ADVERTISEMENT

ಪ್ರಕೋಷ್ಠಗಳು ಕ್ರಿಯಾಶೀಲವಾಗಲಿ: ಸಚಿವ ಪ್ರಲ್ಹಾದ ಜೋಶಿ

ಹುಧಾ ಮಹಾನಗರ-ಗ್ರಾಮೀಣ ಪ್ರಕೋಷ್ಠಗಳ ಸಮಾವೇಶ

​ಪ್ರಜಾವಾಣಿ ವಾರ್ತೆ
Published 27 ಮೇ 2022, 9:39 IST
Last Updated 27 ಮೇ 2022, 9:39 IST
ಹುಧಾ ಮಹಾನಗರ-ಗ್ರಾಮೀಣ ಪ್ರಕೋಷ್ಠಗಳ ಸಮಾವೇಶ
ಹುಧಾ ಮಹಾನಗರ-ಗ್ರಾಮೀಣ ಪ್ರಕೋಷ್ಠಗಳ ಸಮಾವೇಶ   

ಹುಬ್ಬಳ್ಳಿ: 'ಕೇಂದ್ರ ಸರ್ಕಾರದ ಅಭಿವೃದ್ಧಿಪರ ಯೋಜನೆಗಳನ್ನು ಪ್ರಕೋಷ್ಠಗಳ ಮೂಲಕ ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಪ್ರಕೋಷ್ಠಗಳ ಸಂಚಾಲಕರು, ಸಹಸಂಚಾಲಕರು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು' ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲೆ ಹಾಗೂ ಧಾರವಾಡ ಗ್ರಾಮಾಂತರ ಜಿಲ್ಲೆಯ ಪ್ರಕೋಷ್ಠಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

'ಜಿಲ್ಲಾ ಘಟಕದ ಅಧ್ಯಕ್ಷರು ಯೋಜನೆಗಳ ಪಟ್ಟಿ ಮಾಡಿ, ಸಂಬಂಧಿಸಿದ ಪ್ರಕೋಷ್ಠಗಳ ಸಂಚಾಲಕರಿಗೆ ನೀಡಬೇಕು. ಪ್ರತಿಯೊಂದು ಯೋಜನೆಗಳ ಸಂಪೂರ್ಣ ಮಾಹಿತಿ ಅರಿತು, ಜನರಿಗೆ ತಲುಪಿಸುವಂತಾಗಬೇಕು. ಆ ಮೂಲಕ 2024ರಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆಡಳಿತಕ್ಕೆ ತರುವಲ್ಲಿ ಮುಂದಾಗಬೇಕು' ಎಂದರು.

ADVERTISEMENT

'ಪ್ರಕೋಷ್ಠ ಸಮಾವೇಶ ಮಾಡುವುದರಿಂದ ಕಾರ್ಯಕರ್ತರ ಕೆಲವು ಭಾವನೆಗಳು ಅರ್ಥವಾಗುತ್ತವೆ. ಪರಿಶ್ರಮ ಪಡದೆ ಯಾರೂ ನಾಯಕರಾಗುವುದಿಲ್ಲ. ಕಾರ್ಯಕರ್ತರ ಶ್ರಮ, ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿರುವುದನ್ನು ಪಕ್ಷ ಮುಖಂಡರು ಗಮನಿಸುತ್ತ ಇರುತ್ತಾರೆ. ಸಂದರ್ಭ ಬಂದಾಗ ಅವರಿಗೆ ಸೂಕ್ತ ಗೌರವ, ಸ್ಥಾನಮಾನ ಸಿಗಲಿದೆ' ಎಂದರು.

'ಬಡವರಿಗೆ ಸಮರ್ಪಿತ ಸರ್ಕಾರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪ್ರತಿ 15 ದಿನಕ್ಕೊಮ್ಮೆ ಹೊಸ ಯೋಜನೆಯನ್ನು ಘೋಷಿಸಿ, ಪ್ರತಿಯೊಂದು‌ ವರ್ಗಕ್ಕೂ‌ ಪ್ರತ್ಯೇಕ ಯೋಜನೆ ನೀಡುತ್ತಿದ್ದಾರೆ. ಒಂದು ಕೆಜಿಗೆ ₹3,000 ಇರುವ ಯೂರಿಯಾ ಗೊಬ್ಬರವನ್ನು ಸಬ್ಸಿಡಿಯಲ್ಲಿ ₹270ಕ್ಕೆ ನೀಡುತ್ತಿದ್ದೇವೆ. ಪ್ರಸ್ತುತ ವರ್ಷ ರಸಗೊಬ್ಬರಕ್ಕೆ ಕೇಂದ್ರ ಸರ್ಕಾರ ₹2.50 ಲಕ್ಷ ಕೋಟಿ ಅನುದಾನ ನೀಡಿದೆ' ಎಂದು ಹೇಳಿದರು.

ಶಾಸಕ ಜಗದೀಶ ಶೆಟ್ಟರ್, 'ರಾಜ್ಯದಲ್ಲಿ ₹60 ಸಾವಿರಕ್ಕೂ ಹೆಚ್ಚು ಪ್ರಕೋಷ್ಠಗಳ ಸದಸ್ಯರು ಇದ್ದಾರೆ. ಎಲ್ಲ ಕ್ಷೇತ್ರ, ವೃತ್ತಿಗಳ ಒಟ್ಟು 24 ಪ್ರಕೋಷ್ಠಗಳಿದ್ದು, ಅಸಂಘಟಿತ ಕಾರ್ಮಿಕ ವರ್ಗಕ್ಕೂ ಅವಕಾಶ ನೀಡಲಾಗಿದೆ. ಚುನಾವಣೆ ಬಂದಾಗ ಪ್ರಕೋಷ್ಠಗಳ ಮಾರ್ಗದರ್ಶನ ಪಡೆದು ಮುನ್ನಡೆದರೆ ಗೆಲುವು ನಿಶ್ಚಿತ' ಎಂದರು.

'ಪ್ರಧಾನಿ ಮೋದಿ ಅವರ ಯೋಜನೆ ಮತ್ತು ಪಕ್ಷ ಸಂಘಟನೆ ಮಾಹಿತಿಯನ್ನು ಪ್ರಕೋಷ್ಠಗಳ ಮೂಲಕ ತಿಳಿಸುವ ಪ್ರಯತ್ನ ಮಾಡಬೇಕು' ಎಂದು ಹೇಳಿದರು.

'ಕಾಂಗ್ರೆಸ್ ಆಡಳಿತವಿದ್ದಾಗಲೂ ದಿನಸಿ ವಸ್ತುಗಳ ಬೆಲೆ ಮತ್ತು ತೈಲ ಬೆಲೆ ಏರಿಕೆ ಆಗಿವೆ. ಪ್ರತಿ ಪಕ್ಷ ಪ್ರಬುದ್ಧವಾಗಿದ್ದರೆ ತೈಲ‌ ಬೆಲೆ ಇಳಿಕೆ ಮಾಡಿದಾಗ ಸ್ವಾಗತ ಮಾಡಬೇಕಿತ್ತು. ಅದರ ಬದಲು ಟೀಕೆ ಮಾಡುತ್ತಿವೆ. ಅದರಲ್ಲೂ, ಕಾಂಗ್ರೆಸ್'ಗೆ ಟೀಕೆ ಮಾಡುವುದು ಮಾತ್ರ ಗೊತ್ತು' ಎಂದು ಕಿಡಿಕಾರಿದರು.

'ಸ್ವದೇಶಿ ಉತ್ಪಾದನೆಗೆ ಮಹತ್ವ ನೀಡಿದ್ದರಿಂದ ಖಾದಿ ಉತ್ಪಾದನೆ ದೇಶದಲ್ಲಿ ಶೇ 172 ಹೆಚ್ಚಳವಾಗಿದೆ. ಪಂಚರಾಜ್ಯ ಚುನಾವಣೆ ಸೇರಿದಂತೆ ಬೇರೆ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣ, ಕೇಂದ್ರ ಸರ್ಕಾರ ಜಾರಿಗೆ ತಂದೆ ಅಭಿವೃದ್ಧಿಪರ‌ ಯೋಜನೆಗಳು. ಪ್ರಕೋಷ್ಠಗಳ ಮೂಲಕ ಅನೇಕ ವರ್ಗಗಳ ಸಮಸ್ಯೆಗಳನ್ನು ನಿವಾರಿಸಲಾಗಿದೆ' ಎಂದು ಹೇಳಿದರು.

ಸಚಿವ ಶಂಕರಪಾಟೀಲ ಮುನೇನಕೊಪ್ಪ, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯ ವಿ.ಎಸ್. ಸಂಕನೂರು, ವಿಧಾನಪರಿಷತ್ ಮಾಜಿ ಸದಸ್ಯ ಬಾನುಪ್ರಕಾಶ್, ಲಿಂಗರಾಜ ಪಾಟೀಲ, ಜಯತೀರ್ಥ ಕಟ್ಟಿ, ಡಾ. ಮಹೇಶ ನಾಲ್ವಾಡ, ಬಸವರಾಜ ಕುಂದಗೋಳಮಠ, ನಾಗೇಶ ಕಲಬುರ್ಗಿ, ವೀರಭದ್ರಪ್ಪ ಹಾಲಹರವಿ, ಸಂಜಯ ಕಪಟಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.