ಹುಬ್ಬಳ್ಳಿ: ‘ಇಲ್ಲಿನ ಲೋಹಿಯಾ ನಗರದಲ್ಲಿ ನಿರ್ಮಾಣವಾಗುತ್ತಿರುವ ಕ್ರೀಡಾ ಸಂಕೀರ್ಣ ಕಾಮಗಾರಿ ಬರುವ ಅಕ್ಟೋಬರ್‌ನಲ್ಲಿ ಪೂರ್ಣಗೊಳ್ಳಲಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕ್ರೀಡಾ ಸಂಕೀರ್ಣ ವೀಕ್ಷಿಸಲು ಧಾರವಾಡ ಜಿಲ್ಲೆಯ ಕ್ರೀಡಾ ವಸತಿ ನಿಲಯಗಳ ವಿದ್ಯಾರ್ಥಿಗಳು ಹಾಗೂ ಜಿಲ್ಲೆಯ ಎಲ್ಲ ಕ್ರೀಡಾ ತರಬೇತಿದಾರರು ಬಂದಿದ್ದಾರೆ. ಬಹುತೇಕ ಕಟ್ಟಡ ಈಗಾಗಲೇ ಪೂರ್ಣವಾಗಿದೆ. ಹಾಕಿ ಮೈದಾನ ಹಾಗೂ ಸಭಾಂಗಣಕ್ಕೆ ಸಂಬಂಧಿಸಿದ ಕೆಲಸ ಮಾತ್ರ ಬಾಕಿ ಇದೆ’ ಎಂದರು.
‘ಸಭಾಂಗಣ ಕಾಮಗಾರಿಗೆ ಇನ್ನೂ ಸುಮಾರು ₹9 ಕೋಟಿ ಅನುದಾನದ ಅಗತ್ಯವಿದೆ. ಈ ಅನುದಾನ ಯಾವ ಮೂಲದಿಂದ ತರಬೇಕು ಎಂಬುದರ ಬಗ್ಗೆ ಯೋಜಿಸಲಾಗುವುದು. ರಾಜ್ಯ, ಕೇಂದ್ರ ಸರ್ಕಾರಗಳು ಮತ್ತು ವಿವಿಧ ಕಂಪನಿಗಳ ಸಿಎಸ್‌ಆರ್ ನಿಧಿಯನ್ನು ಕ್ರೀಡಾ ಸಂಕೀರ್ಣದ ವಿವಿಧ ಉದ್ದೇಶಕ್ಕಾಗಿ ಕೋರಲಾಗುವುದು’ ಎಂದು ಹೇಳಿದರು.
‘15 ಎಕರೆ ವಿಸ್ತಾರದಲ್ಲಿ ನಿರ್ಮಾಣವಾದ ಕ್ರೀಡಾ ಸಂಕೀರ್ಣದ ನಿರ್ವಹಣೆ ವಿಷಯ ದೊಡ್ಡ ಸವಾಲು. ನಿರ್ವಹಣೆ ಮಾಡಲು ಗುತ್ತಿಗೆದಾರ ಕಂಪನಿಗಳನ್ನು ಆಹ್ವಾನಿಸುವ ಕುರಿತು ಚರ್ಚಿಸಲಾಗುವುದು. ಈಗಾಗಲೇ ಕೆಲವು ಕಂಪನಿಗಳು ಆಸಕ್ತಿ ತೋರಿಸುತ್ತಿವೆ. ಜಿಲ್ಲೆಯ ಬಡ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುವ ರೀತಿಯಲ್ಲಿ ಕೆಲವು ನಿರ್ಬಂಧನೆಗಳನ್ನು ಹಾಕಿ ನಿರ್ವಹಣೆಯನ್ನು ಗುತ್ತಿಗೆ ವಹಿಸುವ ಪ್ರಕ್ರಿಯೆ ಆದಷ್ಟು ಅಕ್ಟೋಬರ್‌ದೊಳಗೆ ಮಾಡಲಾಗುವುದು’ ಎಂದು ತಿಳಿಸಿದರು.
‘22 ಕ್ರೀಡೆಗಳ ಪೈಕಿ 16 ಕ್ರೀಡೆಗಳಿಗೆ ಅಗತ್ಯ ಮೈದಾನ ಹಾಗೂ ಇನ್ನಿತರೆ ಕಾಮಗಾರಿಗಳು ಮುಕ್ತಾಯವಾಗಿವೆ. ಹೊರಾಂಗಣ ಹಾಗೂ ಒಳಾಂಗಣ ಈಜುಗೋಳ ಕಾಮಗಾರಿಯೂ ಮುಗಿದಿದೆ. ಕೆಲವು ಕಡೆ ಬಣ್ಣ ಬಳಿಯುವ ಕೆಲಸ ಬಾಕಿ ಇದೆ. ಕ್ರೀಡಾ ಸಂಕೀರ್ಣ ಕಾಮಗಾರಿ ಸಂಪೂರ್ಣ ಮುಕ್ತಾಯವಾಗುತ್ತಿದ್ದಂತೆ ನಿರ್ವಹಣೆದಾರರು ಅದನ್ನು ವಹಿಸಿಕೊಳ್ಳುವ ರೀತಿಯಲ್ಲಿ ಯೋಜನೆ ಮಾಡಬೇಕಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.