ADVERTISEMENT

ಸಾಧನೆಗೆ ಕಾಯಕ ಶ್ರದ್ಧೆ, ದಾಸೋಹ ಪ್ರಜ್ಞೆ ಅಗತ್ಯ: ಶಿವಾಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 6:14 IST
Last Updated 13 ಸೆಪ್ಟೆಂಬರ್ 2025, 6:14 IST
ಧಾರವಾಡದ ಮುರುಘಾ ಮಠದಲ್ಲಿ ಶನಿವಾರ ನಡೆದ ಬಸವ ಸಂಸ್ಕೃತಿ ಅಭಿಯಾನದ ಸಮಾರಂಭದಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು ಅನುಭವ ಮಂಟಪದ ಐತಿಹಾಸಿಕತೆ ಪುಸ್ತಕ ಬಿಡುಗಡೆಗೊಳಿಸಿದರು
ಧಾರವಾಡದ ಮುರುಘಾ ಮಠದಲ್ಲಿ ಶನಿವಾರ ನಡೆದ ಬಸವ ಸಂಸ್ಕೃತಿ ಅಭಿಯಾನದ ಸಮಾರಂಭದಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು ಅನುಭವ ಮಂಟಪದ ಐತಿಹಾಸಿಕತೆ ಪುಸ್ತಕ ಬಿಡುಗಡೆಗೊಳಿಸಿದರು   

ಧಾರವಾಡ: 'ಕಾಯಕ, ಕಾಲ ಶ್ರದ್ಧೆ, ದಾಸೋಹ ಪ್ರಜ್ಞೆ ಇದ್ದರೆ ಸಾಧನೆ ಮಾಡಲು ಸಾಧ್ಯ ಎಂದು ಸಾಣೇಹಳ್ಳಿಯ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಬಸವ ಸಂಘಟನಗಳ ವತಿಯಿಂದ ನಗರದ ಮುರುಘಾ ಮಠದ ಮುರುಘೇಂದ್ರ ಶಿವಯೋಗಿ ಸಭಾಭವನದಲ್ಲಿ ಶನಿವಾರ ನಡೆದ ಬಸವ ಸಂಸ್ಕೃತಿ ಅಭಿಯಾನದ ಉಪನ್ಯಾಸ ಮತ್ತು ಸಾರ್ವಜನಿಕ ಸಮಾರಂಭದಲ್ಲಿ ಅವರು ಮಾತನಾಡಿದರು. ಬಸವಣ್ಣನವರು ಸಮಾಜದಲ್ಲಿ ಪರಿವರ್ತನೆ ತರಲು ಕಾಯಕ, ಕಾಲ ಶ್ರದ್ಧೆ, ದಾಸೋಹ ಪ್ರಜ್ಞೆ ಕಾರಣ. ಬಸವಣ್ಣನವರ ತತ್ಚಗಳನ್ನು ಪಾಲಿಸಬೇಕು ಎಂದು ಹೇಳಿದರು.

‘ಬಸವ ಸಂಸ್ಕೃತಿ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ. ಅಭಿಯಾನದ ಯಶಸ್ಸು ಕಂಡು ಹಲವರು ನಿದ್ದೆ ಕೆಡಿಸಿಕೊಂಡಿದ್ಧಾರೆ. ದೇಶದಲ್ಲಿ ಅನೇಕ ಢೋಂಗಿ ಸ್ವಾಮೀಜಿಗಳು ಇದ್ದಾರೆ ಎಂದು ಅವರು ಕನವರಿಸುತ್ತಿದ್ದಾರೆ. ಈ ವೇದಿಕೆಯಲ್ಲಿರುವ ಸ್ವಾಮೀಜಿಗಳು ಶ್ರದ್ಧೆ, ಭಕ್ತಿ, ಸದ್ಭಾವದಿಂದ ಸಮಾಜ ಪರಿವರ್ತನೆಗೆ ಮುಂದಾಗಿದ್ದಾರೆ ಎಂಬ ಆಲೋಚನೆ ಬಹುಶಃ ಅವರಿಗಿಲ್ಲ. ಗೋಸುಂಬೆಯಂತೆ ಬಣ್ಣ ಬದಲಾಯಿಸುವ ಗುಣ ಅವರಿಗಿರಬಹುದು, ನಾವು ಅಂಥವರಲ್ಲ’ ಎಂದು ಹೇಳಿದರು.

ADVERTISEMENT

‘ರಾಜ್ಯ ಸರ್ಕಾರವು ಅಭಿಯಾನದವರನ್ನು ಬೆಂಬಲಿಸುತ್ತಿದೆ. ಹಣ ನೀಡಿದೆ ಎಂದು ಕೆಲವರು ಆಲೋಚಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಅದು ಅವರ ಬಾಯಿ ಚಪಲದ ಮಾತು. ಈ ವೇದಿಕೆಯಲ್ಲಿರುವ ಅನೇಕ ಸ್ವಾಮೀಜಿಗಳು ಅಭಿಯಾನಕ್ಕೆ ಸ್ವತಃ ಹಣ ನೀಡಿದ್ದಾರೆ. ಅಷ್ಟೇ ಅಲ್ಲ, ಸಮಾಜಮುಖಿ ಚಿಂತನೆ, ಕಾರ್ಯದಲ್ಲಿ ತೊಡಗಿದ್ದೇವೆ’ ಎಂದರು.

‘ಮುಂಬರುವ ಜನಗಣತಿಯಲ್ಲಿ ಇತರ ಕಾಲಂನಲ್ಲಿ ಲಿಂಗಾಯತ ಎಂದು ಬರೆಸಬೇಕು. ಜಾತಿ ಕಾಲಂನಲ್ಲಿ ನಿಮ್ಮ ಉಪಜಾತಿ ಹೆಸರು ಬರೆಯಿಸಬೇಕು‘ ಎಂದರು.

ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ತೋಂಟದ ಸಿದ್ದರಾಮ ಸ್ವಾಮೀಜಿ, ಗಂಗಾ ಮಾತಾಜಿ, ನಿಜಗುಣಾನಂದ ಸ್ವಾಮೀಜಿ, ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ ಪಾಲ್ಗೊಂಡಿದ್ದರು.

‘ಶರಣ ಪಥದ ಪ್ರಾಮುಖ್ಯ ತಿಳಿಯಿರಿ’

ಶರಣ ಪಥದಲ್ಲಿ ಜಾತಿ ಭೇದ ಇಲ್ಲ ಆತ್ಮಗೌರವ ನಾಶವಾಗುವ ಸಾಧ್ಯತೆ ಇಲ್ಲ. ಈ ಪಥದ ಪ್ರಾಮುಖ್ಯತೆ ತಿಳಿದುಕೊಳ್ಳಬೇಕು ಎಂದು ಡಾ.ಎಚ್‌.ಎಸ್‌.ಅನುಪಮಾ ಹೇಳಿದರು. ‘ವ್ಯಸನ ಮುಕ್ತ ಸಮಾಜ’ ಕುರಿತು ಅವರು ಉಪನ್ಯಾಸ ನೀಡಿದರು. ಕಾಯಕ ಧರ್ಮ ಎತ್ತಿ ಹಿಡಿದಿರುವುದು ಶರಣರ ಮಾರ್ಗ. ಹೆಂಡದ ಮಾರಯ್ಯ ಅವರ ವಚನಗಳನ್ನು ಓದಬೇಕು. ಅವರು ಬದುಕಿನಲ್ಲಿ ಪರಿವರ್ತನೆಯಾಗಿದ್ದನ್ನು ತಿಳಿದುಕೊಳ್ಳಬೇಕು. ಅವರು ನಡೆನುಡಿ ಒಂದಾಗಿದ್ದ ಶರಣ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.