ADVERTISEMENT

‘ಮಹದಾಯಿ’ ನಮ್ಮ ಹಕ್ಕು, ಜಾರಿ ಮಾಡಿ: ಶಾಸಕ ಎನ್‌.ಎಚ್‌.ಕೋನರಡ್ಡಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 5:31 IST
Last Updated 13 ಡಿಸೆಂಬರ್ 2025, 5:31 IST
ಎನ್.ಎಚ್. ಕೋನರಡ್ಡಿ
ಎನ್.ಎಚ್. ಕೋನರಡ್ಡಿ   

ಹುಬ್ಬಳ್ಳಿ: ‘ಮಹದಾಯಿ, ಕಳಸಾ ಬಂಡೂರಿ ಯೋಜನೆ ನಮ್ಮ ಹಕ್ಕು. ಯೋಜನೆ ಅನುಷ್ಠಾನ ಮಾಡದಿದ್ದರೆ ಪ್ರಾಣ ತ್ಯಾಗಕ್ಕೂ ಸಿದ್ಧ’ ಎಂದು ನವಲಗುಂದ ಶಾಸಕ ಎನ್‌.ಎಚ್‌.ಕೋನರಡ್ಡಿ ಹೇಳಿದರು.

ಬೆಳಗಾವಿಯ ಸುವರ್ಣ ಸೌಧದ ಅಧಿವೇಶನದಲ್ಲಿ ಗುರುವಾರ ನಡೆದ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ ವಿಶೇಷ ಚರ್ಚೆಯಲ್ಲಿ ಮಾತನಾಡಿದ ಅವರು, ‘ಮಹದಾಯಿ ಕಳಸಾ– ಬಂಡೂರಿ ನಾಲಾ ಜೋಡಣೆ ಅನುಷ್ಠಾನಕ್ಕಾಗಿ ವಿಧಾನಸಭೆಯ ಎಲ್ಲಾ ಸದಸ್ಯರು ಒಮ್ಮತ ತೀರ್ಮಾನದೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಧರಿಸಬೇಕು’ ಎಂದು ಮನವಿ ಮಾಡಿದರು. 

‘ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಇಲಾಖೆಯ ವನ್ಯಜೀವಿ ಮಂಡಳಿ ಅನುಮತಿ ಪಡೆದರೆ ಯಾವುದೇ ಕಾನೂನು ತೊಡಕು ಇಲ್ಲದೇ ಈ ಯೋಜನೆಯ ಕಾಮಗಾರಿ ಆರಂಭಿಸಬಹುದು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ರಾಜ್ಯದ ಸಂಸದರು ಪಕ್ಷಾತೀತವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ವಪಕ್ಷ ನಿಯೋಗದೊಂದಿಗೆ ಪ್ರಧಾನಿ ಅವರನ್ನು ಭೇಟಿ ಮಾಡಿ ಯೋಜನೆ ಅನುಷ್ಠಾನಕ್ಕೆ ಮನವಿ ಮಾಡಬೇಕು’ ಎಂದು ಒತ್ತಾಯಿಸಿದರು. 

ADVERTISEMENT

‘ವನ್ಯಜೀವಿ ಮಂಡಳಿ ಅನುಮತಿ ದೊರೆತ ತಕ್ಷಣ ಯೋಜನೆ ಜಾರಿ ಮಾಡಲು ಮುಖ್ಯಮಂತ್ರಿ ಅವರು ಕ್ರಮಕೈಗೊಳ್ಳುತ್ತಾರೆ. ಆದ್ದರಿಂದ ಪಕ್ಷತೀತವಾಗಿ ಎಲ್ಲಾ ಶಾಸಕರು ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯಲು ಕೈಜೋಡಿಸಬೇಕು’ ಎಂದು ಮನವಿ ಮಾಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.