ADVERTISEMENT

ಲಾಕ್‌ಡೌನ್‌ ಕಡಲಲಿ ನಗೆಯ ಹಾಯಿದೋಣಿ

ಎಸ್.ರಶ್ಮಿ
Published 2 ಮೇ 2020, 2:56 IST
Last Updated 2 ಮೇ 2020, 2:56 IST
ಯಶವಂತ ಸರದೇಶಪಾಂಡೆ
ಯಶವಂತ ಸರದೇಶಪಾಂಡೆ   

ತಿಳಿನೀಲಿ ಕುರ್ತಾ, ಬಿಳಿ ಪೈಜಾಮಾ, ಬಿಳಿ ಕರವಸ್ತ್ರ ಕಟ್ಕೊಂಡು ಆಫೀಸಿಗೆ ಬಂದರು. ಕರವಸ್ತ್ರ ಇಳಿಸಿ
ದವರೇ.. ಲಾಕ್‌ಡೌನ್‌ ಟೈಮಿನಾಗ ಕಟಿಂಗ್‌ ಮಾಡಸೂದು ಕಷ್ಟ ಆಗೇದ.. ಕಷ್ಟಾ ಮಾಡಿಸಿಕೊಂಡು ಹೆಂಗ ಬಂದ್ರು ಅನ್ನಬ್ಯಾಡ್ರಿ ಅಂದವರೇ ಮಾತಿಗಿಳಿದರು ಯಶವಂತ ಸರದೇಶಪಾಂಡೆ.

ಮೂಗಿನಡಿಯ ಬಯಲುದಾರಿಯಲ್ಲಿ ನಗೆಮೊಗ್ಗು ಅರೆಬಿರಿಯುತ್ತಿತ್ತು. ಮಾತು ಕೇಳಲು ಕುಳಿತವರು ನಾಲ್ಕಾರು ಜನರೇ ಆದರೂ ಸೂರು ಹಾರುವಷ್ಟು ನಗೆ ತೇಲುತ್ತಿತ್ತು. ಕೊರೊನಾ ಲಾಕ್‌ಡೌನ್‌ ಸಮಯದ ನಿಯಮ ಪಾಲಿಸುತ್ತಲೇ ಕಚೇರಿಯಲ್ಲಿ ಅಂತರ ಕಾಪಿಟ್ಟುಕೊಂಡರೂ ನಗುವೆಂಬ ಸೋಂಕು ಹರಡುತ್ತಲೇ ಇತ್ತು.

ನಗೆಯುಕ್ಕಿದ ನಾಲ್ವತ್ತು ನಿಮಿಷಗಳು ನಿಮ್ಮ ಮುಂದೆ...

ADVERTISEMENT

ಈ ಲಾಕ್‌ಡೌನ್‌ ಟೈಮಿನಾಗ ಮಾಡಾಕ ಕೆಲಸಿಲ್ಲ ಅನ್ನೂದೆ ಸುಳ್ಳು. ಮಾಡಲೇಬೇಕಿದ್ದು, ಮಾಡಲಾಗದ ಕೆಲಸಗಳಿಗೆ ಸಮಯ ಸಾಲದಂತಾಗಿದೆ. ರಂಗಮಂದಿರಕ್ಕೆ ಬಣ್ಣ ಬಳಿಯುವ ಕೆಲಸ, ಪುಸ್ತಕಗಳನ್ನು ಜೋಡಿಸಿಡುವ ಕೆಲಸ ಮಾಡ್ಕೊಂತನ ಹ್ಯಾಪ್ಪಿಕುಮಾರ್‌ ಹುಬ್ಬಳ್ಳಿ ಏಕವ್ಯಕ್ತಿ ಪ್ರದರ್ಶನದ ಅಭ್ಯಾಸವೂ ನಡೆಯುತ್ತಿದೆ.

ಜನರಿಗೀಗ ನಗು ಬೇಕಿದೆ. ಅಮೆರಿಕದ ವೀಕ್ಷಕರಿಗಾಗಿ ರಾಶಿಚಕ್ರ ಲೈವ್‌ ಕಾರ್ಯಕ್ರಮ ಇಟ್ಕೊಂಡಿದ್ದೆ. ಅದರರಿಂದ ಸಂಗ್ರಹಿಸಿದ ಹಣವನ್ನು ದೇಣಿಗೆಯಾಗಿ ನೀಡಿದೆ. ತಂತ್ರಜ್ಞಾನವನ್ನು ನಮಗೆ ಬೇಕಿದ್ದಂತೆ ದುಡಿಸಿಕೊಳ್ಳಬೇಕು. ಒಂದು ಆತಂಕ ಇದ್ದೇ ಇತ್ತು.. ಯಾರಾದರೂ ರೆಕಾರ್ಡ್‌ ಮಾಡಿ ಹಂಚ್ಗೊಂತ ಹೋದ್ರ.. ಅಂತ..ಆಮೇಲೆ ಅನಿಸ್ತು.. ಹಂಚಿದ್ರ ಹಂಚಲಿ.. ಜನರಿಗೆ ಮುಟ್ಟಾಕಬೇಕಲ್ಲ..

ನಾಟಕದಂಥ ಪ್ರದರ್ಶನಗಳು ಪ್ರತಿದಿನವೂ ನವ್ಯಮಾರ್ಗವನ್ನು ಅಳವಡಿಸಿಕೊಳ್ಳುತ್ತಲೇ ಇರುತ್ತವೆ. ಪ್ರೇಕ್ಷಕರಿಂದ ಪ್ರೇಕ್ಷಕರಿಗೆ, ಊರಿಂದೂರಿಗೆ ಬದಲಾಗುತ್ತಲೇ ಇರುತ್ತವೆ. ಹಂಗಾಗಿ ನಾ ಮತ್ತ ಹೊಸತನದಿಂದಲೇ ಮಾಡ್ತೀನಿ. ಕನ್ನಡದ ಜಾಯಮಾನಕ್ಕ ಹೊಂದುಹಂಗ, ಪ್ರತಿದಿನದ ಆಗುಹೋಗುಗಳಿಗೆ ಸ್ಪಂದಿಸುಹಂಗ. ಇಷ್ಟು ಮಾತ್ರದ ಸ್ವಾತಂತ್ರ್ಯವನ್ನು ತೆಗೆದುಕೊಳ್ಳುವುದ
ರಿಂದಲೇ ಅದು ನಮ್ಮದ ನಿಸ್ತದ. ನಮ್ಮ ತನಕ್ಕ ಹಾತೊರಿಯುವ ಮನಸುಗಳು ಇರೂತನಾನೂ ರಂಗಭೂಮಿ ಪ್ರವರ್ಧಮಾನಕ್ಕ ಬರ್ತದ.

ಲಾಕ್‌ಡೌನ್‌ನಾಗ ನೆಟ್‌ಫ್ಲಿಕ್ಸ್‌, ಥೇಟರ್‌ ಪ್ಲಸ್‌, ಅಮೇಜಾನ್‌ ಪ್ರೈಮ್‌ ಚಿತ್ರಗಳನ್ನೆಲ್ಲ ನೋಡಬಹುದು. ಆದರ ನಮ್ಮೂರಿನ ಭಾಷಾದಾಗ, ನಮ್ಮ ಕೂಡ ಹರಟಿ ಹೊಡಿಯೂ ಸುಖ ನಮ್ಮನ್ನು ಹಗುರಗೊಳಿಸ್ತದ. ಈ ಸ್ಥಳೀಯ ಭಾಷಾ ಸೊಗಡು ಕೂಡಿಡ್ತದ. ಹಂಗಾಗಿ ಆ ಕಾರ್ಯಕ್ರಮ ಯಶಸ್ವಿಯಾಯ್ತು.

ಸಂಗೀತ ಮತ್ತು ಹಾಸ್ಯಕ್ಕೆ ಸ್ಪಂದಿಸದವ ಮನುಷ್ಯನೇ ಅಲ್ಲ, ಅಂಥವರಲ್ಲಿ ಮನುಷ್ಯತ್ವ ಇರೂದೂ ಇಲ್ಲ. ಹಾಸ್ಯ ಅಂದ್ರ ಅಪಹಾಸ್ಯ ಮಾತ್ರ ಆಗಬಾರದು. ಹಾಸ್ಯರಸ ನಮ್ಮಲ್ಲಿ ಲಘುವಾಗಿ ನಗೆಯುಕ್ಕಿಸುತ್ತಲೇ ಗುರುವಾಗಿ ಚಿಂತನೆಗೆ ಹಚ್ಬೇಕು. ಇಲ್ಲದಿದ್ದಲ್ಲಿ ಜನಪ್ರಿಯವಾಗಬಹುದೆ ಹೊರತು ಜನಮಾನಸಕ್ಕಿಳಿಯುವುದಿಲ್ಲ. ಪ್ರಾಣೇಶ್‌ ಅವರ ಹಾಸ್ಯ ಆ ಪದಸಭ್ಯ ಮೀರದಂತಾಗಲು ಅದರ ಹಿಂದಿನ ಓದು.

ಇದೊಂದು ಸಂದರ್ಭವಿದೆ ಜನರಿಗೆ ಓದಿನ ಪ್ರೀತಿ ಬೆಳೆಸಿಕೊಳ್ಳಲು. ತಮ್ಮೊಳಗೆ ತಾವು ಇಣುಕಲು. ಅದನ್ನು ಮಾಡಿದರೆ ಸಾಕು, ಜೀವನ ಆಸ್ವಾದಿಸುವ ಸೂತ್ರ ಮತ್ತು ಮಂತ್ರ ಎರಡೂ ದಕ್ಕುತ್ತವೆ. ಅದ್ಹಂಗೆ ಆಗಬೇಕು ಅಷ್ಟೆ.

ನಗದೇ ಇರುವ ಮತ್ತು ನಗದು ಮಾತ್ರ ಇರುವ ಸಂದರ್ಭಗಳನ್ನೂ ಹಂಚಿಕೊಂಡರು. ಆಲ್‌ ದ ಬೆಸ್ಟ್‌ ನಾಟಕ ನೋಡಿಯೂ ಮುಂದಿನ ಸಾಲಿನಲ್ಲಿ ಕುಳಿತು, ನಗೆಯಾಡದವರ ಸಾಧನೆ ಕಂಡು ಬೆರಗುಗೊಂಡಿದ್ದೇನೆ. ಇನ್ನೂ ಕೆಲವೆಡೆ ಆಯೋಜಕರು ನಗದು ನೀಡಿ, ನಾಟಕ ಮಾಡಿದರೂ, ಬಿಟ್ಟರೂ ಒಂದೆ ಎಂಬಂತೆ ವರ್ತಿಸಿದವರನ್ನೂ ನೋಡಿದ್ದೇನೆ. ಆದರೆ ಮೂರ್ನಾಲ್ಕು ಜನರ ಮುಂದೆಯೂ ಸಭಾಭವನ ತುಂಬಿದಂತೆಯೇ ‘ನಾಟಕ’ವಾಡಿ ಬಂದಿದ್ದಿದೆ.

ಹುಬ್ಬಳ್ಳಿಯ ಹ್ಯಾಪ್ಪಿಕುಮಾರ‌ ನಾಟಕದ ದೃಶ್ಯಗಳನ್ನು ಆಡಿ ತೋರಿಸಿದರು. ಮತ್ತೆ ನಗುವೆಂಬ ಸೋಂಕು ಹರಡುತ್ತಲೇ ಇತ್ತು. ದಾಳಿಯೂ ಮಾಡಿತು. ತನ್ನ ಲಕ್ಷಣವನ್ನು ನಗು ಮಾಸದಂತೆ ಮಾಡಿತು. ನಗೆ ಹಬ್ಬಿಸಿದ ವೈರಸ್‌ ಸರದೇಶಪಾಂಡೆ ಅವರೊಂದಿಗೆ
ಎಲ್ಲರೂ ಚಿತ್ರ ಕ್ಲಿಕ್ಕಿಸಿಕೊಂಡು ಈ ನಗುವನ್ನು ಸೆರೆ ಹಿಡಿದರು.

ಹುಬ್ಬಳ್ಳಿಯ ಹ್ಯಾಪ್ಪಿಕುಮಾರ್

ಹುಬ್ಬಳ್ಳಿಯ ಆನಂದಕುಮಾರ್‌, ಮುಂಬೈನ ಬಣ್ಣದ ನಗರಿಗೆ ಹೋಗಿ ತನ್ನ ಬಾಳುವೆಯ ಕ್ಷಣಗಳನ್ನು ನಿರೂಪಿಸುವ ನಾಟಕ ಇದು. ವಿಜಯ್‌ ತೆಂಡುಲ್ಕರ್‌ ರಚನೆಯನ್ನು ಯಶವಂತ ಸರದೇಶಪಾಂಡೆ ತಮ್ಮ ಭಾಷೆ ಮತ್ತು ರಂಗಭೂಮಿಯ ಭಾಷ್ಯಗೆ ಒಗ್ಗಿಸಿದ್ದಾರೆ.

ಸಣ್ಣದೊಂದು ಆಸೆಯೊಂದಿಗೆ ಆರಂಭವಾಗುವ ಈ ನಾಟಕದಲ್ಲಿ ಆಮಿಶ, ಅಧಿಕಾರ, ದರ್ಪ, ಸೋಗು, ಸೊಗಡು, ವಾತ್ಸಲ್ಯ, ಮೋಸ, ಬದುಕುವ ದಾರಿ, ಅಭಿಮಾನ ಎಲ್ಲವೂ ಮೇಳೈಸಿದೆ. ಮತ್ತದೆ ಸೂತ್ರ ಲಘುವಾಗಿ ನಗಿಸುತ್ತಲೇ ಮನುಷ್ಯನ ಎಲ್ಲ ಸ್ವಭಾವಗಳೂ ಇವರ ಹಾವಭಾವಗಳಲ್ಲಿ ಹರಿದಾಡುತ್ತವೆ. ಕೆಲವೊಮ್ಮೆ ನಗು ಉಕ್ಕಿದರೂ, ಮಾನಸದಲ್ಲಿ ಅಲೆಗಳು ಕಲವಿಲಗೊಳಿಸುತ್ತವೆ.

ನಾಯಕಿಯ ಮನೆಯ ನಾಯಿಗಳು ಮುತ್ತಿದಾಗ ಅಲ್ಲಿ ಹ್ಯಾಪ್ಪಿಕುಮಾರ್ ಆಗಿರುವ‌ ಆನಂದ ನೇಪಥ್ಯಕ್ಕೆ ಸರಿದು, ನಾಯಿಗಳೇ ಕಂಡಂತೆ ಆಗುತ್ತವೆ. ಸೆಕ್ಯುರಿಟಿ ಒಬ್ಬಶಾಬ್‌ ಎಂದು ಮಾತಾಡುವಾಗ ಅದೇ ಪಾತ್ರ ಕಣ್ಣೆದುರಿಗೆ. ಅಪ್ಸರೆಯಂಥ ನಟಿ ಎಂದಾಗ ಪದಗಳಿಲ್ಲಿ ಚಿತ್ರಗಳಾಗಿ ಮೂಡುತ್ತವೆ.

ಈ ನುಡಿಚಿತ್ರಣದಲ್ಲಿ ಅವರ ಆಂಗಿಕ ಚಲನೆಯೂ, ಮೀಸೆಯಡಿಯಲ್ಲಿ ಮರೆಯಾಗುತ್ತಿದ್ದ ಭಾವಗಳೂ ಇಲ್ಲಿ ಬಯಲಾಗುತ್ತಿವೆ. ಕೃತಿಯ ಬಗ್ಗೆ ಹೇಳುವುದಿಲ್ಲ. ಅದನ್ನು ನೋಡಿಯೇ ಅನುಭವಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.