತಿರುಗಿದೆ. ಕೀಟನಾಶಕ ಪಡೆದುಕೊಳ್ಳಲು ರೈತ ಸಂಪರ್ಕ ಕೇಂದ್ರಕ್ಕೆ ಹೋದರೆ, ‘ಈ ವರ್ಷ ಸಬ್ಸಿಡಿ ಅನುದಾನ ಬಂದಿಲ್ಲ, ಆದ್ದರಿಂದ ಇಂಡೆಂಟ್ ಹಾಕಿಲ್ಲ’ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆಂದು ರೈತರು ದೂರಿದರು.

ADVERTISEMENT

ಖಾಸಗಿ ಅಂಗಡಿಗಳಲ್ಲಿ ಕೀಟನಾಶಕ ಖರೀದಿ ಮಾಡಬೇಕೆಂದರೆ ಗುಣಮಟ್ಟದ ಖಾತ್ರಿ ಇರುವುದಿಲ್ಲ, ಅಲ್ಲದೆ ದುಪ್ಪಟ್ಟು ಹಣ ಕೊಡಬೇಕಾಗುತ್ತದೆ. ಉದ್ರಿ ಪಡೆದರೆ ಬೆಳೆ ಬಂದ ನಂತರ ದುಪ್ಪಟ್ಟು ಹಣ ಕೊಡಬೇಕಾಗುತ್ತದೆ. ಸಬ್ಸಿಡಿ ದರದಲ್ಲಿ ಕೀಟನಾಶಕ ಕೊಡುವುದಿಲ್ಲ ಎಂದು ಮೊದಲೇ ಪರ್ಯಾಯದ ಬಗ್ಗೆ ಯೋಚಿಸಬಹುದಿತ್ತು, ಈಗ ರೈತರಿಗೆ ಆಗುವ ನಷ್ಟದ ಹೊಣೆಯನ್ನು ಸರ್ಕಾರವೇ ಹೊರಬೇಕು ಎನ್ನುತ್ತಾರೆ ಪ್ರಗತಿಪರ ರೈತ ಪ್ರಕಾಶ ಶಿಗ್ಲಿ.

ರೈತರಿಗೆ ಔಷಧಿ ವಿತರಣೆ ಮಾಡದ ರೈತ ಸಂಪ‍ರ್ಕ ಕೇಂದ್ರವನ್ನು ಮುಚ್ಚುವುದೇ ವಾಸಿ ಎನ್ನುತ್ತಾರೆ ಅವರು.

‘ಅನುದಾನ ಬಿಡುಗಡೆಯಾಗಿಲ್ಲ’

ಈ ರೀತಿಯ ಸಮಸ್ಯೆಯಾಗಬಹುದೆಂದು ಊಹಿಸಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ಪತ್ರ ಬರೆದಿದ್ದೆವು. ಅದರಂತೆ ಧಾರವಾಡದ ಜಂಟಿ ನಿರ್ದೇಶಕರು ಬೆಂಗಳೂರಿನ ಕೃಷಿ ನಿರ್ದೇಶಕರಿಗೆ ಆಗಸ್ಟ್‌ 18ರಂದೇ ಪತ್ರ ಬರೆದು 2021-22 ನೇ ಸಾಲಿನ ಸಸ್ಯ ಸಂರಕ್ಷಣಾ ಯೋಜನೆಯಡಿ ಕೀಟನಾಶಕಗಳ ಬೇಡಿಕೆ ಸಲ್ಲಿಸಲು ಅನುಮತಿ ಮತ್ತು ₹ 1 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು. ಆದರೆ ಇಲ್ಲಿಯವರೆಗೆ ಕೃಷಿ ನಿರ್ದೇಶಕರಿಂದ ಒಪ್ಪಿಗೆ ಪತ್ರ ಬಂದಿಲ್ಲದ ಕಾರಣ ನಾವು ಕೀಟನಾಶಕ ಕಂಪನಿಗಳಿಗೆ ಬೇಡಿಕೆ ಸಲ್ಲಿಸಿಲ್ಲ. ರೈತರಿಗೆ ಔಷಧಿ ಕೊಡಲು ಆಗುತ್ತಿಲ್ಲ. ಒಪ್ಪಿಗೆ ಬಂದ ನಂತರ ಬೇಡಿಕೆ ಸಲ್ಲಿಸಿ ರಿಯಾಯತಿ ದರದಲ್ಲಿ ಪೂರೈಕೆ ಮಾಡಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಶ್ರೀಕಾಂತ ಚಿಮ್ಮಲಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ವಿಷಯವನ್ನು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ಗಮನಕ್ಕೂ ತಂದಿದ್ದೂ, ಕೃಷಿ ಸಚಿವ ಬಿ.ಸಿ.ಪಾಟೀಲ ಅವರೊಂದಿಗೂ ಚರ್ಚೆ ಮಾಡಿ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.