
ಉಪ್ಪಿನಬೆಟಗೇರಿ: ಮಹಾತ್ಮ ಗಾಂಧೀಜಿ ಅವರ ಗ್ರಾಮ ಸ್ವರಾಜ್ ಕನಸು ಸಾಕಾರಗೊಳಿಸಲು ಶ್ರಮಿಸಿದ ಧಾರವಾಡ ತಾಲ್ಲೂಕಿನ ಮಾದನಬಾವಿ ಗ್ರಾಮ ಪಂಚಾಯಿತಿಗೆ 2023-24ನೇ ಸಾಲಿನ ‘ಗಾಂಧಿ ಗ್ರಾಮ ಪುರಸ್ಕಾರ’ ಲಭಿಸಿದೆ.
ಮಾದನಬಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮುಗಳಿ, ಹೊಸೆಟ್ಟಿ ಗ್ರಾಮಗಳು ಇದ್ದು, ಒಟ್ಟು 16 ಜನ ಸದಸ್ಯರು ಇದ್ದಾರೆ. ಈ ಮೂರು ಗ್ರಾಮಗಳಲ್ಲಿ 5,500 ಜನಸಂಖ್ಯೆ ಇದೆ.
ಮೂರು ಹಿರಿಯ, ಒಂದು ಕಿರಿಯ ಪ್ರಾಥಮಿಕ ಶಾಲೆ, ಒಂದು ಪ್ರೌಢಶಾಲೆ ಇದ್ದು, ಎಂಟು ಅಂಗನವಾಡಿ ಕೇಂದ್ರಗಳಿವೆ.
ಪಂಚಾಯತ್‌ರಾಜ್ ಇಲಾಖೆ ನಿಗದಿಪಡಿಸಿದ ಮಾನದಂಡದಂತೆ ಉತ್ತಮ ಆಡಳಿತ, ಸಾಮಾನ್ಯ ಸಭೆ ನಡೆಸುವುದು, ಗ್ರಾಮ ಮತ್ತು ವಾರ್ಡ್ ಸಭೆಗಳ ಆಯೋಜನೆ, ಜನಸ್ಪಂದನ, ಮೂಲ ಸೌಕರ್ಯ ಕಲ್ಪಿಸುವುದು ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ಈ ಗ್ರಾಮ ಪಂಚಾಯಿತಿ ಮುಂದೆ ಇದೆ.
ಗ್ರಾಮಗಳ ಸ್ವಚ್ಚತೆಗೆ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲಾಗಿದೆ. ಕೂಸಿನ ಮನೆಗೆ ಸರ್ಕಾರ ನೀಡಿದ ₹1 ಲಕ್ಷ ಅನುದಾನದಲ್ಲಿ ಮಕ್ಕಳಿಗೆ ಆಟಿಕೆ, ಅಡುಗೆಯ ಸಾಮಗ್ರಿ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಲಾಘಿದೆ.
15ನೇ ಹಣಕಾಸು ಯೋಜನೆಯಲ್ಲಿ ಎಸ್.ಸಿ ಎಸ್.ಟಿ ಕಾಲೊನಿ ಹಾಗೂ ಸ್ಮಶಾನಗಟ್ಟಿಯಲ್ಲಿ ಹೈಮಾಸ್ಟ್ ದೀಪ ಅಳವಡಿಸಲಾಗಿದೆ. ಚರಂಡಿ, ಸಿ.ಡಿ ಮತ್ತು ಸಿ.ಸಿ ರಸ್ತೆ ನಿರ್ಮಾಣ, ಗಟಾರಗಳ ಸ್ವಚ್ಚತೆ, ನೀರಿನ ನಿರ್ವಹಣೆಗೆ ಒತ್ತು ನೀಡಲಾಗಿದೆ.
ನರೇಗಾ ಯೋಜನೆ ಅಡಿ ಅಮೃತ ಸರೋವರ ನಿರ್ಮಾಣ ಮಾಡಲಾಗಿದ್ದು, ಪಕ್ಕದಲ್ಲಿ ಧ್ವಜದ ಕಟ್ಟೆ ನಿರ್ಮಿಸಲಾಗಿದೆ. ಕೂಲಿಕಾರರಿಗೆ ಉಚಿತ ಆರೋಗ್ಯ ತಪಾಸಣೆ, ಅವರ ಮಕ್ಕಳಿಗೆ ಕೂಸಿನ ಮನೆಯಲ್ಲಿರಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. 15ನೇ ಹಣಕಾಸಿನ ಯೋಜನೆ ಅಡಿ ₹1 ಲಕ್ಷ ವೆಚ್ಚದಲ್ಲಿ ಡಿಜಿಟಲ್ ಗ್ರಂಥಾಲಯದಲ್ಲಿ ಪೀಠೋಪಕರಣ ಹಾಗೂ ಕಂಪ್ಯೂಟರ್, ಟಿವಿ ಅಳವಡಿಸಲಾಗಿದೆ.
ಗ್ರಾಮದ ಅಭಿವೃದ್ಧಿ ಪರಿಗಣಿಸಿ ಗಾಂಧಿ ಗ್ರಾಮ ಪುರಸ್ಕಾರ ನೀಡಲಾಗಿದೆ. ಇದು ನಮ್ಮ ಶ್ರಮಕ್ಕೆ ಸಂದ ಗೌರವ. ಇದಕ್ಕಾಗಿ ಎಲ್ಲರೂ ಸಹಕಾರ ನೀಡಿದ್ದಾರೆಎಸ್.ಆರ್.ಬೆಟದೂರ ಪಿಡಿಒ ಮಾದನಬಾವಿ ಗ್ರಾ.ಪಂ
ಮಾದನಬಾವಿ ಸೇರಿ ಮುಗಳಿ ಹೊಸೆಟ್ಟಿ ಗ್ರಾಮಗಳ ಅಭಿವೃದ್ದಿಗೆ ಶ್ರಮಿಸಲಾಗಿದೆ. ಎಲ್ಲರ ಸಹಕಾರದಿಂದ ಈ ಪ್ರಶಸ್ತಿ ಲಭಿಸಿದೆ. ಸಮಾಜ ಸೇವೆಗೆ ಶಕ್ತಿ ಬಂದಿದೆಸಂತೋಷಗೌಡ್ರ ಪಾಟೀಲ ಅಧ್ಯಕ್ಷ ಮಾದನಬಾವಿ ಗ್ರಾ.ಪಂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.