
ಕುಂದಗೋಳ: ತಾಲ್ಲೂಕಿನಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭವಾಗದ ಕಾರಣ ರೈತರು ಪರದಾಡುವಂತಾಗಿದೆ.
ಎಂಐಎಸ್ (ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ) ಯೋಜನೆಯಡಿ ದರ ನಿಗದಿ ಮಾಡಿದ್ದು, ಕುಂದಗೋಳ ಎ.ಪಿ.ಎಂ.ಸಿಯಲ್ಲಿ ರೈತರು ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಈ ಯೋಜನೆಯ ಸಹಾಯಧನ ಪಡೆಯಲು, ಎಫ್.ಐ.ಡಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಉತಾರ ದಾಖಲಾತಿ, ಬಯೊಮೆಟ್ರಿಕ್ ಮೂಲಕ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ. ನೋಂದಣಿ ನಂತರ ನಿಗದಿತ 8 ವ್ಯಾಪಾರಸ್ಥರ ಮೂಲಕ ಖರೀದಿ ಪ್ರಕ್ರಿಯೆ ನಡೆಯುತ್ತದೆ.
ರೈತರಿಂದ ವ್ಯಾಪಾರಸ್ಥರು ಖರೀದಿ ಮಾಡುವ ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಲ್‌ಗೆ ₹250 ಸಹಾಯಧನ ನಿಡಲಾಗುತ್ತದೆ. ಎಕರೆಗೆ 12 ಕ್ವಿಂಟಲ್‌ನಂತೆ ಗರಿಷ್ಠ 50 ಕ್ವಿಂಟಲ್‌ಗೆ ಸಹಾಯಧನ ದೊರೆಯಲಿದೆ. ಸಹಾಯಧನ ಸೇರಿ ಪ್ರತಿ ಕ್ವಿಂಟಲ್ ದರ ₹2,150 ಎಂದು ಎ.ಪಿ.ಎಂ.ಸಿ ಕಾರ್ಯದರ್ಶಿ ಎಸ್.ಎನ್.ವಿನಾಯಕ ಮಾಹಿತಿ ನಿಡಿದರು.
ಈ ಕುರಿತು ರೈತ ಶಂಕರಗೌಡ ದೊಡ್ಡಮನಿ ಮಾತನಾಡಿ, ಎಕರೆಗೆ 20 ರಿಂದ30 ಕ್ವಿಂಟಲ್ ಇಳುವರಿ ಬಂದಿದೆ. ಆದರೆ, 50 ಕ್ವಿಂಟಲ್ ಮಾತ್ರ ಖರೀದಿಗೆ ನಿಗದಿಪಡಿಸಿದ್ದು, ಇದರಿಂದ ರೈತರಿಗೆ ಅನ್ಯಾಯವಾಗಲಿದೆ ಎಂದರು.
ಕುಂದಗೋಳ ಎ.ಪಿ.ಎಂ.ಸಿ ಯಲ್ಲಿ 300ಕ್ಕೂ ಹೆಚ್ಚು ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, ಖರೀದಿ ಕೇಂದ್ರ ಆರಂಭವಾಗದ ಕಾರಣ ತೊಂದರೆಯಾಗಿದೆ ಎಂದು ರೈತರು ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.