
ಹುಬ್ಬಳ್ಳಿ: ನಗರದ ವಿಮಾನ ನಿಲ್ದಾಣದ ಕಾಂಪೌಂಡ್ ಹಾಗೂ ಗಾಮನಗಟ್ಟಿ ರಸ್ತೆ ಬಳಿ ಕಾಣಿಸಿಕೊಂಡ ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಿರುವ, ಮೈಸೂರಿನ ವಿಶೇಷ ಕಾರ್ಯಾಚರಣೆ ಪಡೆಗೆ ವಿಮಾನ ನಿಲ್ದಾಣದ ಆವರಣದೊಳಗೆ ಚಿರತೆ ಓಡಾಡುತ್ತಿರುವುದು ಖಾತ್ರಿಯಾಗಿದೆ.
ಬೆಂಗಳೂರಿನ ಬನ್ನೇರುಘಟ್ಟ ಹಾಗೂ ಮೈಸೂರಿನ ಪ್ರಾಣಿ ಸಂಗ್ರಹಾಲಯದಿಂದ ಎರಡು ಥರ್ಮಲ್ ಡ್ರೋನ್‌ಗಳನ್ನು ತರಿಸಲಾಗಿದ್ದು, ಸೋಮವಾರ ಮಧ್ಯರಾತ್ರಿ ನಡೆಸಿದ ಕಾರ್ಯಾಚರಣೆ ವೇಳೆ ಅದರಲ್ಲಿ ಚಿರತೆ ಚಲನವಲನ ಸೆರೆಯಾಗಿದೆ. ಕೂಂಬಿಂಗ್ ನಡೆಸಿ ಸೆರೆ ಹಿಡಿಯಲು ಯೋಜನೆ ರೂಪಿಸುವಷ್ಟರಲ್ಲಿ, ಚಿರತೆ ಬೇರೆಡೆಗೆ ಸ್ಥಳಾಂತರವಾಯಿತು ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದರು.
‘ತಜ್ಞ ಸಿಬ್ಬಂದಿ ಹಾಗೂ ವಿಶೇಷ ಪಡೆಯೊಂದಿಗೆ ಎರಡು ದಿನಗಳಿಂದ ಚಿರತೆ ಸೆರೆ ಕಾರ್ಯಾಚರಣೆ ನಡೆಯುತ್ತಿದೆ. ಥರ್ಮಲ್ ಡ್ರೋನ್‌ಗಳಿಂದ ರಾತ್ರಿ ವೇಳೆ ಚಿರತೆಯನ್ನು ನಿಖರವಾಗಿ ಪತ್ತೆ ಹಚ್ಚಬಹುದು. ಮಂಗಳವಾರ ಮಧ್ಯಾಹ್ನ ಹಾಗೂ ರಾತ್ರಿಯೂ ಡ್ರೋನ್ ಮೂಲಕ ಕಾರ್ಯಾಚರಣೆ ನಡೆಸಿ, ಅದು ಓಡಾಡುವ ಸ್ಥಳಗಳನ್ನು ಗುರುತಿಸಿದ್ದೇವೆ’ ಎಂದು ಹುಬ್ಬಳ್ಳಿ ಅರಣ್ಯ ವಲಯಾಧಿಕಾರಿ ಆರ್.ಎಸ್. ಉಪ್ಪಾರ ತಿಳಿಸಿದರು.
‘ಗದುಗಿನ ಪ್ರಾಣಿ ಸಂಗ್ರಹಾಲಯದಿಂದ ಇಬ್ಬರು ಅರವಳಿಕೆ ತಜ್ಞರು, ಬೆಳಗಾವಿ ಪ್ರಾಣಿ ಸಂಗ್ರಹಾಲಯದ ಪಶುವೈದ್ಯರು, ಮೈಸೂರು, ಬೆಂಗಳೂರು ಕಾರ್ಯಪಡೆ ಹಾಗೂ ಸ್ಥಳೀಯ ಸಿಬ್ಬಂದಿ ಸೇರಿ 50ಕ್ಕೂ ಹೆಚ್ಚು ಮಂದಿ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ’ ಎಂದರು.
‘ವಿಮಾನ ನಿಲ್ದಾಣದ ಒಳಗೆ ಸುಮಾರು 200 ಎಕರೆಯಷ್ಟು ಜಾಗ ಬಳಕೆಯಾಗದೆ ಹಾಗೆಯೇ ಇದೆ. ಅಲ್ಲಿ ನವಿಲು, ಮುಳ್ಳು ಹಂದಿ, ಇಲಿ, ಹೆಗ್ಗಣ, ಕಾಡು ಬೆಕ್ಕುಗಳು ಸಾಕಷ್ಟು ಪ್ರಮಾಣದಲ್ಲಿವೆ. ಹೀಗಾಗಿ ಚಿರತೆಗೆ ಅವು ಸುಲಭವಾಗಿ ಆಹಾರವಾಗುತ್ತಿದ್ದು, ನಿಶ್ಚಿಂತೆಯಾಗಿ ಓಡಾಡಿಕೊಮಡಿದೆ. ಬೇಟೆಯಾಡಿದ ಪ್ರಾಣಿ, ಪಕ್ಷಿಗಳ ಕಳೆಬರಗಳು ದೊರಕಿವೆ’ ಎಂದು ಉಪ್ಪಾರ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.