ADVERTISEMENT

ಮಲಪ್ರಭಾ ಬಲದಂಡೆ ಕಾಲುವೆ: ‘10 ದಿನ ನಿತ್ಯ 900 ಕ್ಯುಸೆಕ್‌ ನೀರು’

ಕೆರೆಗಳಿಗೆ ನೀರು ಹರಿಸಲು ಆದೇಶ

​ಪ್ರಜಾವಾಣಿ ವಾರ್ತೆ
Published 11 ಮೇ 2025, 16:30 IST
Last Updated 11 ಮೇ 2025, 16:30 IST
ದಿವ್ಯಪ್ರಭು
ದಿವ್ಯಪ್ರಭು   

ಧಾರವಾಡ: ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ಬಲದಂಡೆ ಕಾಲುವೆ ವ್ಯಾಪ್ತಿಯ ಕೆರೆಗಳಿಗೆ ಮೇ 13ರಿಂದ 22 ರವರೆಗೆ ನೀರು ಹರಿಸಲು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಆದೇಶಿಸಿದ್ದು, ನಿಗಾ ನಿಟ್ಟಿನಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದ್ದಾರೆ.

ನವಲಗುಂದ, ಅಣ್ಣಿಗೇರಿ ಹುಬ್ಬಳ್ಳಿ ಹಾಗೂ ಕುಂದಗೋಳ ತಾಲ್ಲೂಕಿನ ವಿವಿಧ ಗ್ರಾಮಗಳ ಕುಡಿಯುವ ನೀರು ಪೂರೈಸುವ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ನರಗುಂದ ಹಾಗೂ ರೋಣ ತಾಲ್ಲೂಕಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಮತ್ತು ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಲು ನರಗುಂದ ಶಾಖಾ ಕಾಲುವೆಗೆ ಪ್ರತಿದಿನ 700 ಕ್ಯುಸೆಕ್‌ನಂತೆ 10 ದಿನಹಾಗೂ ಮಲಪ್ರಭಾ ಬಲದಂಡೆ ಕಾಲುವೆಗೆ ಪ್ರತಿದಿನ 900 ಕ್ಯುಸೆಕ್‌ನಂತೆ 10 ದಿನ ನೀರು ಹರಿಸಲಾಗುತ್ತದೆ. ಕಾಲುವೆಯ ಅಚ್ಚುಕಟ್ಟು ಪ್ರದೇಶದ ಜನರು, ರೈತರು ಈ ನೀರನ್ನು ಕೃಷಿ ಹಾಗೂ ಇತರ ಉದ್ದೇಶಕ್ಕೆ ಬಳಸಿಕೊಳ್ಳುವಂತಿಲ್ಲ. ಈ ನಿರ್ಬಂಧ ಉಲ್ಲಂಘಿಸಿದರೆ ಕ್ರಮ ಜರುಗಿಸಲಾಗುವುದು.

ಧಾರವಾಡ ಉಪವಿಭಾಗಾಧಿಕಾರಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ, ಧಾರವಾಡ ಗ್ರಾಮೀಣ ಡಿಸಿಪಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಹಾಗೂ ಗ್ರಾಮೀಣ ನೀರು ಸರಬರಾಜು ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಹಾಗೂ ಹೆಸ್ಕಾಂ ಹುಬ್ಬಳ್ಳಿ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಅವರನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ.

ADVERTISEMENT

ಮಲಪ್ರಭಾ ಜಲಾಶಯದಲ್ಲಿ ನೀರಿನ ಪ್ರಮಾಣ ಕಳೆದ ವರ್ಷಕ್ಕಿಂತ ಕಡಿಮೆ ಇದೆ. ಈಗ ಹರಿಯಬಿಟ್ಟ ನೀರು ಪೋಲಾಗದಂತೆ ನಿಗಾ ವಹಿಸಬೇಕು. ಕೆರೆಗೆ ನೀರು ತುಂಬಿಸಿಕೊಳ್ಳಲು ವಿಫಲವಾದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಲಾಗುವುದು. ನೀರು ಹರಿಸುವ ದಿನಗಳಲ್ಲಿ ಕಾಲುವೆ ಭಾಗದ ವಿದ್ಯುತ್ ಪಂಪ‍್‌ಸೆಟ್‌ಗಳ ವಿದ್ಯುತ್ ಸಂಪರ್ಕವನ್ನು ಕಡ್ಡಾಯವಾಗಿ ಹೆಸ್ಕಾಂನವರು ಕಡಿತಗೊಳಿಸಬೇಕು. ಸೌರವಿದ್ಯುತ್‌ (ಸೋಲಾರ್‌) ಆಧಾರಿತ ಮೋಟಾರ್, ಜನರೇಟರ್‌ಗಳ ಸಂಪರ್ಕವನ್ನು ಸಹ ಕಡಿತಗೊಳಿಸಬೇಕು ಎಂದೂ ತಿಳಿಸಿದ್ಧಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.