ADVERTISEMENT

ಲೆಕ್ಕ ಬಿಡಿಸುವ ಕಲೆ ಅರಿತ ಮಕ್ಕಳು

ಎಂಟು ವಾರಗಳ ಗಣಿತ ಕಾರ್ಯಾಗಾರ ಸಂಪನ್ನ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 19:45 IST
Last Updated 29 ಡಿಸೆಂಬರ್ 2019, 19:45 IST
ಸುಲಭ ಗಣಿತ ಕಾರ್ಯಾಗಾರದಲ್ಲಿ ಗಣಿತ ತಜ್ಞ ವಿಶ್ವನಾಥ ನಾಗಠಾಣ ಅವರು ಮಕ್ಕಳಿಗೆ ಗಣಿತದ ಸರಳ ಮಾರ್ಗಗಳನ್ನು ವಿವರಿಸಿದರು 
ಸುಲಭ ಗಣಿತ ಕಾರ್ಯಾಗಾರದಲ್ಲಿ ಗಣಿತ ತಜ್ಞ ವಿಶ್ವನಾಥ ನಾಗಠಾಣ ಅವರು ಮಕ್ಕಳಿಗೆ ಗಣಿತದ ಸರಳ ಮಾರ್ಗಗಳನ್ನು ವಿವರಿಸಿದರು    

ಧಾರವಾಡ: ‘ಗಣಿತದ ಭಾಷೆ ತಿಳಿಯದೇ ಇರುವುದರಿಂದ ಅದು ಮಕ್ಕಳಿಗೆ ಕ್ಲಿಷ್ಟಕರವಾಗುತ್ತದೆ. ಅದನ್ನು ಸರಳಿಕರಿಸಿ ಮಕ್ಕಳಿಗೆ ತಿಳಿಸಿದಾಗ, ಮಕ್ಕಳು ಆಟವಾಡುತ್ತ ಗಣಿತ ಕಲಿಕೆಯಲ್ಲಿ ತೊಡಗುತ್ತಾರೆ’ ಎಂದು ಗಣಿತ ತಜ್ಞ ವಿಶ್ವನಾಥ ನಾಗಠಾಣ ಹೇಳಿದರು.

‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗ ಸಹಯೋಗದಲ್ಲಿ ಗಣಿತ ತಜ್ಞ ವಿಶ್ವನಾಥ ನಾಗಠಾಣ ಅವರು ನಡೆಸಿಕೊಟ್ಟ ಸುಲಭ ಗಣಿತ ಮಾರ್ಗದರ್ಶಿ ಸರಳ ತಂತ್ರ ಕಾರ್ಯಾಗಾರದಲ್ಲಿ ಶಿಕ್ಷಕರು ಹಾಗೂ ಪಾಲಕರು ಅರಿತರು.

ವಿದ್ಯಾರ್ಥಿಗಳಲ್ಲಿ ಹೆಚ್ಚಾದ ಆತ್ಮವಿಶ್ವಾಸ, ಗಣಿತದ ಮೇಲೆ ಮೂಡಿದ ಪ್ರೀತಿ ಕಂಡ ಪಾಲಕರು ಹಿರಿಹಿರಿ ಹಿಗ್ಗಿದರು. ಇದು ತಮ್ಮ ಮಕ್ಕಳಿಗೆ ಮಾತ್ರವಲ್ಲ, ಸುಲಭ ಗಣಿತದ ಪ್ರಯೋಜನ ಇತರರಿಗೂ ಆಗಬೇಕು. ಈ ನಿಟ್ಟಿನಲ್ಲಿ ಪರಿಚಯದವರಿಗೂ ತಿಳಿಸಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ಎರಡು ಗಂಟೆಗಳ ಕಾಲ ನಡೆದ ಕಾರ್ಯಾಗಾರದಲ್ಲಿ ಮಕ್ಕಳಿಂದಲೇ ಕೆಲವು ಗಣಿತದ ಸಂಗತಿಗಳು ಮತ್ತು ಲೆಕ್ಕಗಳನ್ನು ಮೋಜು, ಮನರಂಜನೆ ಮೂಲಕವೇ ಬಿಡಿಸುವ ಪರೀಕ್ಷೆಯನ್ನು ನಡೆಸಲಾಯಿತು. ತಮಗೆ ಕೊಟ್ಟ ಪ್ರಶ್ನಾವಳಿಗೆ ಮಕ್ಕಳು ಅತ್ಯಂತ ಖುಷಿಯಿಂದ ಉತ್ತರ ಬರೆದರು.

‘ಪ್ರಶ್ನಾವಳಿ ಮೂಲಕ ಮಕ್ಕಳ ಗಣಿತ ಸಾಮರ್ಥ್ಯ ಅಳೆಯುವುದಲ್ಲ. ಬದಲಾಗಿ ಮಕ್ಕಳ ವಿಷಯ, ಆಸಕ್ತಿ, ಏಕಾಗ್ರತೆ, ಪ್ರಾಥಮಿಕ ಸಂಗತಿಗಳ ಪರಿಣಾಮಕಾರಿ ಗ್ರಹಿಕೆ ನಿರ್ಧರಿಸಲು ಸಾಧ್ಯವಾಗುತ್ತದೆ.ಮಕ್ಕಳಿಗೆ ಗಣಿತ ವಿಷಯದತ್ತ ಆಸಕ್ತಿ ಮೂಡಿಸುವ, ಆ ಮೂಲಕ ಬಹುತೇಕ ಮಕ್ಕಳು ಕಠಿಣ ಎಂದುಕೊಂಡಿರುವ ವಿಷಯವನ್ನು ಸರಳ ಎನಿಸುವಂತೆ ಕಲಿಸುವ ಪ್ರಯತ್ನವೊಂದು ಅತ್ಯಂತ ಯಶಸ್ವಿಯಾಗಿದೆ. ವಾರದಿಂದ, ವಾರಕ್ಕೆ ಪಾಲಕರು ತಮ್ಮ ಮಕ್ಕಳೊಂದಿಗೆ ಕಾರ್ಯಾಗಾರಕ್ಕೆ ಹೆಚ್ಚು ಹೆಚ್ಚಾಗಿ ಹಾಜರಾಗುತ್ತಿರುವುದೇ ಇದಕ್ಕೆ ಸಾಕ್ಷಿ’ ಎಂದು ನಾಗಠಾಣ ಹೇಳಿದರು.

ಎಂಟು ವಾರಗಳ ಗಣಿತ ಕಾರ್ಯಾಗಾರ ಭಾನುವಾರ ಕೊನೆಗೊಂಡಿತು.ಜ.5ರಂದು ಗಣಿತ ಕಾರ್ಯಾಗಾರದ ಸಮಾವೇಶ ನಡೆಯಲಿದೆ. ಮಾಹಿತಿಗಾಗಿ ಮೊ: 93791 62682, 93917 07088, 63617 86071.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.