ADVERTISEMENT

ಹಾಲಿನ ದರ ಹೆಚ್ಚಳ ಅನಿವಾರ್ಯ; ಶೆಟ್ಟರ್‌

​ಪ್ರಜಾವಾಣಿ ವಾರ್ತೆ
Published 22 ಜುಲೈ 2023, 15:47 IST
Last Updated 22 ಜುಲೈ 2023, 15:47 IST
ಜಗದೀಶ ಶೆಟ್ಟರ್‌
ಜಗದೀಶ ಶೆಟ್ಟರ್‌   

ಹುಬ್ಬಳ್ಳಿ:  ‘ನಂದಿನಿ ಹಾಲಿನ ದರ ಹೆಚ್ಚಿಸಬೇಕು ಎಂಬ ಬಗ್ಗೆ ಹಲವು ದಿನಗಳಿಂದ ಚರ್ಚೆ ಆಗುತ್ತಿತ್ತು. ಪೆಟ್ರೋಲ್, ಡೀಸೆಲ್‌ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಆಗಿರುವ ಸಂದರ್ಭದಲ್ಲಿ ಹಾಲಿನ ದರ ಹೆಚ್ಚಳ ಅನಿವಾರ್ಯವಾಗಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಜಗದೀಶ ಶೆಟ್ಟರ್‌ ಹೇಳಿದರು.

ಶನಿವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಾಲಿನ ದರ ಹೆಚ್ಚಳಕ್ಕೆ ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದಾರೆ. ಅದು ಇನ್ನೂ ಜಾರಿಯಾಗಿಲ್ಲ. ದರ ಹೆಚ್ಚಳದಿಂದ ಹಾಲು ಪೂರೈಸುವ ರೈತರಿಗೂ ಅನುಕೂಲ ಆಗುತ್ತದೆ’ ಎಂದರು.

‘ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಖಂಡನೀಯ. ಅಲ್ಲಿನ ಮುಖ್ಯಮಂತ್ರಿ ಬಿರೆನ್‌ ಸಿಂಗ್‌ ಅವರ ವೈಫಲ್ಯ ಇದಕ್ಕೆ ಕಾರಣ. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಪ್ರಾಥಮಿಕ ಹಂತದಲ್ಲಿಯೇ  ಇದನ್ನು ಸರಿಪಡಿಸದೆ ಇದ್ದುರಿಂದ ಹಿಂಸಾಚಾರ ಉಲ್ಬಣಗೊಂಡಿದೆ. ಸಂಘರ್ಷ ಹೆಚ್ಚುತ್ತಿದೆ ಎಂದು ಹೇಳಿದರು.

ADVERTISEMENT

ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತಂದು ಶಾಂತಿ ಸ್ಥಾಪನೆ ಮಾಡಬೇಕು. ಮಹಿಳೆಯರ ಮೇಲಿನ ಅತ್ಯಾಚಾರ  ಪೈಶಾಚಿಕ ಕೃತ್ಯ. ಕೇಂದ್ರ ಸರ್ಕಾರ ಕೇವಲ ಹೇಳಿಕೆ ನೀಡದೆ ಪರಿಸ್ಥಿತಿ ನಿಯಂತ್ರಿಸಬೇಕು’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಉತ್ತಮವಾಗಿ ಸರ್ಕಾರ ನಡೆಯುತ್ತಿದೆ. ಪಕ್ಷದಲ್ಲಿ ಯಾರು ಅಸಮಾಧಾನಗೊಂಡಿದ್ದಾರೆ ಎಂಬುದು ಗೊತ್ತಿಲ್ಲ. ಒಂದು ವೇಳೆ ಅಸಮಾಧಾನ ಇದ್ದರೆ ಅದನ್ನು ವರಿಷ್ಠರು ನಿವಾರಣೆ ಮಾಡಲಿದ್ದಾರೆ’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಬಿಜೆಪಿ ಕೆಲವೇ ವ್ಯಕ್ತಿಗಳ ಹಿಡಿತದಲ್ಲಿದ್ದು, ಅದರಿಂದ ಹೊರಬರುತ್ತಿಲ್ಲ. ನಾಯಕತ್ವ ಇಲ್ಲದಂತಾಗಿದೆ.  ಪ್ರತಿಪಕ್ಷದ ನಾಯಕನಿಲ್ಲದೆ ಅಧಿವೇಶನ ನಡೆಯಿತು. ಬಿಜೆಪಿಗೆ ಇಂತಹ ಶೋಚನೀಯ ಸ್ಥಿತಿ ಹಿಂದೆಂದೂ ಬಂದಿರಲಿಲ್ಲ’ ಎಂದು ಹೇಳಿದರು.

‘ದಿನದಿಂದ ದಿನಕ್ಕೆ ಬಿಜೆಪಿ ಕುಸಿಯುತ್ತಿದ್ದು, ಕಾಂಗ್ರೆಸ್ ಬಲಿಷ್ಠವಾಗುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಒಂಬತ್ತು ವರ್ಷಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಏಕೆ ಜಾರಿಗೆ ತರಲಿಲ್ಲ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಾಗ ತರಾತುರಿಯಲ್ಲಿ ಜಾರಿಗೆ ತಂದರೆ ಸಮಸ್ಯೆಗಳು ಉಂಟಾಗುತ್ತವೆ. ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ, ಚರ್ಚೆ ನಡೆಸಿ ಕಾನೂನು ಜಾರಿಗೆ ತರಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.