ADVERTISEMENT

ಕಲಘಟಗಿ | ಪ್ರಾಣಿ–ಮಾನವ ಸಂಘರ್ಷ: ಲಭಿಸದ ಪರಿಹಾರ

ಕಲಘಟಗಿ ತಾಲ್ಲೂಕಿನಲ್ಲಿ 18 ಸಾವಿರ ಹೆಕ್ಟೇರ್ ಅರಣ್ಯ, ಭತ್ತದ ಬೆಳೆ ಪ್ರದೇಶ ಕುಸಿತ; ಮೆಕ್ಕೆಜೋಳ, ಕಬ್ಬು ಹೆಚ್ಚಳ

ಪ್ರಜಾವಾಣಿ ವಿಶೇಷ
Published 4 ನವೆಂಬರ್ 2025, 5:24 IST
Last Updated 4 ನವೆಂಬರ್ 2025, 5:24 IST
ಕಲಘಟಗಿ ತಾಲ್ಲೂಕಿನ ಗಳಗಿ ಹುಲಕೊಪ್ಪ ಗ್ರಾಮದ ರೂಸ್ತುಮಸಾಬ್ ದಾದೇಸಾಬ್ ತೇರಗಾಂವ ರೈತರ ಜಮೀನಿನಲ್ಲಿ ಕೊಯ್ಲಿಗೆ ಬಂದಿದ್ದ ಮೆಕ್ಕೆಜೋಳದ ತೆನೆಯನ್ನು ಕಾಡು ಹಂದಿಗಳು ತಿಂದು ಹಾಕಿರುವುದು
ಕಲಘಟಗಿ ತಾಲ್ಲೂಕಿನ ಗಳಗಿ ಹುಲಕೊಪ್ಪ ಗ್ರಾಮದ ರೂಸ್ತುಮಸಾಬ್ ದಾದೇಸಾಬ್ ತೇರಗಾಂವ ರೈತರ ಜಮೀನಿನಲ್ಲಿ ಕೊಯ್ಲಿಗೆ ಬಂದಿದ್ದ ಮೆಕ್ಕೆಜೋಳದ ತೆನೆಯನ್ನು ಕಾಡು ಹಂದಿಗಳು ತಿಂದು ಹಾಕಿರುವುದು   

ಕಲಘಟಗಿ: ಅರಣ್ಯ ಪ್ರದೇಶದಂಚಿನ ಗ್ರಾಮಗಳ ಜನರಿಗೆ ಹಾಗೂ ರೈತರ ಜಮೀನುಗಳಿಗೆ ಕಾಡು ಪ್ರಾಣಿಗಳ ಹಾವಳಿಯಿಂದ ಮಾನವ ಹಾಗೂ ಪ್ರಾಣಿಗಳ ಮಧ್ಯೆ ನಿರಂತರ ಸಂಘರ್ಷಕ್ಕೆ ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ.

ಕಲಘಟಗಿ ತಾಲ್ಲೂಕು ಅರೆ ಮಲೆನಾಡು ಪ್ರದೇಶವಾಗಿದ್ದು, ತಾಲ್ಲೂಕಿನಲ್ಲಿ 18 ಸಾವಿರ ಹೆಕ್ಟೇರ್ ಪ್ರದೇಶಕ್ಕಿಂತ ಹೆಚ್ಚು ದಟ್ಟವಾದ ಅರಣ್ಯ ಪ್ರದೇಶವಿದೆ. ಹಲವು ಗ್ರಾಮಗಳು ಅರಣ್ಯ ಗುಡ್ಡಗಾಡು ಪ್ರದೇಶಕ್ಕೆ ಹೊಂದಿಕೊಂಡಿವೆ. ಒಂದು ಕಾಲದಲ್ಲಿ ಭತ್ತದ ಕಣಜ ಎಂದು ಹೆಸರುವಾಸಿಯಾಗಿದ್ದ ತಾಲ್ಲೂಕು ಈಗ ವಾರ್ಷಿಕ ಬೆಳೆಗಳಾದ ಮೆಕ್ಕೆಜೋಳ, ಕಬ್ಬು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ. ಇದರಿಂದ ಕಾಡು ಪ್ರಾಣಿಗಳು ಆಹಾರ, ವಾಸಕ್ಕಾಗಿ ನಾಡಿಗೆ ವಲಸೆ ಬಂದು ರೈತರ ಮತ್ತು ಪ್ರಾಣಿಗಳ ನಡುವೆ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ.

ತಾಲ್ಲೂಕಿನ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ತಂಬೂರ, ಸಂಗಟಿಕೊಪ್ಪ, ಈಚನಳ್ಳಿ ತಾಂಡಾ, ಬೈಚವಾಡ, ಹುಲ್ಲಂಬಿ, ಬೀರವಳ್ಳಿ, ಗಳಗಿ ಹುಲಕೊಪ್ಪ ಇನ್ನಿತರ ಗ್ರಾಮಗಳು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿವೆ. ಪ್ರತಿ ವರ್ಷ ಆನೆ, ಚಿರತೆ, ಕರಡಿ, ಕಾಡು ಹಂದಿಗಳು ಅಪಾರ ಪ್ರಮಾಣದಲ್ಲಿ ವಲಸೆ ಬರುತ್ತಿವೆ.

ADVERTISEMENT

ರೈತರ ಬೆಳೆಗಳಾದ ಭತ್ತ, ಕಬ್ಬು, ಮೆಕ್ಕೆಜೋಳ, ಹುರುಳಿ, ಅಡಿಕೆ ಹಾಗೂ ಬಾಳೆ ತೋಟಗಳು ಬೆಳೆಯುದರಿಂದ ಬೆಳೆ ಕೊಯ್ಲು ಮಾಡುವವರಿಗೆ ರೈತರ ಬೆಳೆಗಳು ಕಾಡು ಪ್ರಾಣಿಗಳಿಗೆ ಆಹಾರಕ್ಕೆ ಮೊರೆ ಇಡುತ್ತಿವೆ. ಪ್ರಾಣಿಗಳು ಬೆಳೆಗಳ ಜೊತೆಗೆ ಮನುಷ್ಯರ, ರೈತರ ಜಾನುವಾರು, ಸಾಕು ನಾಯಿಗಳ ಮೇಲು ದಾಳಿಯಿಂದ  ಭಯದ ವಾತಾವರಣ ನಿರ್ಮಾಣ ಮಾಡತೊಡಗಿವೆ.

ಈಗಾಗಲೇ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಸಂಗಟಿಕೊಪ್ಪ, ತಂಬೂರ ಭಾಗದ ಕಡೆ 40 ಕಿ.ಮೀ. ಆನೆ ಕಂದಕ ನಿರ್ಮಾಣವಾಗಿದೆ. ಇನ್ನೂ 70 ಕಿ.ಮೀ ಮೀಟರ್ ಕಂದಕ ನಿರ್ಮಾಣಕ್ಕೆ ರೈತರ ಬೇಡಿಕೆ ಇದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

‘ತಾಲ್ಲೂಕಿನ ಸೋಮನಕೊಪ್ಪ ಗ್ರಾಮದ ಗಣೇಶ ಬಸಪ್ಪ ಬಾರಕೇರ (58) ಜಮೀನಿಗೆ ತೆರಳಿದಾಗ ನರಿಯೊಂದು ದಾಳಿ ನಡೆಸಿ ಗಾಯಗೊಳ್ಳಿಸಿದ್ದು, ಹುಬ್ಬಳ್ಳಿ ಕಿಮ್ಲ್‌ನಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ಜರುಗಿತ್ತು. ಪರಿಹಾರಕ್ಕೆ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಲಾಗಿದೆ’ ಎಂದು ಕುಟುಂಬದವರು ತಿಳಿಸಿದರು. 

‘ಬೆಳೆ ಹಾನಿ ಹಾಗೂ ಪ್ರಾಣ ಹಾನಿಯಾದ ಕುರಿತು ಪರಿಹಾರಕ್ಕೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ’ ಎಂದು ವಲಯ ಅರಣ್ಯಧಿಕಾರಿ ಅರುಣ್ ಕುಮಾರ್ ಅಷ್ಟಗಿ ತಿಳಿಸಿದರು.

ಪ್ರಾಣಿಗಳಿಂದ ಬೆಳೆ ಹಾನಿ

2024-25 ಸಾಲಿನಲ್ಲಿ 84 ಎಕರೆ ಬೆಳೆಹಾನಿಗೆ 256 ರೈತರು ಅರ್ಜಿ ಸಲ್ಲಿಸಿದ್ದು 12.70 ಲಕ್ಷ ಪರಿಹಾರ ದೊರಕಿದೆ. 2025-26 ರಲ್ಲಿ ಈಗಾಗಲೇ 132 ಎಕರೆ ಹಾನಿಗೆ 410 ರೈತರಿಂದ ಅರ್ಜಿ ಬಂದಿದ್ದು ₹ 37 ಲಕ್ಷ ಪರಿಹಾರಕ್ಕೆ ವರದಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

2025 ಜೂನ್ ತಿಂಗಳ ಮುಂಗಾರು ಹಂಗಾಮಿನ ಜಮೀನಿನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡುವಾಗ ಕಾಡು ಹಂದಿ ದಾಳಿ ಮಾಡಿ ಗಾಯಗೊಳ್ಳಿಸಿದ್ದು. ಇನ್ನು ಸಣ್ಣ ಪುಟ್ಟ ನೋವು ಇದೆ. ಅರಣ್ಯ ಇಲಾಖೆ ಕೇವಲ 30 ಸಾವಿರ ಹಣದ ಮಂಜೂರಾತಿ ಪತ್ರ ನೀಡಿದ್ದಾರೆ. ಹೆಚ್ಚಿನ ಪರಿಹಾರ ನೀಡಬೇಕು ಎಂದು ತಾಲ್ಲೂಕಿನ ಗಳಗಿ ಹುಲಕೊಪ್ಪ ಗ್ರಾಮದ ರುಸ್ತುಂಸಾಬ್ ತೇರಗಾಂವ ಒತ್ತಾಯಿಸಿದರು. 

‘ಜಮೀನಿನಲ್ಲಿ ಕಟಾವಿಗೆ ಬಂದ ಹುರುಳಿ ಬೆಳೆ ಕೊಯ್ಲು ಮಾಡುತ್ತಿದ್ದಾಗ ಕಾಡು ಹಂದಿ ಏಕಾಏಕಿ ದಾಳಿ ಮಾಡಿ ತೀವ್ರ ಗಾಯಗೊಳ್ಳಿಸಿದ್ದು ಸ್ವಲ್ಪ ಚೇತರಿಕೆಯಾಗಿದೆ. ಒಂದು ಕಣ್ಣಿನ ದೃಷ್ಟಿ ಸರಿಯಾಗಿ ಕಾಣುವುದಿಲ್ಲ ಚಿಕಿತ್ಸೆಗೆ ಲಕ್ಷಾಂತರ ಹಣ ಕಳೆದುಕೊಂಡಿದ್ದೇನೆ. ಸಚಿವ ಸಂತೋಷ್ ಲಾಡ್ ಅವರು ₹ 50 ಸಾವಿರ ವೈಯಕ್ತಿಕ ಪರಿಹಾರ ನೀಡಿದ್ದು ಬಿಟ್ಟರೆ ಅರಣ್ಯ ಇಲಾಖೆಯಿಂದ ₹1 ಲಕ್ಷ ಪರಿಹಾರ ದೊರಕಿಲ್ಲ ಎಂದು ತಾಲ್ಲೂಕಿನ ಗಳಗಿ ಹುಲಕೊಪ್ಪ ಗ್ರಾಮದ ಸಿದ್ದಲಿಂಗಪ್ಪ ಶಿವಪ್ಪ ಹೋಜಿ ಅಳಲು ತೋಡಿಕೊಂಡರು.

ಕಾಡಿನಲ್ಲಿ ಪ್ರಾಣಿಗಳಿಗೆ ಆಹಾರ ಸಿಗುವುದು ಸ್ವಲ್ಪ ಕಷ್ಟವಾಗಿದ್ದರಿಂದ ನಾಡಿನತ್ತ ಮುಖ ಮಾಡುತ್ತಿವೆ. ರೈತರು ಜಮೀನಿಗೆ ತೆರಳುವಾಗ ಎಚ್ಚರ ವಹಿಸಬೇಕು
–ಅರುಣ್ ಕುಮಾರ್, ಅಷ್ಟಗಿ ವಲಯ ಅರಣ್ಯಧಿಕಾರಿ
ಜಮೀನಿನಲ್ಲಿ ಇದ್ದಾಗ ಕರಡಿ ಹಿಂದಿನಿಂದ ದಾಳಿ ನಡೆಸಿ ತಲೆಗೆ ತೀವ್ರ ಗಾಯಗೊಳಿಸಿತ್ತು. ಈಗ ಸ್ವಲ್ಪ ಚೇತರಿಯಾಗಿದೆ. ಆದರೆ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದರೂ ಯಾವುದೇ ಪರಿಹಾರ ದೊರಕಿಲ್ಲ
–ಮಾರುತಿ ರಾಮಪ್ಪ ರಾಠೋಡ್‌, ಸಂತ್ರಸ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.