ಧಾರವಾಡ: ‘ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬ ಫಲಾನುಭವಿಗಳಿಗೂ ಲಭ್ಯವಾಗಬೇಕು. ಯುವನಿಧಿ, ಗೃಹಲಕ್ಷ್ಮಿಯ ಬಾಕಿ ಅರ್ಜಿಗಳನ್ನು ಪರಿಶೀಲಿಸಿ, ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು’ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಆರ್.ಪಾಟೀಲ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
‘ಸರ್ಕಾರದ ಯೋಜನೆಗಳನ್ನು ಅಧಿಕಾರಿ ವರ್ಗದವರು ಜನ ಸಾಮಾನ್ಯರ ಬದುಕಿಗೆ ಆಸರೆಯಾಗುವಂತೆ ಕರ್ತವ್ಯ ನಿಭಾಯಿಸಬೇಕು. ನ್ಯಾಯ ಬೆಲೆ ಅಂಗಡಿಯಲ್ಲಿ ಅನ್ನಭಾಗ್ಯ ಯೋಜನೆಯಡಿಯ ಸೌಲಭ್ಯಗಳ ಬಗ್ಗೆ ಸರ್ಕಾರದ ಮಾಹಿತಿಯ ಫಲಕಗಳನ್ನು ಅಳವಡಿಸಲು ಕ್ರಮ ವಹಿಸಬೇಕು’ ಎಂದರು.
‘ಅಂಗವಿಕಲರು ಹಾಗೂ ವೃದ್ಧರಿಗೆ ಮನೆಗೆ ಹೋಗಿ ಪಡಿತರ ವಿತರಿಸಬೇಕು. ಕೋರಿಕೆಯ ನಿಲುಗಡೆ ಇದ್ದಲ್ಲಿ, ಸಾರಿಗೆ ಬಸ್‍ಗಳನ್ನು ನಿಲ್ಲಿಸಬೇಕು. ಸಾರ್ವಜನಿಕರು ಓಡಾಡುವ ಪ್ರದೇಶಗಳಲ್ಲಿ ಬಸ್‍ಗಳ ಸಂಖ್ಯೆ ಹೆಚ್ಚಿಸಬೇಕು. ಕೆಲವು ಹಳ್ಳಿಗಳಲ್ಲಿ ಬಸ್ ಇಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಕೂಡಲೇ ಸರಿಪಡಿಸಬೇಕು’ ಎಂದು ಹೇಳಿದರು.
‘ಮಳೆ, ಗಾಳಿಯಿಂದ ವಿದ್ಯುತ್ ತಂತಿಗಳು ತುಂಡಾಗಿದ್ದಲ್ಲಿ ಅವುಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸಿ, ರೈತರಿಗೆ ತೊಂದರೆಯಾಗಂತೆ ನೋಡಿಕೊಳ್ಳಬೇಕು’ ಎಂದು ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ ಪಾಟೀಲ, ಪ್ರಾಧಿಕಾರದ ಉಪಾಧ್ಯಕ್ಷ ಮುರಗಯ್ಯಾ ವಿರಕ್ತಮಠ, ಅರವಿಂದ ಏಗನಗೌಡರ, ಅಬ್ದುಲ್ ರಸೀದ ಬೋಳಾಯಿ, ರತ್ನಾ ತೇಗೂರಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.