ADVERTISEMENT

ಧಾರವಾಡ: ಸಾಧಿಸಿರುವುದು ಸಾಕಷ್ಟು; ಸಾಧಿಸಬೇಕಿದೆ ಇನ್ನಷ್ಟು

ಹುಬ್ಬಳ್ಳಿ–ಧಾರವಾಡ ಮೆಟ್ರೊ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 8 ಸೆಪ್ಟೆಂಬರ್ 2019, 9:58 IST
Last Updated 8 ಸೆಪ್ಟೆಂಬರ್ 2019, 9:58 IST
ಗ್ರಾಮದಲ್ಲಿ ಸಾಕ್ಷರತೆ ಜಾಗೃತಿ
ಗ್ರಾಮದಲ್ಲಿ ಸಾಕ್ಷರತೆ ಜಾಗೃತಿ   

‘ಸಾಕ್ಷರರಾಗೋಣ ನಾವು ಸಾಕ್ಷರರಾಗೋಣ
ಅಕ್ಷರ ಕಲಿಯೋಣ ನಾವು ನಾಡನು ಕಟ್ಟೋಣ...’

– ಈ ಜನಪದ ಶೈಲಿಯ ಸಾಕ್ಷರತಾ ಜಾಗೃತಿ ಹಾಡು ಮಿಶ್ರಿಕೋಟೆಯ ಮನೆಯೊಂದರಲ್ಲಿ ಕೇಳಿ ಬರುತ್ತಿತ್ತು. ಆ ಮನೆಯಲ್ಲಿ ಸಾಕ್ಷರತಾ ಸ್ವಯಂಸೇವಕರು ನವಸಾಕ್ಷರರಾಗುವತ್ತ ಮುಂದಡಿ ಇಟ್ಟವರಿಗೆ ಈ ಹಾಡನ್ನು ಹೇಳಿಕೊಡುತ್ತಿದ್ದರು. ಆ ಗುಂಪಿನಲ್ಲಿ 70 ವಯಸ್ಸು ದಾಟಿದ ನಿಂಗಜ್ಜಿ, 56ರ ರಾಚಪ್ಪ, 37ರ ಈರಪ್ಪ, 23ರ ಮಲ್ಲವ್ವ ಸೇರಿ 8 ಜನರಿದ್ದರು. ಯಾವುದೋ ಕಾರಣಕ್ಕಾಗಿ ಶಾಲೆಗೆ ಹೋಗಿ ಶಿಕ್ಷಣ ಪಡೆಯಲಾಗದ ಇವರು ವಯಸ್ಕರ ಶಿಕ್ಷಣ ಕಾರ್ಯಕ್ರಮದಡಿ ಅಕ್ಷರ ಕಲಿಯಲು ಮುಂದಾಗಿದ್ದು, ಅವರ ಜೀವನೋತ್ಸಾಹವನ್ನು ಬಿಂಬಿಸುವಂತಿತ್ತು.

‘ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸಿ, ಅವರಲ್ಲಿ ನಿರಂತರವಾಗಿ ಕಲಿಯುವ ಪ್ರವೃತ್ತಿಯನ್ನು ಬೆಳೆಸಬೇಕು. ಓದು–ಬರಹದ ದಾಹ ಹೆಚ್ಚಿಸಬೇಕು. ಆಗ ಮಾತ್ರ ಗ್ರಾಮಗಳ, ನಾಡಿನ, ದೇಶದ ಸುಸ್ಥಿರ ಪ್ರಗತಿ ಸಾಧ್ಯ’ ಎಂಬ ಗಾಂಧೀಜಿ ಅವರ ಮಾತಿನಂತೆ ಸಾಕ್ಷರತೆ ಆಯಾ ರಾಷ್ಟ್ರದ ಪ್ರಗತಿಯಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ. ಸಾಕ್ಷರತೆಯ ಪ್ರಮಾಣ ಆಧರಿಸಿ ಆಯಾ ರಾಜ್ಯ ಹಾಗೂ ರಾಷ್ಟ್ರಗಳ ಗುಣಾತ್ಮಕ ವಿಕಾಸ ಮತ್ತು ಮಾನವ ಸಂಪನ್ಮೂಲ ದಕ್ಷತೆಯ ಸೂಚ್ಯಂಕವನ್ನು ಮಾಪನ ಮಾಡಲಾಗುತ್ತದೆ.

ADVERTISEMENT

ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ, ಧಾರವಾಡ ಜಿಲ್ಲೆ ಸಾಕ್ಷರತಾ ಪ್ರಮಾಣದಲ್ಲಿ ಉತ್ತಮ ಸಾಧನೆ ಮಾಡಿದೆ. ಉತ್ತರ ಕರ್ನಾಟಕದಲ್ಲಿ ಶೇ 80ರಷ್ಟು ಸಾಕ್ಷರತೆಯ ಗಡಿ ದಾಟಿದ ಏಕೈಕ ಜಿಲ್ಲೆ ಧಾರವಾಡ ಎಂಬುದು ಸ್ತುತ್ಯಾರ್ಹ. 2011ರ ಜನಗಣತಿಯ ಅಂಕಿ–ಅಂಶದಂತೆ ಜಿಲ್ಲೆಯಲ್ಲಿ ಒಟ್ಟು ಸಾಕ್ಷರತೆ ಪ್ರಮಾಣ ಶೇ 80ರಷ್ಟಿದೆ. 2001ರಲ್ಲಿ ಈ ಪ್ರಮಾಣ ಶೇ 71.6ರಷ್ಟಿತ್ತು. ಒಂದು ದಶಕದ ಅವಧಿಯಲ್ಲಿ ಶೇ 8.4ರಷ್ಟು ಪ್ರಗತಿ ಸಾಧಿಸಲಾಗಿದೆ. ಪುರುಷರ ಸಾಕ್ಷರತೆಯ ಪ್ರಮಾಣ 2011ರಲ್ಲಿ ಶೇ 86.4, 2001ರಲ್ಲಿ ಶೇ 80.8ರಷ್ಟಿದ್ದು, ಒಂದು ದಶಕದ ಅವಧಿಯಲ್ಲಿ ಶೇ 5.6ರಷ್ಟು ಪ್ರಗತಿ ಸಾಧಿಸಲಾಗಿದೆ. ಅದೇ ರೀತಿ ಮಹಿಳೆಯರ ಸಾಕ್ಷರತೆಯ ಪ್ರಮಾಣ 2011ರಲ್ಲಿ ಶೇ 73.5, 2001ರಲ್ಲಿ ಶೇ 61.9ರಷ್ಟಿದ್ದು, ಒಂದು ದಶಕದ ಅವಧಿಯಲ್ಲಿ ಶೇ 11.6ರಷ್ಟು ಗಮನಾರ್ಹ ಪ್ರಗತಿ ಸಾಧಿಸಲಾಗಿದೆ.

15 ವಯೋಮಾನಕ್ಕಿಂತ ಕಡಿಮೆ ಇರುವವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಕಡ್ಡಾಯ ಶಿಕ್ಷಣ ಕಾರ್ಯಕ್ರಮದ ಅಡಿಯಲ್ಲಿ ಬರುವುದರಿಂದ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಅವರತ್ತ ಗಮನ ಹರಿಸಿಲ್ಲ. ಆದರೆ, 2011ರ ಜನಗಣತಿಯಂತೆ 15 ವಯೋಮಾನ ಮೀರಿದವರಲ್ಲಿ ಅಕ್ಷರಸ್ಥ ಮಹಿಳೆಯರ ಸಂಖ್ಯೆ (ಶೇ 73.5) , ಪುರುಷರಿಗೆ (ಶೇ 86.4) ಹೋಲಿಸಿದಲ್ಲಿ ತುಸು ಕಡಿಮೆ ಇದೆ. ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಪ್ರಸಕ್ತ 2018–19ರ ಸಾಲಿನವರೆಗೂ ಸಾಕಷ್ಟು ಕಾರ್ಯಕ್ರಮಗಳ ಮೂಲಕ ಶ್ರಮಿಸಲಾಗಿದೆ. ಆ ಶ್ರಮದ ಪರಿಣಾಮವಾಗಿ ಸಕಾರಾತ್ಮಕ ಬದಲಾವಣೆ ಕಂಡುಬಂದಿದ್ದು, ಸಾಕ್ಷರತೆಯ ಪ್ರಮಾಣ ನಿರಂತರವಾಗಿ ಹೆಚ್ಚುತ್ತ ಸಾಗಿದೆ.

2001ರ ಜನಗಣತಿಯ ಅಂಕಿ–ಅಂಶಗಳಿಗೆ ಹೋಲಿಸಿದರೆ, 2011ರಲ್ಲಿ ಜಿಲ್ಲೆಯಲ್ಲಿ ಪುರುಷರ ಸಾಕ್ಷರತಾ ಪ್ರಮಾಣಕ್ಕಿಂತ ಮಹಿಳೆಯರು ಸಾಕ್ಷರತಾ ಪ್ರಮಾಣ ಏರಿಕೆಯಾಗಿರುವುದು ಉತ್ತಮ ಅಂಶವೇ. ಆದರೆ, ಅಲ್ಪಸಂಖ್ಯಾತರು, ಪರಿಶಿಷ್ಟರು, ಕೊಳಚೆ ಪ್ರದೇಶ ಹಾಗೂ ಗ್ರಾಮೀಣ ಭಾಗದಲ್ಲಿ ಮಹಿಳೆಯರ ಸಾಕ್ಷರತಾ ಪ್ರಮಾಣ ಇನ್ನಷ್ಟು ಹೆಚ್ಚಬೇಕಿದೆ.

2 ವರ್ಷಗಳ ಹಿಂದೆ ಸಾಕ್ಷರತಾ ಯೋಜನೆಯಡಿ 15ರಿಂದ 59ರವರೆಗೆ ವಯೋಮಾನ ನಿಗದಿಪಡಿಸಲಾಗಿತ್ತು. 59 ವಯಸ್ಸು ಮೀರಿದವರನ್ನು ಪರಿಗಣಿಸುತ್ತಿರಲಿಲ್ಲ. ಆದರೆ, ಈಗ 15 ವರ್ಷ ಮೀರಿದ ಎಲ್ಲರೂ ಸಾಕ್ಷರತಾ ಯೋಜನೆಯಡಿ ಬರುತ್ತಾರೆ. ಇದಕ್ಕೆ ನಿಗದಿತ ವಯೋಮಾನವನ್ನು ನಿರ್ದಿಷ್ಟಪಡಿಸಿಲ್ಲ. ಅಂದರೆ, ವಯಸ್ಸು ನೂರಾದ ಅಜ್ಜ–ಅಜ್ಜಿ ಕೂಡ ಇಂದು ಸಾಕ್ಷರತಾ ಯೋಜನೆಯಡಿ ಅಕ್ಷರಾಭ್ಯಾಸ ಮಾಡಬಹುದು. ಈ ನಿಟ್ಟಿನಲ್ಲಿ ಜಿಲ್ಲೆಯ ಕೆಲವೆಡೆ ಶತಾಯುಷಿ ಅಜ್ಜ–ಅಜ್ಜಿಯರು ತಮ್ಮ ಮೊಮ್ಮಕ್ಕಳು, ಮರಿಮಕ್ಕಳಿಂದ ಅಕ್ಷರ ಜ್ಞಾನ ಪಡೆಯುತ್ತಿರುವುದು ಪ್ರಶಂಸಾರ್ಹ ವಿಷಯವಾಗಿದೆ.

‘2017–18ರಲ್ಲಿ ನಮ್ಮ ಇಲಾಖೆಯಡಿ ಜಿಲ್ಲೆಗೆ ಬಂದ ಒಟ್ಟು ಅನುದಾನ ₹ 7 ಲಕ್ಷ. 2018–19ರಲ್ಲಿ ₹ 14 ಲಕ್ಷ ಬಂದಿದೆ. ಇದರಲ್ಲಿಯೇ ಎಲ್ಲವನ್ನೂ ನಿರ್ವಹಿಸಬೇಕಿದೆ. ಈ ಮೊದಲು ಅಕ್ಷರ ಜ್ಞಾನದೊಂದಿಗೆ ವಯಸ್ಕ ಸಾಕ್ಷರರಿಗೆ ವೃತ್ತಿ ಕೌಶಲ ತರಬೇತಿಯನ್ನೂ ನೀಡಿ, ಅವರು ಸ್ವಾವಲಂಬಿಯಾಗಲು ಸಹಕರಿಸುತ್ತಿದ್ದೆವು. ನವ ಸಾಕ್ಷರ ಮಹಿಳೆಯರಿಗೆ ಹೊಲಿಗೆ ತರಬೇತಿ, ಪುರುಷರಿಗೆ ಮೊಬೈಲ್‌ ರಿಪೇರಿಯಂಥ ತರಬೇತಿ ನೀಡುತ್ತಿದ್ದೆವು. ಈಗ ಕೌಶಲ ಅಭಿವೃದ್ಧಿ ಇಲಾಖೆ ಪ್ರತ್ಯೇಕವಾಗಿ ಅಸ್ತಿತ್ವಕ್ಕೆ ಬಂದಿರುವುದರಿಂದ ಅನಕ್ಷರಸ್ಥರಿಗೆ ಓದಲು, ಬರೆಯಲು ಮತ್ತು ಸರಳ ಲೆಕ್ಕ ಮಾಡಲು ಕಲಿಸುವತ್ತ ಗಮನಹರಿಸುತ್ತಿದ್ದೇವೆ’ ಎಂದು ಜಿಲ್ಲಾ ವಯಸ್ಕರ ಶಿಕ್ಷಣಕಾರ್ಯಕ್ರಮ ಸಹಾಯಕ ಶ್ರೀಶೈಲ ರಾಚನ್ನವರ ಮಾಹಿತಿ ನೀಡಿದರು.

‘ಶೇ 80+’ ಸಾಧನೆಯೇ ಮುಳುವಾಯಿತೇ?

2011ರ ಜನಗಣತಿಯ ಅಂಕಿ–ಅಂಶಗಳಂತೆ ಜಿಲ್ಲೆಯಲ್ಲಿ ಶೇ 80ರಷ್ಟು ವಯಸ್ಕರ ಸಾಕ್ಷರತಾ ಪ್ರಮಾಣ ಸಾಧಿಸಲಾಗಿದೆ. (ಈಗ ಈ ಪ್ರಮಾಣ ಇನ್ನೂ ಹೆಚ್ಚಾಗಿದೆ). ರಾಜ್ಯದಲ್ಲಿ ಒಟ್ಟು 10 ಜಿಲ್ಲೆಗಳಲ್ಲಿ ‘ಶೇ 80+’ ಸಾಧನೆಯಾಗಿದೆ. 20 ಜಿಲ್ಲೆಗಳು ಶೇ 80ರ ಗಡಿ ಮುಟ್ಟಿಲ್ಲ. ಸರ್ಕಾರದ ನಿಯಮಾವಳಿಯಂತೆ ‘ಶೇ 80+’ ಸಾಧನೆ ಮಾಡಿದ ಜಿಲ್ಲೆಗಳಿಗೆ ಲಿಂಕ್‌ ಅನುದಾನವನ್ನು ಮಾತ್ರ ಒದಗಿಸಿ ರಾಜ್ಯ ಅನುದಾನ ಕಡಿತಗೊಳಿಸಲಾಗಿದೆ. ಕೇವಲ ಜಿಲ್ಲಾಮಟ್ಟದಲ್ಲಿ ಮಾತ್ರ ಸಿಬ್ಬಂದಿ ಉಳಿಸಿಕೊಳ್ಳಲಾಗಿದೆ. ತಾಲ್ಲೂಕು ಮಟ್ಟದ ಸಾಕ್ಷರತಾ ಸಂಯೋಜಕರು, ಸಾಕ್ಷರತಾ ಪ್ರೇರಕರ ಹುದ್ದೆಯನ್ನು ತೆರವುಗೊಳಿಸಲಾಗಿದೆ. ಸರ್ಕಾರೇತರ ಸಂಸ್ಥೆಗಳ ಬೆಂಬಲವನ್ನೂ ಒದಗಿಸುತ್ತಿಲ್ಲ. ಆದರೆ, ಶೇ 80ರ ಗಡಿ ಮುಟ್ಟದ ಜಿಲ್ಲೆಗಳಲ್ಲಿ ಈ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಆಯಾ ಜಿಲ್ಲೆಯ ಅಗತ್ಯಕ್ಕೆ ತಕ್ಕಂತೆ ಲಿಂಕ್ ಮತ್ತು ರಾಜ್ಯ ಅನುದಾನ ಸೇರಿ ₹ 50 ಲಕ್ಷದಿಂದ ₹ 80 ಲಕ್ಷದವರೆಗೆ ವಾರ್ಷಿಕ ಅನುದಾನ, ಅಗತ್ಯವಿರುವಷ್ಟು ಸಿಬ್ಬಂದಿ ಒದಗಿಸಲಾಗಿದೆ. ಆದರೆ, ‘ಶೇ 80+’ ಸಾಧನೆ ಮಾಡಿದ ಧಾರವಾಡ ಜಿಲ್ಲೆಗೆ ಒದಗಿಸಿರುವ ವಾರ್ಷಿಕ ಅನುದಾನ ಕೇವಲ ₹ 14 ಲಕ್ಷ ಮಾತ್ರ ಎಂಬುದು ವಿಪರ್ಯಾಸ.

ಕತ್ತಲಲ್ಲಿ ಕಾಡು ಹೊಕ್ಕಂತೆ

ವಯಸ್ಕರಿಗೆ ಶಿಕ್ಷಣ ನೀಡುವುದೆಂದರೆ ಕತ್ತಲಲ್ಲಿ ಕಾಡು ಹೊಕ್ಕಂಥ ಕೆಲಸ. ಕೆಲವೆಡೆ ವಯಸ್ಕರಿಗೆ ಸಾಕ್ಷರ ಜ್ಞಾನ ನೀಡಲು ಹೋದರೆ, ‘ನಾವು ಸಾಲಿ ಕಲತ್ರ ನಮಗ ಏನರ ರೊಕ್ಕಾ ಕೊಡತರಿ?’ ಎಂಬ ಪ್ರಶ್ನೆಗಳು ಎದುರಾಗುತ್ತವೆ. ಕೆಲವೆಡೆ ಈ ವಯಸ್ಸಿನ್ಯಾಗ ನಮಗ್ಯಾಕ ಸಾಲಿ, ನಿಮ್ಮ ಸಾಲಿ ನೀವ ಇಟಕೋರಿ’ ಎಂಬ ಬಿರು ಮಾತುಗಳನ್ನು ಕೇಳಬೇಕಾಗುತ್ತದೆ. ಇನ್ನೂ ಕೆಲವೆಡೆ, ‘ನಾವು ಕಲಿಯೋ ವಯಸ್ಸಿನ್ಯಾಗಂತೂ ಕಲೀಲಿಲ್ಲ, ಈಗರ ಕಲೀತೇವ ಬಿಡ್ರಿ ಸಾಹೇಬ್ರ, ನಿಮಗ ಪುಣ್ಯ ಹತ್ಲಿ’ ಎಂಬ ಸಾಂತ್ವನದ ನುಡಿಗಳೂ ಕೇಳಿಬರುತ್ತವೆ’ ಎಂದು ತಮ್ಮ ಅನುಭವ ಹಂಚಿಕೊಂಡರು ಜಿಲ್ಲಾ ವಯಸ್ಕರ ಶಿಕ್ಷಣ ಕಾರ್ಯಕ್ರಮ ಸಹಾಯಕ ಶ್ರೀಶೈಲ ರಾಚನ್ನವರ

ಸಿಬ್ಬಂದಿ ಕೊರತೆ ಸಾಧನೆಗೆ ಅಡ್ಡಿ

ಜಿಲ್ಲೆಯಲ್ಲಿ ವಯಸ್ಕರ ಶಿಕ್ಷಣ ಇಲಾಖೆಯ ಕಾರ್ಯಯೋಜನೆ, ಸಾಧನೆ ಕುರಿತು ಮಾಹಿತಿ ನೀಡಿದ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಬಸವರಾಜ ನಾಲತವಾಡ, ‘ಜಿಲ್ಲಾಮಟ್ಟದಲ್ಲಿ ಸಾಕ್ಷರತೆ ಸಾಧನೆಗಾಗಿ ಒಟ್ಟು 4 ಸಿಬ್ಬಂದಿ ಮಾತ್ರ ಇದ್ದಾರೆ. ಅದರಲ್ಲೂ ನೇರವಾಗಿ ಫಲಾನುಭವಿಗಳನ್ನು ಸಂಪರ್ಕಿಸುವವರೆಂದರೆ ಇಬ್ಬರೇ. ಅದು ನಾನು ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣ ಕಾರ್ಯಕ್ರಮ ಸಹಾಯಕರಾದ ಶ್ರೀಶೈಲ ರಾಚನ್ನವರ. ಇನ್ನಿಬ್ಬರ ಪೈಕಿ ಒಬ್ಬರು ದ್ವಿತೀಯ ದರ್ಜೆ ಸಹಾಯಕರು, ಮತ್ತೊಬ್ಬರು ಸಿಪಾಯಿ. ಈ ರೀತಿ ಸಿಬ್ಬಂದಿ ಕೊರತೆಯ ಇತಿಮಿತಿಯಲ್ಲೂ ನಾವು ಸ್ವಯಂಸೇವಕ ಬೋಧಕರ ನೆರವಿನಿಂದ ಉತ್ತಮ ಸಾಧನೆ ಮಾಡಿದ್ದೇವೆ. ಅಗತ್ಯ ಸಿಬ್ಬಂದಿ, ಅನುದಾನ ಒದಗಿಸಿದರೆ ಶೇ 100ರಷ್ಟು ಸಾಧನೆ ಮಾಡುವ ವಿಶ್ವಾಸವಿದೆ’ ಎಂದು ತಿಳಿಸಿದರು.

ಜೈಲುಹಕ್ಕಿಗಳಿಗೂ ಅಕ್ಷರ ಭಾಗ್ಯ

2018–19ರಲ್ಲಿ ಧಾರವಾಡದ ಕೇಂದ್ರ ಕಾರಾಗೃಹದಲ್ಲಿನ ಅನಕ್ಷರಸ್ಥ ಕೈದಿಗಳಿಗೆ ಅಕ್ಷರ ಜ್ಞಾನ ನೀಡುವ ಕಾರ್ಯವನ್ನು ಜಿಲ್ಲಾ ಪಂಚಾಯ್ತಿ ನೆರವಿನಿಂದ ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತು. ಇದಕ್ಕೆ ಸರ್ಕಾರದ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಹೀಗಾಗಿ, 2019–20ರಲ್ಲಿ ಈ ಕಾರ್ಯವನ್ನು ಜಿ.ಪಂ ಸಿಇಒ ಮಾರ್ಗದರ್ಶನದಲ್ಲಿ ಇಲಾಖೆ ವತಿಯಿಂದ ಅಧಿಕೃತವಾಗಿ ಅನುಷ್ಠಾನಗೊಳಿಸಲಾಗಿದೆ. ಇತರ ಜಿಲ್ಲೆಗಳಲ್ಲೂ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಸರ್ಕಾರ ಸೂಚಿಸಿದೆ.

ಶೇ 100ರಷ್ಟು ಸಾಕ್ಷರ ಗ್ರಾ.ಪಂ ಗುರಿ

2019–20ನೇ ಸಾಲಿನಲ್ಲಿ ಕಲಘಟಗಿ ತಾಲ್ಲೂಕಿನ ಮಿಶ್ರಿಕೋಟಿ, ಹುಬ್ಬಳ್ಳಿ ತಾಲ್ಲೂಕಿನ ಬೆಳಗಲಿ ಹಾಗೂ ನವಲಗುಂದ ತಾಲ್ಲೂಕಿನ ಭದ್ರಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಶೇ 100ರಷ್ಟು ಸಾಕ್ಷರತಾ ಪ್ರಮಾಣ ಸಾಧಿಸುವ ಗುರಿ ಹೊಂದಿದ್ದು, ಈಗಾಗಲೇ ಕಾರ್ಯಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.