ADVERTISEMENT

ಯುವಕರೇ ಉದ್ಯೋಗದಾತರಾಗಲಿ: ಕಾಶ್ಮೀರಿಲಾಲ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2020, 13:46 IST
Last Updated 3 ಜನವರಿ 2020, 13:46 IST
ಕಾಶ್ಮೀರಿಲಾಲ್‌
ಕಾಶ್ಮೀರಿಲಾಲ್‌   

ಹುಬ್ಬಳ್ಳಿ: ದೇಶದ ಎಲ್ಲ ಜನರಿಗೂ ಸರ್ಕಾರವೇ ಉದ್ಯೋಗ ಕೊಡಬೇಕು ಎಂದರೆ ಸಾಧ್ಯವಿಲ್ಲ; ಆದ್ದರಿಂದ ಯುವಕರು ಉದ್ಯೋಗ ಹುಡುಕುವ ಬದಲು ಉದ್ಯೋಗದಾತರಾಗಬೇಕು ಎಂದು ಸ್ವದೇಶಿ ಜಾಗರಣ ಮಂಚ್‌ನ ಅಖಿಲ ಭಾರತ ಸಂಘಟನಾ ಕಾರ್ಯದರ್ಶಿ ಕಾಶ್ಮೀರಿಲಾಲ್‌ ಹೇಳಿದರು.

ಆರ್‌ಎಸ್‌ಎಸ್‌ ಕಚೇರಿ ಕೇಶವಕುಂಜದಲ್ಲಿ ಶುಕ್ರವಾರ ಮಾಧ್ಯಮದವರ ಜೊತೆ ಸಂವಾದ ನಡೆಸಿದ ಅವರು ‘ದೇಶದ ಈಗಿನ ಪರಿಸ್ಥಿತಿಯಲ್ಲಿ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ನಿರುದ್ಯೋಗದ ಸಮಸ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ’ ಎಂದರು.

‘ದೇಶದ ಆರ್ಥಿಕ ಅಭಿವೃದ್ಧಿಯನ್ನು ಆರ್ಥಿಕ ವೃದ್ಧಿ ದರ (ಜಿಡಿಪಿ) ಮೇಲೆ ಲೆಕ್ಕ ಹಾಕವುದನ್ನು ಸ್ವದೇಶಿ ಮಂಚ್‌ ಒಪ್ಪುವುದಿಲ್ಲ. ಈಗಿನ ಜಿಡಿಪಿ ಲೆಕ್ಕಾಚಾರ ಮತ್ತು ಮಾನದಂಡದ ಬಗ್ಗೆ ಜಗತ್ತಿನಾದ್ಯಂತ ಚರ್ಚೆ ನಡೆಯುತ್ತಿದೆ. ಆದ್ದರಿಂದ ಇನ್ನಷ್ಟು ದೇಶಗಳು ಈ ಕುರಿತು ಚರ್ಚಿಸಬೇಕು. ಸ್ವದೇಶಿ ಜಾಗರಣ ಮಂಚ್‌ ಆಧುನೀಕರಣದ ವಿರೋಧಿಯಲ್ಲ. ಆದರೆ, ವಿದೇಶಿ ವ್ಯಾಮೋಹಕ್ಕೆ ಬಲಿಯಾಗದೆ ನಮ್ಮತನ ಉಳಿಸಿಕೊಂಡು ಕೆಲಸ ಮಾಡಿ ದೇಶವನ್ನು ಪ್ರಗತಿಪಥದತ್ತ ಕೊಂಡೊಯ್ಯೊಬೇಕು ಎಂದು ಬಯಸುತ್ತದೆ. ಖಾಸಗೀಕರಣದಲ್ಲಿ ಪಾರದರ್ಶಕತೆ ಮತ್ತು ಅರ್ಹರಿಗೆ ಉದ್ಯೋಗ ಸಿಗುವಂತಾಗಬೇಕು ಎನ್ನುವುದಷ್ಟೇ ನಮ್ಮ ಬಯಕೆ’ ಎಂದರು.

ADVERTISEMENT

‘ಕೇಂದ್ರ ಸರ್ಕಾರ ಬಹಳಷ್ಟು ಜನಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಆದರೆ, ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಬರುತ್ತಿಲ್ಲ. ಅಭಿವೃದ್ಧಿಯ ದೃಷ್ಟಿಯಿಟ್ಟುಕೊಂಡೇ ಸರ್ಕಾರ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಹಿಂದೂ ವಿಚಾರವಾದಿ ದತ್ತೋಪಂಥ್‌ ಬಾಪುರಾವ್‌ ಥೇಂಗಡಿ ಅವರ ಆರ್ಥಿಕ ವಿಚಾರಗಳನ್ನು ಆಧರಿಸಿ ಕೇಂದ್ರ ಸರ್ಕಾರ ಅಭಿವೃದ್ಧಿ ಯೋಜನೆಗಳನ್ನು ರೂಪಿಸುತ್ತಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ಬಾಪುರಾವ್‌ ಥೇಂಗಡಿ ಜನ್ಮ ಶತಮಾನೋತ್ಸವ

ಹಿಂದೂ ವಿಚಾರವಾದಿ ಹಾಗೂ ಸ್ವದೇಶಿ ಜಾಗರಣ ಮಂಚ್‌ನ ಸಂಸ್ಥಾಪಕ ದತ್ತೋಪಂಥ್‌ ಬಾಪುರಾವ್‌ ಥೇಂಗಡಿ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಎಲ್ಲ ರಾಜ್ಯಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಥೇಂಗಡಿ ಅವರ ವಿಚಾರಧಾರೆಗಳನ್ನು ಭಾರತೀಯ ಮಜ್ದೂರ್‌ ಸಂಘ ಮತ್ತು ಭಾರತೀಯ ಕಿಸಾನ್ ಸಂಘಗಳ ಸಹಯೋಗದೊಂದಿಗೆ ಎಲ್ಲರಿಗೂ ಮುಟ್ಟುವಂತೆ ಮಾಡುತ್ತಿದ್ದೇವೆ ಎಂದು ಕಾಶ್ಮೀರ್‌ಲಾಲ್‌ ತಿಳಿಸಿದರು.

‘ಥೇಂಗಡಿ ಅವರ ವಿಚಾರಗಳನ್ನು ಎಲ್ಲ ಶಾಲೆ ಹಾಗೂ ಕಾಲೇಜುಗಳ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕು. ಅವರ ಬದುಕು, ಆರ್ಥಿಕ ವಿಚಾರಗಳು ಮತ್ತು ನಿರಂತರ ಆರ್ಥಿಕ ಅಭಿವೃದ್ಧಿಯ ಬಗ್ಗೆ ಹೊಂದಿದ್ದ ಆಲೋಚನೆಗಳು ಜನರಿಗೆ ಗೊತ್ತಾಗಬೇಕು’ ಎಂದರು.

ಥೇಂಗಡಿ ಅವರ ಆರ್ಥಿಕ ವಿಚಾರಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು www.dbthengadi.in ಸಂಪರ್ಕಿಸಿ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.