ADVERTISEMENT

ಸಿದ್ದರಾಮಯ್ಯ ಟಗರು, ಹುಲಿ ಇದ್ದಂಗೆ, ಹೆದರುವ ಪ್ರಶ್ನೆಯೇ ಇಲ್ಲ: ಸಚಿವ ಜಮೀರ್‌

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2024, 15:41 IST
Last Updated 1 ಸೆಪ್ಟೆಂಬರ್ 2024, 15:41 IST
ಜಮೀರ್‌ ಅಹ್ಮದ್‌ ಖಾನ್‌
ಜಮೀರ್‌ ಅಹ್ಮದ್‌ ಖಾನ್‌   

ಹುಬ್ಬಳ್ಳಿ: ‘ಮುಡಾ’ ನಿವೇಶನ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರ ಏನೂ ಇಲ್ಲ. ಬಿಜೆಪಿಯವರು ರಾಜಕೀಯ ದುರುದ್ದೇಶದಿಂದ ರಾಜ್ಯಪಾಲರ ಮೂಲಕ ತನಿಖೆಗೆ ಅನುಮತಿ ಕೊಡಿಸಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಅವರು ಹೆದರುವುದಿಲ್ಲ. ನಮ್ಮ ಸಿಎಂ ಟಗರು, ಹುಲಿ ಇದ್ದಂಗೆ’ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಹಿಂದುಳಿದ ವರ್ಗದ ಪ್ರಬಲ ನಾಯಕ. ಅವರ ಮೇಲೆ ಆರೋಪ ಹೊರಿಸಿ, ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಿದ್ದುಹೋಗುತ್ತೆ ಎಂಬ ಲೆಕ್ಕಾಚಾರ ಬಿಜೆಪಿಯವರದು. ಆದರೆ, ಮುಖ್ಯಮಂತ್ರಿ ಇಂತಹ ನಿರಾಧಾರ ಆರೋಪಕ್ಕೆ ಹೆದರಿ ರಾಜೀನಾಮೆ ಕೊಡುವುದಿಲ್ಲ. ಅವರ ಜೊತೆ ಪಕ್ಷದ ಹೈಕಮಾಂಡ್‌ ಇದೆ. ಸಚಿವರು, ಶಾಸಕರು ಹಾಗೂ ರಾಜ್ಯದ ಜನರು ಇದ್ದಾರೆ’ ಎಂದರು. 

ದರ್ಶನ್ ಸ್ಥಳಾಂತರ: ನನ್ನ ಪಾತ್ರವಿಲ್ಲ–ಜಮೀರ್

ADVERTISEMENT

‘ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಕಾರಣ ಆರೋಪಿ, ನಟ ದರ್ಶನ್ ಅವರನ್ನು ಅಲ್ಲಿಗೆ ಸ್ಥಳಾಂತರಿಸಲಾಗಿದೆಯೇ’ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಮೀರ್,  ‘ನಟ ದರ್ಶನ್‌ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಿರುವುದು ಕಾರಾಗೃಹ ಇಲಾಖೆ. ನಾನಲ್ಲ. ನಾನು ಬಳ್ಳಾರಿ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವ. ಕಾರಾಗೃಹ ಇಲಾಖೆಯ ಡಿಜಿ ಅಲ್ಲ’ ಎಂದರು.

‘ದರ್ಶನ್‌ ಮೇಲೆ ಕೊಲೆ ಆರೋಪವಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅವರಿಗೆ ಸಂಬಂಧಿಸಿದ ವಿಡಿಯೊ, ಫೋಟೊಗಳು ಹೊರಬಂದ ಕಾರಣ ಅವರನ್ನು ಪೊಲೀಸ್‌ ಅಧಿಕಾರಿಗಳು ಬಳ್ಳಾರಿ ಜೈಲಿಗೆ ಶೀಫ್ಟ್‌ ಮಾಡಿದ್ದಾರೆ. ಇದಕ್ಕೆ ನಾನು ಹೇಗೆ ಕಾರಣ ಆಗುತ್ತೇನೆ? ನಾನೇಕೆ ಹೋಗಿ ಅವರನ್ನು ಭೇಟಿ ಮಾಡಬೇಕು’ ಎಂದು ಸುದ್ದಿಗಾರರನ್ನೇ ಮರು ಪ್ರಶ್ನಿಸಿದರು. 

ಪ್ರಲ್ಹಾದ ಜೋಶಿ
ಬಾಲಸುಟ್ಟ ಬೆಕ್ಕು ಸಿಎಂ ಸಿದ್ದರಾಮಯ್ಯ: ಜೋಶಿ
ಹುಬ್ಬಳ್ಳಿ: ‘ಮುಡಾ‘ ನಿವೇಶನ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗಾಬರಿಯಾಗಿ ಬಾಲಸುಟ್ಟ ಬೆಕ್ಕಿನಂತೆ ಓಡಾಡುತ್ತಿದ್ದಾರೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದರು. ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಸಿದ್ದರಾಮಯ್ಯ ಟಗರೋ ಹುಲಿನೋ ಸಿಂಹನೋ ಕುರಿನೋ ಎಂದು ನಾವು ಹೇಳಿಲ್ಲ. ನೈತಿಕ ಹೊಣೆಹೊತ್ತು ಅವರು ರಾಜೀನಾಮೆ ನೀಡಬೇಕು ಎಂದಿದ್ದೇವೆ’ ಎಂದು ‘ಸಿದ್ದರಾಮಯ್ಯ ಟಗರು’ ಎಂದು ಸಚಿವ ಜಮೀರ್‌ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದರು. ‘ಸಿದ್ದರಾಮಯ್ಯ ಅವರಿಗೆ ಏನು ಮಾಡಬೇಕೆಂದು ತೋಚುತ್ತಿಲ್ಲ. ದಿನ ಬೆಳಗಾದರೆ ರಾಜ್ಯಪಾಲರ ಭೇಟಿ ಮಾಧ್ಯಮಗಳಿಗೆ ಒಂದೊಂದು ಹೇಳಿಕೆ ನೀಡುವುದು ಮಾಡುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್‌ ಮೊರೆ ಹೋಗಿದ್ದಾರೆ ಎಂದಾದರೆ ಆದೇಶ ಬರುವವರೆಗೆ ಕಾಯಲಿ. ನ್ಯಾಯ ಸಿಗುತ್ತದೆ ಎಂದು ಹೇಳಲಿ ನೋಡೋಣ. ಅದನ್ನು ಬಿಟ್ಟು ಕೋವಿಡ್‌ ಸಂದರ್ಭದಲ್ಲಿ ನಡೆದ ಭ್ರಷ್ಟಾಚಾರ ತನಿಖೆ ನಡೆಸುತ್ತೇವೆ ಹಾಗೆ ಮಾಡುತ್ತೇವೆ ಹೀಗೆ ಮಾಡುತ್ತೇವೆ ಎಂದು ದಿಕ್ಕು ತಪ್ಪಿಸುವ ಹೇಳಿಕೆ ನೀಡುವುದು ಯಾಕೆ’ ಎಂದು ಪ್ರಶ್ನಿಸಿದರು. ‘ಭಾವನಾತ್ಮಕವಾಗಿ ಮಾತನಾಡಿ ಬ್ಲ್ಯಾಕ್‌ಮೇಲ್‌ ಮಾಡುವ ತಂತ್ರ ಹಾಗೂ ನಾಟಕಗಳನ್ನು ಅವರು ಬಂದ್‌  ಮಾಡಲಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.