
ಧಾರವಾಡ: ಸಾಧನಕೇರಿಯ ಪ್ರೌಢಶಾಲೆಯ ವಿಜ್ಞಾನ ಮತ್ತು ಗಣಿತ ಶಿಕ್ಷಕರಿಗೆ ತರಬೇತಿ ನೀಡಲು ‘ಮೈಂಡ್ ವೇವ್ ಎಜು ಹಬ್’ ಕ್ಯಾಂಪಸ್ ನಿರ್ಮಿಸಲಾಗಿದ್ದು, ಮಾರ್ಚ್ 1 ರಂದು ಉದ್ಘಾಟನೆ ನಡೆಯಲಿದೆ ಎಂದು ತರಬೇತಿ ಕೇಂದ್ರದ ಸಂಚಾಲಕ ಎಸ್.ಎಂ.ಶಿವಪ್ರಸಾದ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಇಸ್ರೊ ಮಾಜಿ ಅಧ್ಯಕ್ಷ ಕಿರಣಕುಮಾರ್ ಉದ್ಘಾಟನೆ ನೇರವೇರಿಸುವರು. ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ, ಶೈಕ್ಷಣಿಕ ಚಿಂತಕ ಗುರುರಾಜ ಕರ್ಜಗಿ ಪಾಲ್ಗೊಳ್ಳುವರು’ ಎಂದರು.
‘ಶಿಕ್ಷಕರಿಗೆ ಪರಿಣಿತ ಬೋಧನಾ ಕೌಶಲಗಳ ತರಬೇತಿ ನೀಡಿ ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣ ನೀಡುವುದು ಸಂಸ್ಥೆಯ ಉದ್ದೇಶವಾಗಿದೆ. ಸಂಸ್ಥೆಯು ಸುಸಜ್ಜಿತ ಪ್ರಯೋಗಾಲಯ, ಗ್ರಂಥಾಲಯ ಮತ್ತು ವಿಜ್ಞಾನಿ ಪ್ರೊ.ಸಿ.ಎನ್.ರಾವ್ ಅವರಿಗೆ ಸಮರ್ಪಿತವಾದ ಹಾಲ್ ಆಫ್ ಸೈನ್ಸ ಸೇರಿದಂತೆ ಅನೇಕ ಸೌಲಭ್ಯಗಳನ್ನು ಹೊಂದಿದೆ’ ಎಂದರು.
‘ಉದ್ಯೋಗಾಕಾಂಕ್ಷಿ ಶಿಕ್ಷಕರು ಹಾಗೂ ಶಿಕ್ಷಕರಿಗೆ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಮೂರು ತಿಂಗಳು ತರಬೇತಿ ನೀಡಲಾಗುವುದು. ಮಾರ್ಚ್ 7 ರಿಂದ ತರಬೇತಿ ಆರಂಭವಾಗಲಿದೆ’ ಎಂದರು.
ಮಹೇಶ ಮಾಸಾಳ, ಸುಭಾಸ ಪಾಟೀಲ, ಉದಯಶಂಕರ ಸುದ್ದಿಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.