ಹುಬ್ಬಳ್ಳಿ: ‘ಕಾಂಗ್ರೆಸ್ ಸರ್ಕಾರವು ಕೈಗಾರಿಕಾ ನಿವೇಶನಗಳ ದರ ಏರಿಕೆ ಮಾಡಿರುವುದಾಗಿ ಶಾಸಕ ಅರವಿಂದ ಬೆಲ್ಲದ ಅವರು ತಪ್ಪು ಮಾಹಿತಿ ನೀಡಿದ್ದಾರೆ. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲೇ ದರ ಏರಿಕೆ ಮಾಡಲಾಗಿತ್ತು’ ಎಂದು ಶಾಸಕ ಪ್ರಸಾದ ಅಬ್ಬಯ್ಯ ತಿಳಿಸಿದ್ದಾರೆ.
‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರತಿ ಎಕರೆಗೆ ₹80 ಲಕ್ಷವಿದ್ದ ದರವನ್ನು ಕಾಂಗ್ರೆಸ್ ಸರ್ಕಾರ ₹1.45 ಕೋಟಿಗೆ ಏರಿಕೆ ಮಾಡಿದೆ. ಇದರಿಂದಾಗಿ ಕೈಗಾರಿಕಾಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಶಾಸಕ ಬೆಲ್ಲದ ಆರೋಪಿಸಿದ್ದಾರೆ. ಸರ್ಕಾರಿ ದಾಖಲೆಗಳ ಪ್ರಕಾರ ಬಿಜೆಪಿ ಸರ್ಕಾರವಿದ್ದಾಗ 2022ರ ನವೆಂಬರ್ 23ರಂದೇ ಮಮ್ಮಿಗಟ್ಟಿ ಕೈಗಾರಿಕಾ ಪ್ರದೇಶದ ಎಫ್‍ಎಂಜಿಸಿ ನಿವೇಶನಕ್ಕೆ ಪ್ರತಿ ಎಕರೆಗೆ ₹1.39 ಕೋಟಿ ನಿಗದಿಪಡಿಸಲಾಗಿತ್ತು. 2023ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಕೈಗಾರಿಕಾ ನಿವೇಶದ ದರದ ಪರಿಷ್ಕರಣೆಯಾಗಲೀ, ಏರಿಕೆಯಾಗಲೀ ಮಾಡಿಲ್ಲ’ ಎಂದು ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೈಗಾರಿಕಾಭಿವೃದ್ಧಿ ನಿಟ್ಟಿನಲ್ಲಿ 6 ಸಾವಿರ ಎಕರೆಯಲ್ಲಿ ಬೆಂಗಳೂರು–ಮುಂಬೈ ಕೈಗಾರಿಕಾ ಕಾರಿಡಾರ್ ನಿರ್ಮಾಣಕ್ಕೆ ಬಜೆಟ್‍ನಲ್ಲಿ ಘೋಷಣೆ ಮಾಡಿದ್ದಾರೆ. ಈ ಪೈಕಿ 3 ಸಾವಿರ ಎಕರೆ ಭೂ ಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. 259.52 ಎಕರೆಯಲ್ಲಿ ಈಗಾಗಲೇ 139 ಎಕರೆ ಹಂಚಿಕೆ ಮಾಡಲಾಗಿದೆ. ಮಮ್ಮಿಗಟ್ಟಿ ಎರಡನೇ ಹಂತದಲ್ಲೂ ಭೂಮಿ ಹಂಚಿಕೆ ಪ್ರಗತಿಯಲ್ಲಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.