ADVERTISEMENT

ಧಾರವಾಡ: ಮನರೇಗಾ ಯೋಜನೆ ಉಳಿಸಲು ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 6:01 IST
Last Updated 21 ಜನವರಿ 2026, 6:01 IST
ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಧಾರವಾಡ: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಉಳಿಸಿ ಎಂದು ಆಗ್ರಹಿಸಿ ಬ್ಲಾಕ್‌ ಕಾಂಗ್ರೆಸ್‌ ಗ್ರಾಮೀಣ ಘಟಕದವರು ಮಂಗಳವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡ ಪ್ರತಿಭಟನಕಾರರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬೆಳಿಗ್ಗೆಯಿಂದ ಸಂಜೆಯವರೆಗೂ ಭಜನೆ ಮಾಡಿ ಧರಣಿ ನಡೆಸಿದರು. ಕೇಂದ್ರ ಸರ್ಕಾರವು ಮನರೇಗಾ ಹೆಸರು ಬದಲಿಸಿ ‘ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ವಿಬಿ ಜಿ ರಾಮ್‍ ಜಿ) ಯೋಜನೆ ಜಾರಿಗೊಳಿಸಿರುವುದನ್ನು ರದ್ದುಗೊಳಿಸಬೇಕು’ ಎಂದು ಆಗ್ರಹಿಸಿದರು. 

‘ಮನರೇಗಾ ಯೋಜನೆ ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸಿತ್ತು. ಕೇಂದ್ರ ಸರ್ಕಾರವು ವಿಬಿ ಜಿ ರಾಮ್‍ ಜಿ ಯೋಜನೆ ಅನುಷ್ಠಾನಗೊಳಿಸಿ ಬಡವರ ಉದ್ಯೋಗವನ್ನು ಕಸಿದುಕೊಂಡು ಬಂಡವಾಳಶಾಹಿ ಮತ್ತು ಕಾಂಟ್ರಾಕ್ಟರ್‌ಗಳ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ’ ಎಂದು ಪ್ರತಿಭಟನಕಾರರು ಆರೋಪಿಸಿದರು. 

ADVERTISEMENT

‘ವಿಬಿ ಜಿರಾಮ್‍ಜಿ ಯೋಜನೆಯ ಹೆಸರಿನಲ್ಲಿ ಮನರೇಗಾ ಯೋಜನೆಯ ಮೂಲ ಸ್ವರೂಪವನ್ನೇ ಬದಲಿಸಿ ತಾಂತ್ರಿಕತೆ ಮತ್ತು ಕಂಟ್ರಾಕ್ಟರ್‌ ಆಧಾರಿತ ವ್ಯವಸ್ಥೆಯನ್ನಾಗಿ ಪರಿವರ್ತಿಸಲು ಸಂಚು ರೂಪಿಸಿದೆ. ಕೇಂದ್ರ ಸರ್ಕಾರದ ನಿರ್ಧಾರವನ್ನು ರಾಷ್ಟ್ರಪತಿ ಅವರು ತಡೆಹಿಡಿದು ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು’ ಎಂದು ಕೋರಿದರು.

‘ಯಂತ್ರೋಪಕರಣ ಬದಲಿಗೆ ಮಾನವ ಶ್ರಮಕ್ಕೆ ಮಾತ್ರ ಆದ್ಯತೆ ನೀಡಬೇಕು. ಗ್ರಾಮಸಭೆ ಮೂಲಕ ಕಾಮಗಾರಿ ಆಯ್ಕೆ ಮಾಡಿ ಬಡವರಿಗೆ ನೇರವಾಗಿ ಕೆಲಸ ನೀಡಬೇಕು. ಗುತ್ತಿಗೆದಾರರು, ಮಧ್ಯವರ್ತಿಗಳ ಹಾವಳಿಗೆ ಅವಕಾಶ ಇರಬಾರದು’ ಎಂದು ಒತ್ತಾಯಿಸಿದರು.

ಬಾಕ್ಲ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಶಿವಳ್ಳಿ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೌರಮ್ಮ ಬಿಲೋಗಿ, ಪಾಲಿಕೆ ಸದಸ್ಯ ರಾಜಶೇಖರ ಕಮತಿ, ನಿಸಾರ್ ಅಹ್ಮದ್ ನನ್ನೆಸಾಬನವರ, ಅಜಿಜ್ ದೊಡ್ಡಮನಿ, ಭೀಮ್ಮಪ್ಪ ಕಸಾಯಿ, ಬಸವರಾಜ ಜಾಧವ, ಪರಮೇಶ ಕಾಳೆ, ಚನ್ನಬಸಪ್ಪ ಮಟ್ಟಿ, ಸಂಗಮೇಶ ಪಾಲ್ಗೊಂಡಿದ್ದರು.

ಮನರೇಗಾ ಯೋಜನೆಯ ಮೂಲ ಉದ್ದೇಶವೇ ಮಾನವ ಶ್ರಮಕ್ಕೆ ಗೌರವ ನೀಡುವುದು ಮತ್ತು ಗ್ರಾಮೀಣ ಬಡವರಿಗೆ ಆರ್ಥಿಕ ಭದ್ರತೆ ಒದಗಿಸುವುದು. ಕೇಂದ್ರ ಸರ್ಕಾರವು ತಾಂತ್ರಿಕತೆಯ ಹೆಸರಿನಲ್ಲಿ ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿದೆ
ಶಿವಲೀಲಾ ಕುಲಕರ್ಣಿ ಅಧ್ಯಕ್ಷೆ ರಾಜ್ಯ ನಗರ ನೀರು ಸರಬರಾಜು–ಒಳಚರಂಡಿ ಮಂಡಳಿ
ಕೇಂದ್ರ ಸರ್ಕಾರವು ಬಡವರ ಹಕ್ಕನ್ನು ಕಸಿದುಕೊಳ್ಳುವ ನಡೆ ಅನುರಿಸುತ್ತಿದೆ. ಇದನ್ನು ಸಹಿಸಲಾಗುದು. ಕಾಯ್ದೆಯನ್ನು ಹಿಂಪಡೆಯಬೇಕು 
ಅರವಿಂದ ಏಗನಗೌಡರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.