
ಕುಂದಗೋಳ: ‘ಸರಿಯಾದ ದಾಖಲೆಯಿಲ್ಲದೆ ಅಧಿಕಾರಿಗಳ ವಿರುದ್ಧ ಆರೋಪ ಮಾಡುವುದು ಸರಿಯಲ್ಲ. ಸುಳ್ಳು ಆರೋಪ ಮಾಡಿದರೆ ಪ್ರಕರಣ ದಾಖಲಾಗುವ ಸಾಧ್ಯತೆ ಇರುತ್ತದೆ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಜಿ.ಎಸ್.ಭಾರತಿ ಹೇಳಿದರು.
ಕುಬಿಹಾಳದ ಗ್ರಾಮದ ಬಸವೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಶುಕ್ರವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನ ಕುಬಿಹಾಳ ಗ್ರಾಮದ ಯುವಕನೊಬ್ಬ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಭ್ರಷ್ಟಾಚಾರ ನಡೆದಿದೆ. ಅನುದಾನ ತಡೆಹಿಡಿಯಬೇಕು ಹಾಗೂ ಇಚ್ಚಾಮರಣ ಕೊರಿ ರಾಷ್ಟ್ರಪತಿಗೆ ಪತ್ರ ಬರೆದಿದ್ದನು.
ನ್ಯಾಯಾಧೀಶರು ಗ್ರಾಮದಲ್ಲಿ ಸಭೆ ನಡೆಸಿ, ಯುವಕನ ಸಮಸ್ಯೆಗಳನ್ನು ಆಲಿಸಿ, ಕಾನೂನಿನ ಅರಿವು ಮೂಡಿಸಿದರು.
‘ಆರೋಪಗಳಿಗೆ ಸರಿಯಾದ ದಾಖಲೆ ನೀಡುವಂತೆ ಯುವಕನಿಗೆ ನ್ಯಾಯಾಧೀಶರು ಸೂಚಿಸಿದರು. ಯುವಕ ದಾಖಲೆ ನೀಡಲಿಲ್ಲ. ಆರ್‌ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸಿ, ದಾಖಲೆ ಪಡೆದು ಸಲ್ಲಿಸುವಂತೆ ಸೂಚಿಸಿದರು.
‘ದೇಶದಲ್ಲಿರುವ ಸಮಸ್ಯೆಗಳಿಗೆ ಆತ್ಮಹತ್ಯೆ ಅಥವಾ ಇಚ್ಛಾಮರಣ ಪರಿಹಾರವಲ್ಲ. ಕಾನೂನಾತ್ಮಕ ಹೋರಾಟವೇ ಏಕೈಕ ಮಾರ್ಗ’ ಎಂದರು.
ಗ್ರಾಮಸ್ಥರು ಕೆರೆ ಅಭಿವೃದ್ದಿ, ಗಟಾರು ಸ್ವಚ್ಛತೆ ಸಮಸ್ಯೆ, ವಸತಿ ರಹಿತರಿಗೆ ದೊರೆಯದ ನಿವೇಶನ ಕುರಿತು ದೂರು ನೀಡಿದರು. ಆಗ ನ್ಯಾಯಾಧೀಶರು, ಈ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಿ, ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮಳಲಿ ಗ್ರಾಮ ಪಂಚಾಯಿತಿಯ ನವಗ್ರಾಮದ ಸಮಸ್ಯೆಗಳನ್ನೂ ಪರಿಹರಿಸುವಂತೆ ಸೂಚಿಸಿದರು.
'ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು' ಎಂದು ಸೂಚಿಸಿದರು.
ಜಿ.ಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಭಾಗಿ, ಜಿ.ಪಂ.ಯೋಜನಾಧಿಕಾರಿ ದೀಪಕ್ ಮಡಿವಾಳರ, ತಹಶೀಲ್ದಾರ್ ರಾಜು ಮಾವರಕರ, ತಾ.ಪಂ ಇ.ಒ ಜಗದೀಶ ಕಮ್ಮಾರ, ಸಮೀರ ಮುಲ್ಲಾ, ಇಮ್ರಾನ್ ಪಠಾಣ ಹಾಗೂ ಕುಬಿಹಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು ಪಿಡಿಒಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.