ADVERTISEMENT

ಮಕ್ಕಳ ಹೃದಯದ ಕಾಳಜಿ ಇರಲಿ

ವಿಟಮಿನ್‌ ಬಿ–1 ಕೊರತೆಯೂ ಹೃದಯ ಸಂಬಂಧಿ ಕಾಯಿಲೆಗೆ ಕಾರಣ: ಡಾ.ಪ್ರಕಾಶ ಕೆ. ವಾರಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2023, 6:09 IST
Last Updated 15 ಜನವರಿ 2023, 6:09 IST
ಡಾ.ಪ್ರಕಾಶ ವಾರಿ
ಡಾ.ಪ್ರಕಾಶ ವಾರಿ   

ಹುಬ್ಬಳ್ಳಿ: ‘ಪಾಲಿಸ್‌ ಅಕ್ಕಿಯಿಂದ ತಯಾರಿಸಿದ ಆಹಾರ ಸೇವನೆಯಿಂದ ವಿಟಮಿನ್‌ ಬಿ–1 ಕೊರತೆ ಉಂಟಾಗಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿದೆ. ಆದ್ದರಿಂದ ಪಾಲಿಸ್‌ ಆಗಿರದ ಅಕ್ಕಿ ಬಳಸುವುದರಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಪಾರಾಗಬಹುದು’ ಎಂದು ಕಿಮ್ಸ್‌ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಪ್ರಕಾಶ ಕೆ. ವಾರಿ ಹೇಳಿದರು.

ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯದ ಸಂಬಂಧಿ ಸಮಸ್ಯೆ ಕುರಿತು ಶನಿವಾರ ನಡೆದ ‘ಪ್ರಜಾವಾಣಿ’ ಫೇಸ್‌ಬುಕ್‌ ಸಂವಾದದಲ್ಲಿ ಅವರು ಮಾತನಾಡಿದರು.

‘ಸಾಮಾನ್ಯವಾಗಿ ಮಕ್ಕಳಲ್ಲಿ ಎರಡು ರೀತಿಯ ಹೃದಯ ಸಂಬಂಧಿ ಕಾಯಿಲೆಗಳು ಕಂಡು ಬರುತ್ತವೆ. ಹುಟ್ಟಿದಾಗಿನಿಂದ ಅಥವಾ ಅನುವಂಶಿಕ, ಇನ್ನೊಂದು ಅಕ್ವ್ಯಾರ್ಡ್‌ ಸಮಸ್ಯೆ. 1,000 ಕ್ಕೆ 8 ರಿಂದ 10 ಮಕ್ಕಳಲ್ಲಿ ಹುಟ್ಟಿನಿಂದಾಗಿನಿಂದ ಹೃದಯ ಸಂಬಂಧಿ ಸಮಸ್ಯೆ ಕಂಡುಬರುತ್ತವೆ. ಶೇ 25ರಷ್ಟು ಮಕ್ಕಳು ತೀರಾ ಗಂಭೀರ ಸ್ಥಿತಿಯಲ್ಲಿರುತ್ತವೆ. ಇದಕ್ಕೆ ಮುಖ್ಯ ಕಾರಣ ಗರ್ಭಾವಸ್ಥೆಯಲ್ಲಿ ತಾಯಂದಿರುವ ಸೇವಿಸುವ ಔಷಧಿಗಳು, ಗರ್ಭಿಣಿಯರು ಸೇವಿಸುವ ಮಾತ್ರೆ, ಔಷಧಗಳು ಗರ್ಭದಲ್ಲಿರುವ ಮಕ್ಕಳ ಹೃದಯದ ಮೇಲೆ ಪರಿಣಾಮ ಬೀರುತ್ತದೆ’ ಎಂದರು.

ADVERTISEMENT

‘ಇನ್ನು ಅಕ್ವ್ಯಾರ್ಡ್‌ ಸಮಸ್ಯೆ ಮಕ್ಕಳು ಹುಟ್ಟಿದ ನಂತರ ಅಂದರೆ 2, 3, 4 ವರ್ಷಕ್ಕೆ ಕಂಡು ಬರುತ್ತದೆ. ಇದಕ್ಕೆ ಮುಖ್ಯ ಕಾರಣ ವೈರಲ್‌ ಮ್ಯಾರಕೈಡೇಟ್ಸ್‌ ಮತ್ತು ಕೆಲವು ವಿಟಮಿನ್‌ ಕೊರತೆಯ ಆಹಾರ ಸೇವನೆ. ಇದರಿಂದ ಹೃದಯ ಊದಿಕೊಳ್ಳುತ್ತದೆ. ಪಾಲಿಸ್‌ ಮಾಡಿದ ಅಕ್ಕಿಯಿಂದ ತಯಾರಾದ ಆಹಾರ ಸೇವನೆಯಿಂದ ಈ ಸಮಸ್ಯೆ ಉಂಟಾಗುತ್ತಿದೆ’ ಎಂದು ತಿಳಿಸಿದರು.

ಶಾಲೆಗೆ ತೆರಳುವ ಮಕ್ಕಳಿಗೆ ಮನೆಯಲ್ಲಿ ತಯಾರಿಸುವ ಆಹಾರ ಪದ್ಧತಿಯನ್ನೇ ರೂಢಿ ಮಾಡಬೇಕು. ಇದರಿಂದ ರೋಗ ನಿರೋಧಕ ಶಕ್ತಿ (ಇಮ್ಯೂನಿಟಿ) ವೃದ್ಧಿಯಾಗುತ್ತದೆ. ಕೊರೊನಾ ಬಂದಾಗಿನಿಂದ 10–12 ವರ್ಷ ವಯಸ್ಸಿನ ನಂತರದ ಮಕ್ಕಳ ತೂಕದಲ್ಲಿ ವ್ಯತ್ಯಾಸ ಉಂಟಾಗುತ್ತಿರುವುದರಿಂದ ಬೊಜ್ಜಿನ ಸಮಸ್ಯೆ ಕಂಡುಬರುತ್ತಿದೆ. ಉತ್ತಮ ಆಹಾರ, ಚಟುವಟಿಕೆಗಳ ಕೊರತೆಯಿಂದ ಈ ಸಮಸ್ಯೆ ಉಂಟಾಗುತ್ತದೆ. ಬೊಜ್ಜಿನಿಂದ ಶುಗರ್‌, ಬಿಪಿ ಬರುತ್ತಿದ್ದು, 18 ರಿಂದ 20 ವರ್ಷಕ್ಕೆ ಹೃದಯ ಸಂಬಂಧಿ ರೋಗ ಕಂಡು ಬರುತ್ತಿದೆ. ಇದಕ್ಕೆ ಹೊರಗಿನ ಆಹಾರ ಸೇವನೆ, ಜಂಕಫುಡ್‌, ಸಕ್ಕರೆ ಹೆಚ್ಚಿರುವ ಆಹಾರ ಸೇವನೆ ಹಾಗೂ ದೈಹಿಕ ಶ್ರಮ, ವ್ಯಾಯಾಮ ಇಲ್ಲದಿರುವುದು ಕೂಡ ಮುಖ್ಯ ಕಾರಣ’ ಎಂದು ವೈದ್ಯರು ತಿಳಿಸಿದರು.

‘ಕಡಿಮೆ ತೂಕ, ಅವಧಿ ಪೂರ್ವ ಜನಿಸುವ ಮಕ್ಕಳ ಬಗ್ಗೆ ಚಳಿಗಾಲದಲ್ಲಿ ಹೆಚ್ಚು ಕಾಳಜಿ ವಹಿಸಬೇಕು. ತಾಯಿಯ ಎದೆಯ ಮೇಲೆ ಮಗುವನ್ನು ಹಾಕಿ ಬೆಚ್ಚನೆ ಸ್ವೇಟರ್‌ ಹಾಕಿಕೊಂಡು ಉಸಿರಾಟಕ್ಕೆ ತೊಂದರೆ ಆಗದಂತೆ ಬೆಚ್ಚಗಿಡಬಹುದು. ಇದರಿಂದ ಮಗುವಿನ ಬೆಳವಣಿಗೆ ಚೆನ್ನಾಗಿರುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ’ ಎಂದು ತಿಳಿಸಿದರು.

ಹೃದಯ ಸಂಬಂಧಿ ಕಾಯಿಲೆ ಲಕ್ಷಣಗಳು

ಹುಟ್ಟಿದ ಮಕ್ಕಳು ನೀಲಿ ಆಗುವುದು, ಉಸಿರಾಟದ ಸಮಸ್ಯೆ, ಹಳದಿ ಆಗುವುದು, ನ್ಯೂಮೋನಿಯಾ, ಹೆಚ್ಚು ಹಾಲು ಸೇವಿಸದಿರುವುದು, ಮಕ್ಕಳ ಬೆಳವಣಿಗೆಯಲ್ಲಿ ಕುಂಠಿತ ಇವೆಲ್ಲ ಹುಟ್ಟಿದ ಮಕ್ಕಳಲ್ಲಿ ಕಂಡುಬರುವ ಹೃದಯ ಸಂಬಂಧಿ ಕಾಯಿಲೆಯ ಲಕ್ಷಣಗಳಾಗಿವೆ.

‘ವಯಸ್ಸಿನ ಆಧಾರದ ಮೇಲೆ ಹೃದಯ ಸಂಬಂಧಿ ಕಾಯಿಲೆ ಲಕ್ಷಣಗಳು ಇರುತ್ತವೆ. ಅಶುದ್ಧ ರಕ್ತ ಶುದ್ಧ ರಕ್ತಕ್ಕೆ ಸೇರುವುದರಿಂದ ಕೈ, ಬಾಯಿ ನೀಲಿ ಆಗುವುದು, ಹುಟ್ಟಿದಾಗಿನಿಂದ ಹಾಲು ಸೇವಿಸದಿರುವುದು, ತೇಕುವುದು, ಮಗುವಿನ ಹೃದಯ ಸಂಬಂಧಿ ಕಾಯಿಲೆಯ ಲಕ್ಷಣಗಳಾಗಿವೆ’ ಎಂದು ಡಾ.ಪ್ರಕಾಶ ವಾರಿ ತಿಳಿಸಿದರು.

ಅತಿ ಪಾಲಿಶ್ ಅಕ್ಕಿಯ ಆಹಾರ ಸೇವನೆಯಿಂದ ಹೃದಯ ಸಮಸ್ಯೆ

‘ಉಸಿರಾಟ, ಹೃದಯ ಊದಿಕೊಳ್ಳುವ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಳವಾಗುತ್ತಿವೆ. ಈ ಸಮಸ್ಯೆ ಹೆಚ್ಚಾಗಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಭಾಗದಲ್ಲಿ ಕಂಡುಬರುತ್ತಿದೆ. ಆ ಭಾಗದಲ್ಲಿ ಅಕ್ಕಿಯೇ ಆಹಾರದ ಮೂಲವಾಗಿರುವುದರಿಂದ ಪಾಲಿಶ್ ಅಕ್ಕಿಯನ್ನೇ ಬಳಸುತ್ತಾರೆ. ಇದರಿಂದ ಹೃದಯ ಸಂಬಂಧಿ ಕಾಯಿಲೆ ಕಂಡು ಬರುತ್ತಿದೆ. ಇದು ಮಕ್ಕಳ ಮೇಲೂ ಪರಿಣಾಮ ಬೀರುತ್ತಿದೆ’ ಎಂದು ಡಾ.ಪ್ರಕಾಶ ವಾರಿ ವಿವರಿಸಿದರು.

ಸಂವಾದ ವೀಕ್ಷಣೆಗೆ: https://fb.watch/i2hQJiAXwC/?mibextid=RUbZ1f

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.