ADVERTISEMENT

ಹುಬ್ಬಳ್ಳಿ: ಬೋನಿಗೆ ಬೀಳದ ಚಿರತೆ; ಆತಂಕದಲ್ಲಿ ಜನ

ಗಾಮನಗಟ್ಟಿ, ವಿಮಾನ ನಿಲ್ದಾಣ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆ ಓಡಾಟ

ಶಿವರಾಯ ಪೂಜಾರಿ
Published 5 ಜನವರಿ 2026, 4:09 IST
Last Updated 5 ಜನವರಿ 2026, 4:09 IST
ಚಿರತೆ ಸೆರೆಗೆ ಅರಣ್ಯ ಇಲಾಖೆಯಿಂದ ಹುಬ್ಬಳ್ಳಿ ವಿಮಾನ ನಿಲ್ದಾಣದ ಪ್ರದೇಶದಲ್ಲಿ ಬೋನು ಅಳವಡಿಸಲಾಗಿದೆ
ಚಿರತೆ ಸೆರೆಗೆ ಅರಣ್ಯ ಇಲಾಖೆಯಿಂದ ಹುಬ್ಬಳ್ಳಿ ವಿಮಾನ ನಿಲ್ದಾಣದ ಪ್ರದೇಶದಲ್ಲಿ ಬೋನು ಅಳವಡಿಸಲಾಗಿದೆ   

ಹುಬ್ಬಳ್ಳಿ: ಸಮೀಪದ ಗಾಮನಗಟ್ಟಿ ಕೈಗಾರಿಕಾ ಪ್ರದೇಶ, ತಾರಿಹಾಳ ಸೇತುವೆ ಹಾಗೂ ವಿಮಾನ ನಿಲ್ದಾಣ ಸುತ್ತಮುತ್ತ ಮೂರು ವಾರಗಳ ಹಿಂದೆ ಕಾಣಿಸಿಕೊಂಡಿರುವ ಚಿರತೆ ಈವರೆಗೂ ಬೋನಿಗೆ ಬಿದ್ದಿಲ್ಲ. ಇದರಿಂದ ಜನರು ಭಯದಲ್ಲೇ ಕಾಲಕಳೆಯುವಂತಾಗಿದೆ.

ಕುಮಾರ್ ಪಾರ್ಕ್, ಆಶಾ ನಗರ, ರೇಣುಕಾ ನಗರದಲ್ಲಿ ಚಿರತೆ ಕಾಣಿಸಿಕೊಂಡಿದ್ದರಿಂದ ಅರಣ್ಯ ಇಲಾಖೆ ಸಿಬ್ಬಂದಿ, ಅದರ ಸೆರೆಗೆ ವಿಮಾನ ನಿಲ್ದಾಣ ಸುತ್ತಮುತ್ತಲಿನ ಪ್ರದೇಶದಲ್ಲಿ ಬೋನು ಹಾಗೂ ಕ್ಯಾಮೆರಾ ಟ್ರ್ಯಾಪ್‌ ಅಳವಡಿಸಿದ್ದರು.

ಡಿ.23ರಂದು ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಚಿರತೆ ಓಡಾಟದ ದೃಶ್ಯಗಳು ದಾಖಲಾಗಿದ್ದವು. ಆದರೆ, ಇಷ್ಟು ದಿನಗಳಾದರೂ ಅದನ್ನು ಸೆರೆ ಹಿಡಿಯದಿರುವುದು ಸ್ಥಳೀಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ADVERTISEMENT

‘ಚಿರತೆ ಓಡಾಟದಿಂದಾಗಿ ಮನೆಯಿಂದ ಹೊರಬರಲು ಭಯ ಪಡುವಂತಾಗಿದೆ. ಆಶಾ ನಗರದಲ್ಲಿ ಎರಡು ನಾಯಿಗಳನ್ನು ಚಿರತೆ ಹೊತ್ತೊಯ್ದಿದೆ. ಇದನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿಲ್ಲ. ಅನಾಹುತ ಸಂಭವಿಸುವ ಮುನ್ನ ಅದನ್ನು ಸೆರೆ ಹಿಡಿಯಲು ಕ್ರಮ ಕೈಗೊಳ್ಳಬೇಕು’ ಎಂದು ಆಶಾ ನಗರದ ನಿವಾಸಿ ಭರತೇಶ ಧೂಪದಾಳ ಒತ್ತಾಯಿಸಿದರು.

‘ಚಿರತೆ ಓಡಾಟದಿಂದ ಈ ಭಾಗದ ಜನರ ನೆಮ್ಮದಿ ಹಾಳಾಗಿದೆ. ಅದನ್ನು ಸೆರೆ ಹಿಡಿಯಲು ಇನ್ನೆಷ್ಟು ದಿನ  ಬೇಕು? ಬೋನು ಇಡಲಾಗಿದೆ, ಕ್ಯಾಮೆರಾ ಟ್ರ್ಯಾಪ್ ಅಳವಡಿಸಲಾಗಿದೆ ಎಂದು ಹೇಳಿಕೊಂಡು ಅರಣ್ಯ ಇಲಾಖೆ ಸಿಬ್ಬಂದಿ ಕಾಲಹರಣ ಮಾಡುತ್ತಿದ್ದಾರೆ. ವಿಮಾನ ನಿಲ್ದಾಣದ ಅಧಿಕಾರಿಗಳ ನೆರವು ಪಡೆದು ಡ್ರೋನ್ ಕಾರ್ಯಾಚರಣೆ ಮೂಲಕ ಚಿರತೆ ಇರುವ ಜಾಗ ಪತ್ತೆ ಹಚ್ಚಬೇಕು. ಸೆರೆಗೆ ವಿಶೇಷ ಕಾರ್ಯಪಡೆ ರಚಿಸಬೇಕು’ ಎನ್ನುತ್ತಾರೆ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ 31ನೇ ವಾರ್ಡ್‌ ಸದಸ್ಯ ಶಂಕರಪ್ಪ ಹರಿಜನ.

‘ಚಿರತೆ ರಾತ್ರಿ ವೇಳೆ ಮಾತ್ರ ಓಡಾಡುತ್ತಿದೆ. ವಿಮಾನ ನಿಲ್ದಾಣ ಪ್ರದೇಶ ವ್ಯಾಪ್ತಿಯಲ್ಲಿರುವ ಸಾಧ್ಯತೆ ಇದೆ. ಚಲನವಲನ ಪತ್ತೆಗೆ 11 ಕಡೆಗೆ ಕ್ಯಾಮೆರಾ ಟ್ರ್ಯಾಪ್‌ ಅಳವಡಿಸಲಾಗಿದೆ. ಮೂರು ಕಡೆ ನಾಯಿ, ಹಂದಿ ಮರಿ ಸಮೇತ ಬೋನು ಇಡಲಾಗಿದೆ. ಕಳೆದ ನಾಲ್ಕು ದಿನಗಳಿಂದ ಅದರ ಚಲನವಲನ ಕಂಡುಬಂದಿಲ್ಲ. ಇಲಾಖೆಯ 15ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ’ ಎಂದು ಆರ್‌ಎಫ್‌ಒ ಆರ್.ಎಸ್. ಉಪ್ಪಾರ ಹೇಳಿದರು.

ಹೆಚ್ಚು ಬೋನು ಅಳವಡಿಸಿ ಆದಷ್ಟು ಬೇಗ ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದಕ್ಕೆ ಜಿಲ್ಲಾಡಳಿತದಿಂದ ಎಲ್ಲ ನೆರವು ನೀಡಲಾಗುವುದು
ದಿವ್ಯಪ್ರಭು ಜಿಲ್ಲಾಧಿಕಾರಿ
ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಪ್ರತಿ ದಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಭಾಗದಲ್ಲಿ ನಾಯಿ ಮೊಲ ನವಿಲು ಹೆಚ್ಚಿರುವ ಕಾರಣ ಚಿರತೆ ಕಾಣಿಸಿಕೊಂಡಿರುವ ಸಾಧ್ಯತೆ ಇದೆ. ಶೀಘ್ರ ಸೆರೆ ಹಿಡಿಯಲಾಗುವುದು
ವಿವೇಕ ಕವರಿ ಉಪ ಅರಣ್ಯ ಸಂರಕ್ಷಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.