ADVERTISEMENT

ಹುಬ್ಬಳ್ಳಿ | ಸಾವಿರಾರು ಮಕ್ಕಳಿಗಿಲ್ಲ ಪೌಷ್ಟಿಕ ಆಹಾರ

ಗಣೇಶ ವೈದ್ಯ
Published 6 ಮಾರ್ಚ್ 2024, 4:53 IST
Last Updated 6 ಮಾರ್ಚ್ 2024, 4:53 IST
ಪೌಷ್ಟಿಕ ಆಹಾರ (ಸಾಂದರ್ಭಿಕ ಚಿತ್ರ)
ಪೌಷ್ಟಿಕ ಆಹಾರ (ಸಾಂದರ್ಭಿಕ ಚಿತ್ರ)   

ಹುಬ್ಬಳ್ಳಿ: ಅರಿವಿನ ಕೊರತೆ, ಬಡತನ, ಅನುವಂಶೀಯತೆ ಹಾಗೂ ಪೋಷಕರ ನಿರ್ಲಕ್ಷ್ಯದ ಪರಿಣಾಮ ಧಾರವಾಡ ಜಿಲ್ಲೆಯಲ್ಲಿ ಸಾವಿರಕ್ಕೂ ಅಧಿಕ ಮಕ್ಕಳು ಅಪೌಷ್ಟಿಕತೆಯಿಂದ ಬಳಲುವಂತಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗೆ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿರುವ ಕಾರಣ ಕೆಲ ವರ್ಷಗಳಿಂದ ಅಪೌಷ್ಟಿಕ ಮಕ್ಕಳ ಪ್ರಮಾಣ ತಗ್ಗಿದೆ. ಆದರೂ ಜಿಲ್ಲೆಯಲ್ಲಿ ಇನ್ನೂ 1,823 ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ಇದ್ದಾರೆ.ಅವರಲ್ಲಿ 87 ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ ಸಮಸ್ಯೆ ಇದೆ.

ಜಿಲ್ಲೆಯ ಬೇರೆ ಪ್ರದೇಶಗಳಿಗೆ ಹೋಲಿಸಿದರೆ ಹುಬ್ಬಳ್ಳಿ–ಧಾರವಾಡ ಶಹರದಲ್ಲಿ ಅಪೌಷ್ಟಿಕತೆ ‌ಪ್ರಮಾಣ ಹೆಚ್ಚಿದೆ. ಹುಬ್ಬಳ್ಳಿ ಗ್ರಾಮೀಣ ತಾಲ್ಲೂಕು ಈ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ADVERTISEMENT

ಪೌಷ್ಟಿಕತೆ ಎಂದರೇನು?: ಆರು ತಿಂಗಳಿನಿಂದ ಆರು ವರ್ಷದ ಒಳಗಿನ ಮಕ್ಕಳು ತಮ್ಮ ಎತ್ತರಕ್ಕೆ ತಕ್ಕಂತೆ ದೇಹತೂಕ ಹೊಂದಿರದಿದ್ದರೆ ಆ ಮಗು ಅಪೌಷ್ಟಿಕತೆಯಿಂದ ಬಳಲುತ್ತಿದೆ ಎಂದು ನಿರ್ಧರಿಸಲಾಗುತ್ತದೆ.

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಕಾರ್ಯಕರ್ತರು ಪ್ರತಿ ಮೂರು ತಿಂಗಳಿಗೊಮ್ಮೆ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಸಮೀಕ್ಷೆ ನಡೆಸಿ, ಅಪೌಷ್ಟಿಕತೆಯ ಶಂಕೆ ಇದ್ದಲ್ಲಿ ಅಂಥ ಮಗುವನ್ನು ಸರ್ಕಾರಿ ಆಸ್ಪತ್ರೆಯ ಮಕ್ಕಳ ತಜ್ಞರ ಬಳಿ ಪರೀಕ್ಷೆಗೆ ಒಳಪಡಿಸುತ್ತಾರೆ. ನಂತರ ಪೌಷ್ಟಿಕ ಪುನರ್ವಸತಿ ಕೇಂದ್ರಕ್ಕೆ ಮಕ್ಕಳನ್ನು ದಾಖಲಿಸಿ, 14 ದಿನ ಅವರಿಗೆ ಬೇಕಾದ ಪೌಷ್ಟಿಕಾಂಶ ಯುಕ್ತ ಆಹಾರ ನೀಡಲಾಗುತ್ತದೆ. ಜೊತೆಗೆ ಈ ಮಕ್ಕಳ ತಾಯಂದಿರನ್ನೂ ಅಲ್ಲಿಯೇ ಉಳಿಸಿಕೊಂಡು, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ನೀಡಲಾಗುತ್ತದೆ.

‘ಪೌಷ್ಟಿಕ ಪುನರ್ವಸತಿ ಕೇಂದ್ರದಲ್ಲಿದ್ದ 14 ದಿನಗಳಲ್ಲೇ ಮಗುವನ್ನು ಸಂಪೂರ್ಣವಾಗಿ ಅಪೌಷ್ಟಿಕತೆ ಮುಕ್ತವಾಗಿಸಲು ಸಾಧ್ಯವಿಲ್ಲ. ಆದರೆ, ಮಗುವಿನ ತಾಯಿಗೆ ಆಪ್ತ ಸಮಾಲೋಚನೆ ಮೂಲಕ ಪೌಷ್ಟಿಕ ಆಹಾರ, ಸ್ವಚ್ಛತೆ ಮತ್ತು ಆರೈಕೆ ಕುರಿತು ತಿಳಿವಳಿಕೆ ನೀಡಲಾಗುತ್ತದೆ. ಅದರಿಂದ ಮಗು ಮನೆಗೆ ತೆರಳಿದ ನಂತರವೂ ಪೌಷ್ಟಿಕ ಆಹಾರ ಪಡೆಯಲು ಸಾಧ್ಯ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪದ್ಮಾವತಿ ಜಿ. ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.