ADVERTISEMENT

ಹುಬ್ಬಳ್ಳಿ: ಗಣಪತಿ ಮೂರ್ತಿಗಳಿಗಿಂತ ತ್ಯಾಜ್ಯವೇ ಹೆಚ್ಚು

ವಿಸರ್ಜನೆ ಜೊತೆ ಕಸವನ್ನೂ ಚೆಲ್ಲಿರುವ ಸಾರ್ವಜನಿಕರು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2020, 2:23 IST
Last Updated 6 ಸೆಪ್ಟೆಂಬರ್ 2020, 2:23 IST
ಹುಬ್ಬಳ್ಳಿಯ ಹೊಸೂರು ಬಾವಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್‌ ತ್ಯಾಜ್ಯ   –ಪ್ರಜಾವಾಣಿ ಚಿತ್ರ/ತಾಜುದ್ದೀನ್‌ ಆಜಾದ್
ಹುಬ್ಬಳ್ಳಿಯ ಹೊಸೂರು ಬಾವಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್‌ ತ್ಯಾಜ್ಯ   –ಪ್ರಜಾವಾಣಿ ಚಿತ್ರ/ತಾಜುದ್ದೀನ್‌ ಆಜಾದ್   

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಹೊಸೂರು ಬಾವಿಯಲ್ಲಿ ಇತ್ತೀಚೆಗೆ ವಿಸರ್ಜನೆ ಮಾಡಿರುವ ಗಣೇಶಮೂರ್ತಿಗಳಿಗಿಂತ ಹೆಚ್ಚಾಗಿ ಪ್ಲಾಸ್ಟಿಕ್‌ ತ್ಯಾಜ್ಯವೇ ಸೇರಿಕೊಂಡಿದೆ. ಇದರಿಂದ ಬಾವಿಯ ಸುತ್ತಮುತ್ತಲಿನ ಜನರಿಗೆ ಗಬ್ಬು ವಾಸನೆ ಬರುತ್ತಿದೆ.

ಪ್ರತಿ ವರ್ಷ ನಗರದಲ್ಲಿ ವಿಜೃಂಭಣೆಯಿಂದ ಸಾರ್ವಜನಿಕ ದೊಡ್ಡ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿತ್ತು. ಮೂರು, ಐದು, ಏಳು, ಒಂಬತ್ತು ಮತ್ತು 13ನೇ ದಿನಗಳಂದು ವಿಸರ್ಜನೆ ಮಾಡಲಾಗುತ್ತಿತ್ತು. ಕೋವಿಡ್‌ ಹರಡುವಿಕೆ ತಡಗಟ್ಟುವ ಸಲುವಾಗಿ ಈ ಬಾರಿ ಸಾಕಷ್ಟು ನಿರ್ಬಂಧ ಹಾಕಿದ್ದರಿಂದ ಎಲ್ಲಿಯೂ ಎತ್ತರದ ಗಣೇಶ ಮೂರ್ತಿಗಳನ್ನು
ಪ್ರತಿಷ್ಠಾಪಿಸಿರಲಿಲ್ಲ. ಪ್ರತಿ ವರ್ಷದಂತೆ ‌ಬಹಳಷ್ಟು ಕಡೆ ಗಣಪತಿಗಳು ಕೂಡ ಪ್ರತಿಷ್ಠಾಪನೆ ಆಗಿರಲಿಲ್ಲ. ಆದರೂ ಬಾವಿಯಲ್ಲಿ ಸಾಕಷ್ಟು ತ್ಯಾಜ್ಯ ತುಂಬಿಕೊಂಡಿದೆ.

ಗಣಪತಿಯನ್ನು ಕೂಡಿಸಲು ಬಳಸಿದ್ದ ಕಟ್ಟಿಗೆಯ ಮಣೆ, ಹೂವಿನ ಹಾರ, ಕಾಯಿಕಟ್ಟಿದ ಬಟ್ಟೆ, ಪೂಜಾ ಸಾಮಗ್ರಿಗಳು ತುಂಬಿದ ಪ್ಲಾಸ್ಟಿಕ್‌ ಚೀಲಗಳು ನೀರಿನಲ್ಲಿ ತೇಲಾಡುತ್ತಿವೆ. ಇದಕ್ಕೆ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಸರಳವಾಗಿ ನಡೆದ ಗಣೇಶೋತ್ಸವಕ್ಕೂ ಇಷ್ಟೊಂದು ಪ್ಲಾಸ್ಟಿಕ್‌ಗಳೇ ತುಂಬಿದರೆ ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ.

ADVERTISEMENT

ಬಾವಿಯ ಪಕ್ಕದಲ್ಲಿ ಸರ್ಕಾರಿ ಶಾಲೆಯಿದೆ. ಶಿಕ್ಷಕರು ನಿತ್ಯ ಗಬ್ಬುವಾಸನೆ ಜೊತೆಗೆ ಶಾಲಾ ಚಟುವಟಿಕೆಗಳನ್ನು ಮಾಡಬೇಕಾದ ಅನಿವಾರ್ಯ ಇದೆ. ಸುತ್ತಮುತ್ತಲಿನ ಅಂಗಡಿಯವರು, ಮನೆಯವರಿಗೂ ವಾಸನೆಯ ಕಾಟ ತಪ್ಪಿದ್ದಲ್ಲ ಎಂದು ಅಲ್ಲಿನ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ಲಾಸ್ಟಿಕ್ ಬಳಕೆಯ ಅಪಾಯದ ಬಗ್ಗೆ ಜಾಗೃತಿ ಮೂಡಿಸುವ ಸರ್ಕಾರೇತರ ಸಂಸ್ಥೆ ಹಸಿರು ದಳದ ಗೀತಾ ಬೆಲ್ಲದ ಮಾತನಾಡಿ, ‘ನಗರದಲ್ಲಿ ಪ್ಲಾಸ್ಟಿಕ್‌ ಬಳಕೆ ಹೆಚ್ಚಾಗುತ್ತಿದೆ. ಇದು ಪರಿಸರಕ್ಕೆ ಮಾರಕ ಎಂದು ಜನರಿಗೆ ಎಷ್ಟೇ ತಿಳಿ ಹೇಳಿದರೂ ಕೇಳುತ್ತಿಲ್ಲ. ಬಾವಿಯಲ್ಲಿ ಪ್ಲಾಸ್ಟಿಕ್‌ ಹಾಕಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ,‘ಪ್ಲಾಸ್ಟಿಕ್‌ ಬಳಕೆ ನಗರದಲ್ಲಿ ಮತ್ತೆ ಹೆಚ್ಚಾದ ಬಗ್ಗೆ ನನಗೂ ಮಾಹಿತಿಯಿದೆ. ಮುಂದಿನ ವಾರ ಕಾರ್ಯಾಚರಣೆ ನಡೆಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಬಾವಿಯಲ್ಲಿ ಗಣೇಶ
ಮೂರ್ತಿಯ ಜೊತೆಗೆ ಪ್ಲಾಸ್ಟಿಕ್‌ ಹಾಕಬಾರದಿತ್ತು. ಈ ಬಗ್ಗೆ ಜನರಿಗೂ ಅರಿವು ಅಗತ್ಯ. ಬಾವಿಯಲ್ಲಿನ ಪ್ಲಾಸ್ಟಿಕ್‌ಗಳನ್ನುಹೊರ ತೆಗೆಸಿ ಮರುಬಳಕೆಗೆ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.