ADVERTISEMENT

ವೀರಶೈವ ಲಿಂಗಾಯತರೇ ಸಮೀಕ್ಷೆ ನಡೆಸಿ: ಸಂಸದ ಜಗದೀಶ ಶೆಟ್ಟರ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 5:21 IST
Last Updated 21 ಜುಲೈ 2025, 5:21 IST
ಹುಬ್ಬಳ್ಳಿಯ ಗುಜರಾತ್ ಭವನದಲ್ಲಿ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು
ಹುಬ್ಬಳ್ಳಿಯ ಗುಜರಾತ್ ಭವನದಲ್ಲಿ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು   

ಹುಬ್ಬಳ್ಳಿ: ‘ವೀರಶೈವ ಲಿಂಗಾಯತರೇ ಸಮಾಜದ ಸಮೀಕ್ಷೆ ಮಾಡಿದಾಗ ನಮ್ಮ ಜನಸಂಖ್ಯೆ, ಶಕ್ತಿ ಏನೆಂಬುದು ಗೊತ್ತಾಗುತ್ತದೆ’ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್‌ ಹೇಳಿದರು.

ಇಲ್ಲಿನ ದೇಶಪಾಂಡೆ ನಗರದ ಗುಜರಾತ್ ಭವನದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಘಟಕವು ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮಹಾರಾಷ್ಟ್ರ, ಕೇರಳ, ತಮಿಳುನಾಡಿನಲ್ಲೂ ಸಮಾಜದವರಿದ್ದಾರೆ. 12 ವರ್ಷಗಳ ಹಿಂದೆ ಮಹಾರಾಷ್ಟ್ರದಲ್ಲಿ ಸಮಾಜದ ಜನಸಂಖ್ಯೆ 1.05 ಕೋಟಿ ಇತ್ತು. ಆದರೆ, ಕರ್ನಾಟಕದಲ್ಲಿ ಸಮಾಜದ ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗುತ್ತಿದೆ. ಜನಗಣತಿಯೊಂದಿಗೆ ಜಾತಿಗಣತಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಇದರೊಂದಿಗೆ ಸಮಾಜದವರೂ ಸಮೀಕ್ಷೆ ಮಾಡಿ’ ಎಂದು ಸಲಹೆ ನೀಡಿದರು.

ADVERTISEMENT

‘ಗಣತಿ ವೇಳೆ ಮಾಹಿತಿ ನೀಡುವಾಗ ಎಚ್ಚರದಿಂದಿರಿ. ಜಾತಿ ಹೆಸರು ಉಲ್ಲೇಖಿಸುವಾಗ ಮೀಸಲಾತಿಗೆ ತೊಂದರೆಯಾಗಬಾರದು. ಈ ಕುರಿತು ಚರ್ಚಿಸಲು ದಾವಣಗೆರೆಯಲ್ಲಿ ಸಭೆ ನಡೆಸಲಾಗುತ್ತದೆ. ಸಮಾಜದ ಗುರು ಹಿರಿಯರೊಂದಿಗೆ ಸಭೆ ನಡೆಸಿ, ಅಂತಿಮ ನಿರ್ಧಾರ ಪ್ರಕಟಿಸಲಾಗುವುದು’ ಎಂದರು.

‘ಸಮಾಜದಲ್ಲಿ ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದವರನ್ನು ಗುರುತಿಸಿ, ಬ್ಯಾಂಕ್‌ ಹಾಗೂ ಶಿಕ್ಷಣ ಸಂಸ್ಥೆಗಳ ಮೂಲಕ ನೆರವು ನೀಡಲಾಗುತ್ತಿದೆ. ಸೊಸೈಟಿ ಸ್ಥಾಪಿಸಿಕೊಂಡು ನಿವೇಶನ ನೀಡುವುದಲ್ಲದೆ, ಮನೆಯನ್ನೂ ನಿರ್ಮಿಸಿಕೊಡಲಾಗುತ್ತಿದೆ. ಇದು ಎಲ್ಲೆಡೆ ನಡೆಯಬೇಕು. ಸಮಾಜದವರಿಗೆ ವಿಶ್ವಾಸ ತುಂಬಬೇಕು’ ಎಂದು ತಿಳಿಸಿದರು.

‘ಸಮಾಜದವರನ್ನು ಪ್ರೋತ್ಸಾಹಿಸಲು ಉಪಪಂಗಡ ಅವಶ್ಯವಿದ್ದರೂ, ವೀರಶೈವ ಲಿಂಗಾಯತ ಸಮಾಜಕ್ಕೆ ಶಕ್ತಿ ತುಂಬುವುದೇ ಅಂತಿಮ ಗುರಿ ಆಗಿರಬೇಕು. ಗ್ರಾಮೀಣ ಭಾಗದಲ್ಲೂ ಸಮಾಜ ಶಕ್ತಿಯುತವಾಗಿದ್ದು, ಒಗ್ಗಟ್ಟು ಬೆಳೆಯುತ್ತಿದೆ’  ಎಂದರು.

‘ಬಣಜಿಗ ಸಮಾಜದವರು ಎಲ್ಲರ ವಿಶ್ವಾಸ ಗಳಿಸಿದ್ದಾರೆ. ಬಸವಣ್ಣನವರ ಮಾರ್ಗದರ್ಶನದಂತೆ ನಡೆಯುತ್ತಿದ್ದಾರೆ. ಅಮೆರಿಕದಲ್ಲಿ ಲಿಂಗಾಯತ ವೀರಶೈವ ಸಮಾಜದವರು ಒಗ್ಗೂಡಿ ಬಸವತತ್ವ ಪ್ರಚಾರ ಮಾಡುತ್ತಿದ್ದಾರೆ. ಅಲ್ಲಿನ ಕನ್ನಡ ಶಾಲೆಯಲ್ಲಿ 800 ವಿದ್ಯಾರ್ಥಿಗಳಿದ್ದು, ವಚನ ಸಂಸ್ಕೃತಿ ಪ್ರತಿನಿಧಿಸುತ್ತಿದ್ದಾರೆ. ಸಂಸ್ಕಾರ ಪಸರಿಸುವಲ್ಲಿ ನಾವು ಹಿಂದುಳಿಯಬಾರದು’ ಎಂದು ಹೇಳಿದರು.

ಪ್ರತಿಭಾ ಪುರಸ್ಕಾರ ಸಮಿತಿ ಅಧ್ಯಕ್ಷ ರಾಜಶೇಖರ ಹೊಸಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಮಹೇಶ ಟೆಂಗಿನಕಾಯಿ, ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಆನಂದ ಉಪ್ಪಿನ, ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ವಿಜಯ ಬ. ಕೋರಿಶೆಟ್ಟರ, ವಿಧಾನ ಪರಿಷತ್‌ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಕೆಎಲ್‌ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ, ವಿಜಯ ಶೆಟ್ಟರ, ವೀರೇಂದ್ರ ಕೌಜಲಗಿ, ಮಲ್ಲಿಕಾರ್ಜುನ ರೂಢಗಿ, ಚನ್ನಬಸಪ್ಪ ಧಾರವಾಡಶೆಟ್ರ ಇದ್ದರು.

ಸಮಾಜದವರಿಗೆ ಶಿಕ್ಷಣದಲ್ಲಿ ಮೀಸಲಾತಿ ಇದೆ. ಉದ್ಯೋಗದಲ್ಲಿ ಮೀಸಲಾತಿಗಾಗಿ ಹೋರಾಡಬೇಕಿದೆ. ಕಾನೂನಾತ್ಮಕ ಚರ್ಚೆ ಅವಶ್ಯವಿದೆ
ಜಗದೀಶ ಶೆಟ್ಟರ್‌ ಬೆಳಗಾವಿ ಸಂಸದ
ಎಲ್ಲ ಮಠಗಳಲ್ಲಿ ಹಣತೆ ಬೆಳಗುತ್ತಿರುವುದು ಬಣಜಿಗರಿಂದ. ಸಾಧನೆಯೇ ಪಥವಾಗಬೇಕು. ಸಮಾಜ ಎಲ್ಲರೊಳಗೆ ಒಂದಾಗಿರಬೇಕು
ಎ.ಸಿ. ವಾಲಿ ಮಹಾರಾಜರು ಅಣ್ಣಿಗೇರಿ ಮತ್ತು ಭಂಡಿವಾಡದ ಗಿರೀಶ ಆಶ್ರಮ
‘ಬಸವಣ್ಣನ ವಾರಸುದಾರರು ಬಣಜಿಗರು’
‘ಬಣಜಿಗ ಎಂಬುದು ಜಾತಿಯಲ್ಲ ಸಾಮಾಜಿಕ ಸಭ್ಯತೆ ಭವ್ಯ ಪರಂಪರೆ. ಬಣವಣ್ಣನವರ ನಿಜವಾದ ವಾರಸುದಾರರು ನಾವು. ಬಸವಣ್ಣ ಸರ್ವಜ್ಞ ಸೇರಿದಂತೆ ಹಲವಾರು ವಚನಕಾರರ ವಚನಗಳಲ್ಲಿ ಬಣಜಿಗ ಪದದ ಉಲ್ಲೇಖವಿದೆ. 12ನೇ ಶತಮಾನದ ನಂತರವೂ ವಚನ ಸಾಹಿತ್ಯಕ್ಕೆ ಮರುಜೀವ ನೀಡಿದವರಲ್ಲಿ ಹಲವರು ಈ ಸಮಾಜದವರೇ ಆಗಿದ್ದಾರೆ. ಬಣಜಿಗರು ಜಿಪುಣರಲ್ಲ ಸಾರ್ಥಕ ಕೆಲಸಕ್ಕೆ ಕೊಡುಗೈ ದಾನಿಗಳು’ ಎಂದು  ಸಾಹಿತಿ ಅಶೋಕ ಹಂಚಲಿ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.