ADVERTISEMENT

ಮಗು ಶವ ಬಿಟ್ಟು ಪ್ರಿಯಕರನೊಂದಿಗೆ ಪರಾರಿ

ಕಿಮ್ಸ್‌ ಆಸ್ಪತ್ರೆಯಲ್ಲಿ ಘಟನೆ: ತಂದೆಗೆ ಮಗು ಮೃತದೇಹ ಒಪ್ಪಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 9:41 IST
Last Updated 23 ಆಗಸ್ಟ್ 2019, 9:41 IST
ಪೂಜಾ ತಾಳುಕರ್
ಪೂಜಾ ತಾಳುಕರ್   

ಹುಬ್ಬಳ್ಳಿ: ಅನಾರೋಗ್ಯದಿಂದ ಬಳಲುತ್ತಿದ್ದಾಳೆಂದು ತನ್ನ 4 ವರ್ಷದ ಮಗಳನ್ನು ಕಿಮ್ಸ್‌ ಆಸ್ಪತ್ರೆಗೆ ಕರೆತಂದಿದ್ದ ತಾಯಿ, ಮಗು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ ಬಳಿಕ, ಶವವನ್ನು ಅಲ್ಲೇ ಬಿಟ್ಟು ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ.

ಆ. 20ರಂದು ಈ ಘಟನೆ ನಡೆದಿದೆ. ಮಗುವಿನ ತಂದೆಯನ್ನು ಪತ್ತೆ ಹಚ್ಚಿರುವಗೋಕುಲ ರಸ್ತೆ ಠಾಣೆ ಪೊಲೀಸರು, ಮೃತದೇಹವನ್ನು ಗುರುವಾರ ಅವರಿಗೆ ಒಪ್ಪಿಸಿದ್ದಾರೆ. ತಲೆ ಮರೆಸಿಕೊಂಡಿರುವ ತಾಯಿ ಪೂಜಾ ತಾಳುಕರ್ ಮತ್ತು ಆಕೆಯ ಪ್ರಿಯಕರನಿಗಾಗಿ ಬಲೆ ಬೀಸಿದ್ದಾರೆ.

ಮನೆ ಬಿಟ್ಟು ಬಂದಿದ್ದಳು:

ADVERTISEMENT

‘ಬೆಳಗಾವಿಯ ಪೂಜಾ ಎಂಟು ವರ್ಷದ ಹಿಂದೆ ರಾಜು ತಾಳುಕರ್ ಎಂಬುವರನ್ನು ಮದುವೆಯಾಗಿದ್ದಳು. ಬೇರೊಬ್ಬ ವ್ಯಕ್ತಿ ಜತೆ ಸಂಬಂಧ ಹೊಂದಿದ್ದ ಆಕೆ, 20 ದಿನದ ಹಿಂದೆ ಇಬ್ಬರು ಮಕ್ಕಳೊಂದಿಗೆ ಮನೆ ಬಿಟ್ಟು ಬಂದಿದ್ದಳು’ ಎಂದು ಗೋಕುಲ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಡಿ.ಪಿ. ನಿಂಬಾಳ್ಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಿಯಕರನೊಂದಿಗೆ ಗೋಕುಲ ಗ್ರಾಮದಲ್ಲಿ ಬಾಡಿಗೆ ಮನೆಯೊಂದರಲ್ಲಿ ಇಬ್ಬರೂ ವಾಸವಾಗಿದ್ದರು. ಆ. 20ರಂದು ಮಧ್ಯಾಹ್ನ 3ರ ಸುಮಾರಿಗೆ ಸ್ಥಳೀಯ ಕ್ಲಿನಿಕ್‌ಗೆ ಮಗಳನ್ನು ಕರೆದೊಯ್ದಿದ್ದ ಇಬ್ಬರೂ, ಮಗಳು ಅನಾರೋಗ್ಯದಿಂದ ಬಳಲುತ್ತಿದ್ದಾಳೆ ಎಂದು ಹೇಳಿದ್ದರು. ಮಗುವಿನ ನಾಡಿ ಮಿಡಿತ ಪರೀಕ್ಷಿಸಿದ್ದ ವೈದ್ಯರು, ಕಿಮ್ಸ್‌ಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದರು’ ಎಂದು ಹೇಳಿದರು.

‘ಸಂಜೆ 4ರ ಹೊತ್ತಿಗೆ ಕಿಮ್ಸ್‌ನ ತುರ್ತು ಚಿಕಿತ್ಸಾ ವಿಭಾಗಕ್ಕೆ ಮಗುವನ್ನು ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ತಪಾಸಣೆ ನಡೆಸಿದ ವೈದ್ಯರು, ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಎಂಎಲ್‌ಸಿ ಮಾಡಿಸುವಂತೆ ಸೂಚಿಸಿ, ವಿಷಯವನ್ನು ಪೊಲೀಸರ ಗಮನಕ್ಕೆ ತರುವಂತೆ ಸಿಬ್ಬಂದಿಗೆ ಹೇಳಿದ್ದಾರೆ’ ಎಂದು ತಿಳಿಸಿದರು.

‘ಇದರಿಂದ ಭಯಗೊಂಡ ಇಬ್ಬರೂ, ತಮ್ಮದು ಅನೈತಿಕ ಸಂಬಂಧ ಎಂದು ಗೊತ್ತಾಗುತ್ತದೆ ಅಂದುಕೊಂಡು, ಮಗುವಿನ ಶವವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಶವ ಕೊಂಡೊಯ್ಯಲು ಯಾರೂ ಬಾರದೆ ಇದ್ದಾಗ, ಪೊಲೀಸರಿಗೆ ವಿಷಯ ತಿಳಿಸಿದ ಆಸ್ಪತ್ರೆ ಸಿಬ್ಬಂದಿ, ಶವವನ್ನು ಶವಾಗಾರದಲ್ಲಿ ಇಟ್ಟಿದ್ದರು’ ಎಂದು ಹೇಳಿದರು.

ಕ್ಯಾಮೆರಾದಲ್ಲಿ ಮುಖ ಪತ್ತೆ:

‘ಪೂಜಾ ಮತ್ತು ಆಕೆಯ ಪ್ರಿಯಕರ ಮಗುವನ್ನು ಆಸ್ಪತ್ರೆಗೆ ಕರೆತಂದ ದೃಶ್ಯಗಳು ಆಸ್ಪತ್ರೆಯಲ್ಲಿರುವ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಇಬ್ಬರ ಭಾವಚಿತ್ರಗಳನ್ನು ಎಲ್ಲಾ ಠಾಣೆಗಳಿಗೆ ಕಳಿಸಿದಾಗ, ಪೂಜಾ ಊರು ಬೆಳಗಾವಿ ಎಂದು ಗೊತ್ತಾಯಿತು’ ಎಂದು ತಿಳಿಸಿದರು.

‘ಆಕೆಯ ತವರು ಮನೆಯನ್ನು ಪತ್ತೆ ಹಚ್ಚಿ ವಿಷಯ ತಿಳಿಸಿದಾಗ, ಪೂಜಾ ಮನೆ ಬಿಟ್ಟು ಹೋಗಿರುವ ಬಗ್ಗೆ ಕುಟುಂಬದ ಸದಸ್ಯರು ತಿಳಿಸಿದರು. ಅಲ್ಲದೆ, ಮಗಳು ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲು ಆಕೆಯ ತಂದೆ ಬೆಳಗಾವಿಗೆ ಹೋಗಿದ್ದರು. ಬಳಿಕ, ತಂದೆ ಹಾಗೂ ‌ಪತಿ ರಾಜು ತಾಳುಕರ್ ಅವರನ್ನು ಹುಬ್ಬಳ್ಳಿಗೆ ಕರೆಯಿಸಿ, ಮಗುವಿನ ಶವವನ್ನು ಹಸ್ತಾಂತರಿಸಲಾಯಿತು’ ಎಂದು ಹೇಳಿದರು.

‘ಸಾವಿಗೆ ಕಾರಣ ಗೊತ್ತಾಗಿಲ್ಲ’

‘ಮಗು ಅನಾರೋಗ್ಯದಿಂದ ಮೃತಪಟ್ಟಿದೆಯೇ ಎಂಬುದರ ಬಗ್ಗೆ ಅನುಮಾನವಿದೆ. ಹಾಗಾಗಿ, ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದೇವೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ, ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ. ತಲೆ ಮರೆಸಿಕೊಂಡಿರುವ ಪೂಜಾ ತಾಳುಕರ್ ಹಾಗೂ ಪ್ರಿಯಕರನಿಗಾಗಿ ಹುಡುಕಾಟ ನಡೆದಿದೆ’ ಎಂದು ಇನ್‌ಸ್ಪೆಕ್ಟರ್ ಡಿ.ಪಿ. ನಿಂಬಾಳ್ಕರ್ ತಿಳಿಸಿದರು.

‘ಪೂಜಾ ಜತೆಯಲ್ಲಿದ್ದ ವ್ಯಕ್ತಿ ಯಾರು? ಆತ ಎಲ್ಲಿಯವನು? ಹಿನ್ನೆಲೆ ಏನು? ಎಂಬುದು ಗೊತ್ತಾಗಿಲ್ಲ. ಕೆಲವರು ಆತನ ಹೆಸರು ದಾದಾಪೀರ್ ಎಂದು ಹೇಳುತ್ತಿದ್ದಾರೆ. ಇಬ್ಬರನ್ನೂ ಪತ್ತೆ ಹಚ್ಚಿದ ಬಳಿಕ, ಪೂರ್ವಾಪರ ಗೊತ್ತಾಗಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.