ADVERTISEMENT

ರೈಲ್ವೆ ಪ್ರಾಧಿಕಾರದ ಪ್ರದೇಶ ಲೀಸ್‌: ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2024, 16:12 IST
Last Updated 18 ಜನವರಿ 2024, 16:12 IST

ಹುಬ್ಬಳ್ಳಿ: ಭಾರತೀಯ ರೈಲ್ವೆ ಭೂ ಅಭಿವೃದ್ಧಿ ಪ್ರಾಧಿಕಾರವು ನಗರದ ಎಂಟಿಎಸ್‌ ಕಾಲೊನಿಯ 13 ಎಕರೆ ಪ್ರದೇಶದ ಲೀಸ್‌ನ ಇ–ಬಿಡ್‌ ಅರ್ಜಿ ಸಲ್ಲಿಸುವ ಅವಧಿಯನ್ನು ಫೆ.1ಕ್ಕೆ ಮುಂದೂಡಿದೆ. ಈ ಹಿಂದೆ ಇ–ಬಿಡ್‌ನ ಬಹಿರಂಗ ಹರಾಜುಗೆ ಅರ್ಜಿ ಸಲ್ಲಿಸಲು ಜ.18 ಕೊನೆಯ ದಿನ ನಿಗದಿ ಪಡಿಸಲಾಗಿತ್ತು. 

’ಲೀಸ್‌ಗೆ ಸಂಬಂಧಿಸಿದ ಎಂಟಿಎಸ್‌ ಕಾಲೊನಿಯ ಪ್ರದೇಶವನ್ನು ಪರಿಶೀಲಿಸಬೇಕು. ಹೀಗಾಗಿ ಇನ್ನೂ ಕೆಲ ದಿನ ಸಮಯ ಬೇಕು ಎಂದು ರಿಯಲ್‌ ಎಸ್ಟೆಟ್‌ ಉದ್ದಿಮೆದಾರರು ಮನವಿ ಮಾಡಿದ ಕಾರಣ, ಪ್ರದೇಶದ ಲೀಸ್‌ನ ಇ–ಬಿಡ್‌ ಅವಧಿಯನ್ನು ಫೆ.1ಕ್ಕೆ ಮುಂದೂಡಲಾಗಿದೆ‘ ಎಂದು ಭಾರತೀಯ ರೈಲ್ವೆ ಭೂ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಯೊಬ್ಬರು ’ಪ್ರಜಾವಾಣಿ’ಗೆ ಮಾಹಿತಿ ನೀಡಿದರು. 

’ಎಂಟಿಎಸ್‌ ಪ್ರದೇಶದ ಲೀಸ್‌ಗೆ ಸಂಬಂಧಿಸಿದಂತೆ ಕಳೆದ ನ.21ರಂದು ಪ್ರಾಧಿಕಾರವು ಸೂಚಿಸಿದಂತೆ ₹83 ಕೋಟಿಗೆ 99 ವರ್ಷ ಲೀಸ್‌ ಅವಧಿ. ಈ ಅವಧಿ ಮುಗಿದ ನಂತರ ನಿಯಮಗಳ ಅನ್ವಯ ಮತ್ತೆ ರೈಲ್ವೆ ಭೂ ಅಭಿವೃದ್ಧಿ ಪ್ರಾಧಿಕಾರಕ್ಕೆ ಆ ಪ್ರದೇಶವನ್ನು ಎಂದಿನಂತೆ ಬಿಟ್ಟುಕೊಡಬೇಕು. ಈ ಎಲ್ಲಾ ನಿಯಮಗಳು ಫೆ.1ರಂದು ನಡೆಯುವ ಇ–ಬಿಡ್‌ ಪ್ರಕ್ರಿಯೆಗೂ ಅನ್ವಯಿಸುತ್ತವೆ’ ಎಂದು ತಿಳಿಸಿದರು. 

ADVERTISEMENT

’ಪ್ರಾಧಿಕಾರವು ನಿಗದಿ ಪಡಿಸಿದ ಮೌಲ್ಯಕ್ಕಿಂತ ಹೆಚ್ಚು ಹಣಕ್ಕೆ ಯಾರು ಬಿಡ್‌ ಮಾಡುತ್ತಾರೆಯೂ ಅವರಿಗೆ ನಿಯಮದನ್ವಯ ಪ್ರದೇಶವನ್ನು ಲೀಸ್‌ಗೆ ನೀಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರ ಸೂಚಿಸಿದ ಎಲ್ಲಾ ನಿಯಮಗಳು ಅನ್ವಯಿಸುತ್ತವೆ. ಕೇಂದ್ರ ಸರ್ಕಾರದ ಸೂಚನೆಯಂತೆ ಸಾರ್ವಜನಿಕರ ಬಳಕೆಗಾಗಿ 99 ವರ್ಷಗಳ ಅವಧಿಯ ತನಕವೂ ಪ್ರಾಧಿಕಾರಕ್ಕೆ ಸಂಬಂಧಿಸಿದ ಭೂಮಿಯನ್ನು ಲೀಸ್‌ಗೆ ಕೊಡಬಹುದು’ ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.