ADVERTISEMENT

ಸದಸ್ಯತ್ವ ಸಾಧಕರಿಗೆ ಶಾ ಸನ್ಮಾನದ ಗರಿ

ಅಭಿಯಾನಕ್ಕೆ ಚಾಲನೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಫರ್

​ಪ್ರಜಾವಾಣಿ ವಾರ್ತೆ
Published 6 ಜುಲೈ 2019, 15:50 IST
Last Updated 6 ಜುಲೈ 2019, 15:50 IST
ಕೇಂದ್ರ ಸಚಿವ ಪ್ರಹ್ಲಾದ ಜೋಶಿ (ಎಡದಿಂದ ನಾಲ್ಕನೇಯವರು) ಹಾಗೂ ಪಕ್ಷದ ಮುಖಂಡರು ತಮ್ಮ ಮೊಬೈಲ್‌ನಿಂದ ಸದಸ್ಯತ್ವ ನೋಂದಣಿ ಸಂಖ್ಯೆಗೆ ಮಿಸ್ಡ್ ಕಾಲ್ ಮಾಡುವ ಮೂಲಕ, ಅಭಿಯಾನಕ್ಕೆ ಚಾಲನೆ ನೀಡಿದರು
ಕೇಂದ್ರ ಸಚಿವ ಪ್ರಹ್ಲಾದ ಜೋಶಿ (ಎಡದಿಂದ ನಾಲ್ಕನೇಯವರು) ಹಾಗೂ ಪಕ್ಷದ ಮುಖಂಡರು ತಮ್ಮ ಮೊಬೈಲ್‌ನಿಂದ ಸದಸ್ಯತ್ವ ನೋಂದಣಿ ಸಂಖ್ಯೆಗೆ ಮಿಸ್ಡ್ ಕಾಲ್ ಮಾಡುವ ಮೂಲಕ, ಅಭಿಯಾನಕ್ಕೆ ಚಾಲನೆ ನೀಡಿದರು   

ಹುಬ್ಬಳ್ಳಿ: ‘ಬೂತ್‌ ಮಟ್ಟದಲ್ಲಿ ಬಿಜೆಪಿ ಸದಸ್ಯತ್ವವನ್ನು ಯಾರು ಹೆಚ್ಚು ಮಾಡುತ್ತಾರೊ, ಅವರನ್ನು ನನ್ನ ಸ್ವಂತ ಖರ್ಚಿನಲ್ಲಿ ದೆಹಲಿಗೆ ಕರೆದೊಯ್ದು ಪಕ್ಷದ ಅಧ್ಯಕ್ಷರಾದ ಅಮಿತ್ ಶಾ ಅವರಿಂದ ಸನ್ಮಾನ ಮಾಡಿಸುತ್ತೇನೆ’ ಎಂದು ಕೇಂದ್ರದ ಕಲ್ಲಿದ್ದಲು, ಗಣಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಕಾರ್ಯಕರ್ತರಿಗೆ ಬಂಪರ್ ಆಫರ್ ನೀಡಿದರು.

ಹುಬ್ಬಳ್ಳಿ–ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ‘ಸಂಘಟನಾ ಪರ್ವ–ಸದಸ್ಯತ್ವ ಅಭಿಯಾನ’ಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಸದಸ್ಯತ್ವದ ಜತೆಗೆ ಪ್ರತಿ ಬೂತ್‌ನಲ್ಲಿ ತಲಾ ಐದು ಸಸಿಗಳನ್ನು ನೆಟ್ಟು ಪೋಷಿಸಬೇಕು’ ಎಂದರು.

‘ಹತ್ತು ವರ್ಷದ ಹಿಂದೆ ಪೂರ್ವ ವಿಧಾನಸಭಾ ಕ್ಷೇತ್ರ ಬಿಜೆಪಿಯ ಕೈತಪ್ಪಿ ಹೋಗಿದೆ. ಅದನ್ನು ಮತ್ತೆ ನಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕು. ಅದಕ್ಕಾಗಿ, ಸದಸ್ಯತ್ವ ಅಭಿಯಾನದ ಮೂಲಕ, ಈಗಿನಿಂದಲೇಬೂತ್ ಮಟ್ಟದಲ್ಲಿ ತಯಾರಿ ಮಾಡಿಕೊಳ್ಳಬೇಕು’ ಎಂದು ಕರೆ ನೀಡಿದರು.

ADVERTISEMENT

‘ಧರ್ಮ ಮತ್ತು ಜಾತಿ ಎನ್ನದೆ ಎಲ್ಲಾ ಸ್ತರದ ಹಾಗೂ ವೃತ್ತಿಯ ಜನರನ್ನೂ ಸದಸ್ಯರನ್ನಾಗಿ ಮಾಡುವ ಮೂಲಕ, ಪಕ್ಷವನ್ನು ತಳಮಟ್ಟದಿಂದ ಸಂಘಟಿಸಬೇಕು. ಇದರಿಂದ ಜಾಗತಿಕವಾಗಿ ಪಕ್ಷದ ಪ್ರಭಾವ ಹೆಚ್ಚಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತಷ್ಟು ಬಲ ಬರಲಿದೆ’ ಎಂದು ಹೇಳಿದರು.

ರೈತರ ಆದಾಯ ದುಪ್ಪಟ್ಟ:

‘2022ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾಗಲಿದೆ. ಅಷ್ಟೊತ್ತಿಗೆ ದೇಶದ ಬೆನ್ನೆಲುಬಾದ ರೈತರ ಆದಾಯ ದುಪ್ಪಟ್ಟುಗೊಳಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಜತೆಗೆ ನೀರು, ಮನೆ, ಗ್ಯಾಸ್, ಶೌಚಾಲಯದಂತಹ ಮೂಲಸೌಕರ್ಯ ಕೊರತೆ ತಲೆದೋರದಂತೆ ಯೋಜನೆ ರೂಪಿಸಿದೆ’ ಎಂದು ಜೋಶಿ ತಿಳಿಸಿದರು.

‘ನೀರಿನ ಕೊರತೆ ಹೆಚ್ಚಾಗಿರುವ ದೇಶದ 250 ಜಿಲ್ಲೆಗಳನ್ನು ಗುರುತಿಸಿ, ಅಲ್ಲಿಯ ಸ್ಥಿತಿ ಅಧ್ಯಯನ ಮಾಡಲು ಪ್ರತಿ ಜಿಲ್ಲೆಗೆ ಐಎಎಸ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಅವರು ಆ ಜಿಲ್ಲೆಯಲ್ಲಿ ಮೂರು ದಿನ ಇದ್ದು, ವಸ್ತುಸ್ಥಿತಿ ಬಗ್ಗೆ ಅಧ್ಯಯನ ನಡೆಸಿ ವರದಿ ಕೊಡುವಂತೆ ಮೋದಿ ಸೂಚಿಸಿದ್ದಾರೆ’ ಎಂದು ವಿವರಿಸಿದರು.

‘80ರ ದಶಕದಲ್ಲಿ ದೇಶದ ಬಜೆಟ್ ಗಾತ್ರ ₹10 ಲಕ್ಷ ಕೋಟಿ ಇತ್ತು. 2000ನೇ ಇಸವಿಗೆ ₹20 ಲಕ್ಷ ಕೋಟಿ ತಲುಪಿದ್ದ ಬಜೆಟ್, 2019ರಲ್ಲಿ ₹27 ಲಕ್ಷ ಕೋಟಿ ಮುಟ್ಟಿದೆ. ಆ ಮೂಲಕ, ಜಗತ್ತಿನ 6ನೇ ಆರ್ಥಿಕ ಶಕ್ತಿಯಾಗಿ ಭಾರತ ಹೊರ ಹೊಮ್ಮಿದೆ’ ಎಂದು ಬಣ್ಣಿಸಿದರು.

ಧಾರವಾಡ ಜಿಲ್ಲಾ ಬಿಜೆಪಿ ವಿಭಾಗೀಯ ಸಹ ಪ್ರಭಾರಿ ಮಹೇಶ ಟೆಂಗಿನಕಾಯಿ ಮಾತನಾಡಿ, ‘ಮಿಸ್ಡ್ ಕಾಲ್ ಪಾರ್ಟಿ ಎಂದು ಬಿಜೆಪಿಯ ಸದಸ್ಯತ್ವ ಅಭಿಯಾನವನ್ನು ಲೇವಡಿ ಮಾಡಿದ್ದವರು, ಪಕ್ಷದ ಸದಸ್ಯರ ಸಂಖ್ಯೆ ಕಂಡು ದಿಗ್ಬ್ರಾಂತರಾಗಿದ್ದಾರೆ. ವಿಶ್ವದಲ್ಲೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷ ನಮ್ಮದಾಗಿದೆ’ ಎಂದರು.

‘ಪೂರ್ವ ಕ್ಷೇತ್ರದ 210 ಬೂತ್‌ಗಳ ಪೈಕಿ, ಹಿಂದಿನ ಚುನಾವಣೆಗಳಲ್ಲಿ ಎಲ್ಲೆಲ್ಲೆ ಕಡಿಮೆ ಮತಗಳನ್ನು ಪಡೆದಿದ್ದೇವೊ ಅಲ್ಲಿ ಹೆಚ್ಚು ಸದಸ್ಯರನ್ನು ನೋಂದಣಿ ಮಾಡಿಸಬೇಕು. ಆ ಮೂಲಕ, ಎಲ್ಲಾ ಕಡೆಯೂ ಪಕ್ಷದ ಬೇರುಗಳನ್ನು ಗಟ್ಟಿಗೊಳಿಸಬೇಕು’ ಎಂದು ಹೇಳಿದರು.

ಬಿಜೆಪಿ ಮಹಾನಗರ ಘಟಕದ ಅಧ್ಯಕ್ಷ ನಾಗೇಶ ಕಲಬುರ್ಗಿ, ಬಿಜೆಪಿ ಪೂರ್ವ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಶಿವು ಮೆಣಸಿನಕಾಯಿ, ಪ್ರಧಾನ ಕಾರ್ಯದರ್ಶಿ ದೀಪಕ್ ಮೆಹರವಾಡೆ, ಮುಖಂಡರಾದ ವೀರಭದ್ರಪ್ಪ ಹಾಲಹರವಿ, ಅಶೋಕ ಕಾಟವೆ, ಮೋಹನ ಲಿಂಬಿಕಾಯಿ, ಲಿಂಗರಾಜ ಪಾಟೀಲ, ರಂಗಾ ಬದ್ಧಿ, ದತ್ತಮೂರ್ತಿ ಕುಲಕರ್ಣಿ, ಸುಧೀರ ಸರಾಫ, ಡಿ.ಕೆ. ಚವ್ಹಾಣ, ಜಗದೀಶ ಹಾಗೂ ಮಂಜುನಾಥ ಕಾಟ್ಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.