ADVERTISEMENT

ಉತ್ಸವಮೂರ್ತಿಗಳಾದ ಪೂಜ್ಯ ಮಹಾಪೌರರು

ಅಖಿಲ ಕರ್ನಾಟಕ ಮಹಾಪೌರರ ಸಮಾವೇಶದಲ್ಲಿ ಕಲಬುರ್ಗಿ ಮೇಯರ್‌ ಶರಣಕುಮಾರ ಮೋದಿ ಬೇಸರ

​ಪ್ರಜಾವಾಣಿ ವಾರ್ತೆ
Published 30 ಜೂನ್ 2018, 12:31 IST
Last Updated 30 ಜೂನ್ 2018, 12:31 IST
ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ಅಖಿಲ ಕರ್ನಾಟಕ ಮಹಾಪೌರರ ಸಮಾವೇಶದಲ್ಲಿ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಡಾ.ಪಾಂಡುರಂಗ ಪಾಟೀಲ ಮಾತನಾಡಿದರು. ಮೈಸೂರು ಪಾಲಿಕೆ ಮೇಯರ್‌ ಬಿ. ಭಾಗ್ಯವತಿ, ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ, ಕಲಬುರ್ಗಿ ಪಾಲಿಕೆ ಮೇಯರ್‌ ಶರಣಕುಮಾರ ಮೋದಿ, ಮೇಯರ್‌ ಸುಧೀರ ಸರಾಫ್‌ ಇದ್ದರು
ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ಅಖಿಲ ಕರ್ನಾಟಕ ಮಹಾಪೌರರ ಸಮಾವೇಶದಲ್ಲಿ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಡಾ.ಪಾಂಡುರಂಗ ಪಾಟೀಲ ಮಾತನಾಡಿದರು. ಮೈಸೂರು ಪಾಲಿಕೆ ಮೇಯರ್‌ ಬಿ. ಭಾಗ್ಯವತಿ, ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ, ಕಲಬುರ್ಗಿ ಪಾಲಿಕೆ ಮೇಯರ್‌ ಶರಣಕುಮಾರ ಮೋದಿ, ಮೇಯರ್‌ ಸುಧೀರ ಸರಾಫ್‌ ಇದ್ದರು   

ಹುಬ್ಬಳ್ಳಿ: ಪೂಜ್ಯ ಮಹಾಪೌರರನ್ನು ಉತ್ಸವಮೂರ್ತಿಗಳನ್ನಾಗಿಸಿ ಯಾವುದೇ ಅಧಿಕಾರವಿಲ್ಲದಂತೆ ಮಾಡಲಾಗಿದೆ ಎಂದು ಕಲಬುರ್ಗಿ ಮೇಯರ್‌ ಶರಣಕುಮಾರ ಮೋದಿ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಕೇಶ್ವಾಪುರದ ಹೋಟೆಲ್‌ ‘ಅನಂತ ಎಕ್ಸಿಕ್ಯೂಟಿವ್‌’ನಲ್ಲಿ ಶನಿವಾರ ನಡೆದ ಅಖಿಲ ಕರ್ನಾಟಕ ಮಹಾಪೌರರ ಸಮಾವೇಶದಲ್ಲಿ ಅವರು ಮಾತನಾಡಿದರು.ಪೂಜ್ಯ ಮಹಾಪೌರರನ್ನು ಪವರ್‌ಫುಲ್‌ ಮಹಾಪೌರರನ್ನಾಗಿ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಮೇಯರ್‌ ಡಾ.ಪಾಂಡುರಂಗ ಪಾಟೀಲ, ಪಾಲಿಕೆಯ ಆಡಳಿತ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯುತ್ತಿದೆ. ನಗರ ಸ್ಥಳೀಯ ಸಂಸ್ಥೆಗಳು ತಮ್ಮ ಅಸ್ಥಿತ್ವವನ್ನು ಕಳೆದುಕೊಂಡಿವೆ ಎಂದರು. ಮಹಾನಗರ ಪಾಲಿಕೆಗಳು ಪ್ರತಿ ಹಂತದಲ್ಲೂ ತಮ್ಮ ಬೇಕು, ಬೇಡಗಳಿಗಾಗಿ ಸರ್ಕಾರದ ಮಟ್ಟದಲ್ಲಿ ಭಿಕ್ಷೆ ಬೇಡುವ ಸ್ಥಿತಿ ಬಂದೊದಗಿದೆ. ಸಂವಿಧಾನಬದ್ಧವಾದ ಸ್ಥಳೀಯ ಸಂಸ್ಥೆಗಳನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

ADVERTISEMENT

ನಗರದಲ್ಲಿ ಹಂದಿ ಸತ್ತರೂ ಅದನ್ನು ತೆಗೆಸಿಹಾಕಲು ಸಾಧ್ಯವಾಗಲಾರದಷ್ಟು ಅಸಹಾಯಕತೆ ಮಹಾಪೌರರದ್ದಾಗಿದೆ ಎಂದರು. ಅಧಿಕಾರ ವಿಕೇಂದ್ರೀಕರಣ ಎಂಬುದು ಗೊತ್ತಿಲ್ಲದಂತೆ ಕೇಂದ್ರೀಕರಣವಾಗತೊಡಗಿದೆ. ಜೀವಂತ ಮಹಾನಗರ ಪಾಲಿಕೆ ಕಟ್ಟಲು ಹೋರಾಟ ಅಗತ್ಯವಾಗಿದೆ ಎಂದರು. ಮಹಾನಗರ ಪಾಲಿಕೆಗಳಿಗೆ ಪೊಲೀಸ್‌ ಪೋರ್ಸ್‌ ಅಗತ್ಯವಿದೆ. ಈ ನಿಟ್ಟಿನಲ್ಲಿ ಹಲವರು ಬಾರಿ ಪ್ರಯತ್ನ ನಡೆಸಿದರೂ ಪ್ರಯೋಜನವಾಗಿಲ್ಲ ಎಂದು ಹೇಳಿದರು.

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಮೇಯರ್‌ ಸುಧೀರ ಸರಾಫ್‌, ಉಪಮೇಯರ್‌ ಮೇನಕಾ ಹುರಳಿ, ಮೈಸೂರು ಮೇಯರ್‌ ಬಿ.ಭಾಗ್ಯವತಿ, ವಿಧಾನಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ, ಮಾಜಿ ಮೇಯರ್‌ಗಳಾದ ಶಿವು ಹಿರೇಮಠ, ಅಶ್ವಿನಿ ಮಜ್ಜಗಿ, ಡಿ.ಕೆ.ಚವ್ಹಾಣ, ಪ್ರಕಾಶ ಕ್ಯಾರಕಟ್ಟಿ, ಸದಸ್ಯರಾದ ಗಣೇಶ ಟಗರಗುಂಟಿ, ರಾಜಣ್ಣ ಕೊರವಿ, ವಿಜಯಕುಮಾರ ಶೆಟ್ಟಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.