ADVERTISEMENT

13ನೇ ಒಣಮೆಣಸಿನಕಾಯಿ ಮೇಳಕ್ಕೆ ಶಾಸಕ ಪ್ರಸಾದ ಅಬ್ಬಯ್ಯ ಚಾಲನೆ

ಬೆಳೆಗಾರರಿಗೆ ತರಬೇತಿ ಕೇಂದ್ರ ಸ್ಥಾ‍ಪನೆಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 31 ಜನವರಿ 2025, 11:19 IST
Last Updated 31 ಜನವರಿ 2025, 11:19 IST
<div class="paragraphs"><p>ಹುಬ್ಬಳ್ಳಿಯ ಅಮರಗೋಳದ ಎಪಿಎಂಸಿಯಲ್ಲಿ ಹಮ್ಮಿಕೊಂಡಿರುವ ಒಣಮೆಣಸಿನಕಾಯಿ ಮೇಳದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯ ಪ್ರಧಾನ ವ್ಯವಸ್ಥಾಪಕ ಎಚ್‌.ಆರ್‌.ನಾಯ್ಕ  ಮೇಳದ ಬಗ್ಗೆ ಮಾಹಿತಿ ನೀಡಿದರು</p></div>

ಹುಬ್ಬಳ್ಳಿಯ ಅಮರಗೋಳದ ಎಪಿಎಂಸಿಯಲ್ಲಿ ಹಮ್ಮಿಕೊಂಡಿರುವ ಒಣಮೆಣಸಿನಕಾಯಿ ಮೇಳದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯ ಪ್ರಧಾನ ವ್ಯವಸ್ಥಾಪಕ ಎಚ್‌.ಆರ್‌.ನಾಯ್ಕ ಮೇಳದ ಬಗ್ಗೆ ಮಾಹಿತಿ ನೀಡಿದರು

   

ಹುಬ್ಬಳ್ಳಿ: ‘ಮೆಣಸಿನಕಾಯಿ ಬೆಳೆಗಾರರಿಗೆ ಬಿತ್ತನೆ ಬೀಜ ಆಯ್ಕೆಯಿಂದ ಒಣ ಮೆಣಸಿನಕಾಯಿ ಮಾರಾಟದವರೆಗೆ ತರಬೇತಿ ನೀಡಲು ತರಬೇತಿ ಕೇಂದ್ರದ ಅವಶ್ಯವಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು ಪ್ರಸ್ತಾವ ಸಲ್ಲಿಸಿದರೆ, ಕೇಂದ್ರ ಆರಂಭಿಸಲು ಕ್ರಮವಹಿಸಲಾಗುವುದು’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು. 

ಇಲ್ಲಿನ ಅಮರೋಳದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವಿವಿಧೋದ್ದೇಶ ವಸ್ತು ಪ್ರದರ್ಶನದ ಆವರಣದಲ್ಲಿ ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ, ತೋಟಗಾರಿಕೆ ಇಲಾಖೆ ವತಿಯಿಂದ ಜ.31ರಿಂದ ಫೆ.2ರ ವರೆಗೆ ಆಯೋಜಿಸಿರುವ 13ನೇ ಒಣಮೆಣಸಿನಕಾಯಿ ಮಾರಾಟ ಮೇಳಕ್ಕೆ ಚಾಲನೆ ನೀಡಿ, ಮಾತನಾಡಿದರು.

ADVERTISEMENT

‘ಬೆಳೆಗಾರರಿಗೆ ತರಬೇತಿ ನೀಡುವ ಕೇಂದ್ರ ಹಾಗೂ ಬೆಳೆ ಸಂಶೋಧನೆ, ಪ್ರಯೋಗಾಲಯವು ಕೇರಳದ ಕೊಚ್ಚಿಯಲ್ಲಿದೆ. ನಮ್ಮ ರಾಜ್ಯದಲ್ಲಿಲ್ಲ. ರಾಜ್ಯದ ಬೆಳೆಗಾರರಿಗೂ ಬೆಳೆಯ ಬಗ್ಗೆ ಸಂಪೂರ್ಣ ಮಾಹಿತಿಯ ಅವಶ್ಯವಿದೆ. ಈ ಬಗ್ಗೆ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿ, ಕೇಂದ್ರ ಸ್ಥಾಪನೆಗೆ ಕ್ರಮಕೈಗೊಳ್ಳಲಾಗುವುದು‘ ಎಂದರು. 

‘ಏಷ್ಯಾದ ಎರಡನೇ ಅತಿದೊಡ್ಡ ಎಪಿಎಂಸಿ ಇದಾಗಿದ್ದು, ಇಲ್ಲಿಯೇ ರೈಲ್ವೆ ಪಾಯಿಂಟ್‌ ತೆರೆಯಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿವೆ. ಇದರಿಂದ ಸರಕು ಸಾಗಟಕ್ಕೆ ಅನುಕೂಲವಾಗಲಿದೆ. ಇಲ್ಲಿನ ಎಪಿಎಂಸಿ ಇನ್ನೂ ಹೆಚ್ಚು ಬಲವರ್ಧನೆಯಾಗಲಿದೆ’ ಎಂದರು. 

‘ಮೇಳದಲ್ಲಿ 100 ಸ್ಟಾಲ್‌ಗಳನ್ನು ತೆರೆಯಲಾಗಿದ್ದು, ಧಾರವಾಡ ಜಿಲ್ಲೆ ಸೇರಿದಂತೆ ಹಾವೇರಿ, ಗದಗ, ಬಳ್ಳಾರಿ ಜಿಲ್ಲೆಯ ಬೆಳೆಗಾರರು ಭಾಗವಹಿಸಿದ್ದಾರೆ. ವಿವಿಧ ತಳಿಯ ಬ್ಯಾಡಗಿ, ಗುಂಟೂರು, ಡಬ್ಬಿ ಒಣಮೆಣಸಿನಕಾಯಿ ಮಾರಾಟವಿದ್ದು, ಕನಿಷ್ಠ ₹250ರಿಂದ ₹500ರ ತನಕ ಮಾರಾಟ ನಡೆಯುತ್ತಿದೆ. ಇದರೊಂದಿಗೆ ಒಣ ಮೆಣಸಿನಕಾಯಿ ಪುಡಿ. ಅರಿಶಿನ ಪುಡಿಯ ಮಾರಾಟವೂ ಇದೆ. ಬೆಳೆಗಾರರು ಹಾಗೂ ಗ್ರಾಹಕರನ್ನು ಒಂದೇ ವೇದಿಕೆಯಡಿಯಲ್ಲಿ ಸೇರಿಸಲಾಗುತ್ತಿದೆ. ದಲ್ಲಾಳಿಗಳಿಗೆ ಪ್ರವೇಶವಿಲ್ಲ. ಗ್ರಾಹಕರು ನೇರವಾಗಿ ಒಣಮೆಣಸಿನಕಾಯಿ ಖರೀದಿಸಬಹುದು’ ಎಂದು ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯ ಪ್ರಧಾನ ವ್ಯವಸ್ಥಾಪಕ ಎಚ್‌.ಆರ್‌.ನಾಯ್ಕ ಹೇಳಿದರು. 

‘ಕಳೆದ ವರ್ಷ ಸುಮಾರು 447 ಕ್ವಿಂಟಲ್‌ ಒಣಮೆಣಸಿನಕಾಯಿ ಮಾರಾಟ ಮಾಡುವ ಮೂಲಕ ₹ 1.37 ಕೋಟಿ ವಹಿವಾಟು ನಡೆಸಲಾಗಿತ್ತು. ಈ ಬಾರಿ ಇನ್ನೂ ಹೆಚ್ಚಿನ ವಹಿವಾಟು ನಡೆಯುವ ನಿರೀಕ್ಷೆ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.