ADVERTISEMENT

ಮತ್ತಷ್ಟು ಕ್ರೀಡಾಕೂಟಕ್ಕೆ ಪ್ರೇರಣೆ; ಹೆಬ್ಬಾರ

ತಾಲ್ಲೂಕು ಮೈದಾನದಲ್ಲಿ ಓಟದ ಸಂಭ್ರಮ, ಕ್ರೀಡಾಪ್ರೇಮಿಗಳ ಉತ್ಸಾಹ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2021, 15:10 IST
Last Updated 27 ಡಿಸೆಂಬರ್ 2021, 15:10 IST
ಯಲ್ಲಾಪುರದಲ್ಲಿ ಸೋಮವಾರ ನಡೆದ ರಾಜ್ಯಮಟ್ಟದ 56ನೇ ಕ್ರಾಸ್‌ ಕಂಟ್ರಿ ಚಾಂಪಿಯನ್‌ಷಿಪ್‌ ಕಾರ್ಯಕ್ರಮದಲ್ಲಿ  ರಾಷ್ಟ್ರೀಯ ಮಟ್ಟದ ಅಥ್ಲೀಟ್‌ ಹಳಿಯಾಳದ ಜೋಸ್ನಾ ಮಂಗಳವಾಡಕರ್, ಅಂತರರಾಷ್ಟ್ರೀಯ ಅಥ್ಲೀಟ್‌ ಕಮಲಾ ಸಿದ್ದಿ, ಜಿಲ್ಲಾ ಅಥ್ಲೆಟಿಕ್ಸ್ ತರಬೇತುದಾರ ಪ್ರಕಾಶ ರೇವಣಕರ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಸನ್ಮಾನಿಸಿದರು
ಯಲ್ಲಾಪುರದಲ್ಲಿ ಸೋಮವಾರ ನಡೆದ ರಾಜ್ಯಮಟ್ಟದ 56ನೇ ಕ್ರಾಸ್‌ ಕಂಟ್ರಿ ಚಾಂಪಿಯನ್‌ಷಿಪ್‌ ಕಾರ್ಯಕ್ರಮದಲ್ಲಿ  ರಾಷ್ಟ್ರೀಯ ಮಟ್ಟದ ಅಥ್ಲೀಟ್‌ ಹಳಿಯಾಳದ ಜೋಸ್ನಾ ಮಂಗಳವಾಡಕರ್, ಅಂತರರಾಷ್ಟ್ರೀಯ ಅಥ್ಲೀಟ್‌ ಕಮಲಾ ಸಿದ್ದಿ, ಜಿಲ್ಲಾ ಅಥ್ಲೆಟಿಕ್ಸ್ ತರಬೇತುದಾರ ಪ್ರಕಾಶ ರೇವಣಕರ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಸನ್ಮಾನಿಸಿದರು   

ಯಲ್ಲಾಪುರ: ನಮ್ಮ ತಾಲ್ಲೂಕಿನಲ್ಲಿ ಮೊದಲ ಬಾರಿಗೆ ರಾಜ್ಯಮಟ್ಟದ ಕ್ರೀಡಾಕೂಟವೊಂದು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಡೆದಿದ್ದು, ಭವಿಷ್ಯದಲ್ಲಿ ಮತ್ತಷ್ಟು ದೊಡ್ಡ ಸ್ಪರ್ಧೆಗಳನ್ನು ಆಯೋಜಿಸಲು ಪ್ರೇರಣೆಯಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಸೋಮವಾರ ನಡೆದ 56ನೇ ರಾಜ್ಯಮಟ್ಟದ ಕ್ರಾಸ್‌ ಕಂಟ್ರಿ ಚಾಂಪಿಯನ್‌ಷಿಪ್‌ಗೆ ಚಾಲನೆ ನೀಡಿ ಮಾತನಾಡಿದ ಅವರು ‘ಅಧಿಕಾರಿಗಳು ಮತ್ತು ಸಂಘಟಕರ ಸತತ ಪ್ರಯತ್ನದಿಂದ ಕ್ರೀಡಾಕೂಟ ಉತ್ತಮವಾಗಿ ಆಯೋಜಿಸಲಾಗಿದೆ. ಮುಂದೆಯೂ ಇದೇ ರೀತಿ ಸ್ಪರ್ಧೆಗಳನ್ನು ಆಯೋಜಿಸಬೇಕು’ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅಥ್ಲೆಟಿಕ್‌ ಕೋಚ್‌ ಪ್ರಕಾಶ ರೇವಣಕರ್ ‘ಕ್ರೀಡಾಪಟು ಇರುವಲ್ಲಿ ತರಬೇತುದಾರ, ಅಂತೆಯೇ ತರಬೇತುದಾರ ಇರುವಲ್ಲಿ ಕ್ರೀಡಾಪಟುಗಳು ಇರುವುದು ಸಹಜ. ಎಲ್ಲರೂ ಪರಸ್ಪರ ಅನ್ಯೋನ್ಯತೆಯಿಂದ ಇರಬೇಕು’ ಎಂದರು.

ADVERTISEMENT

ಅಥ್ಲೀಟ್‌ ಕಮಲಾ ಸಿದ್ದಿ ಮಾತನಾಡಿ ‘ಇಲ್ಲಿನ ಸಂಘಟಕರು ನೀಡಿದ ಸನ್ಮಾನ ನನ್ನ ಕ್ರೀಡಾ ಸಾಧನೆಯ ಉತ್ಸಾಹಕ್ಕೆ ಹಾಗೂ ಪ್ರೋತ್ಸಾಹಕ್ಕೆ ಪೂರಕವಾಗಿ ಸಂದ ಗೌರವವೆಂದು ಭಾವಿಸಿದ್ದೇನೆ’ ಎಂದು ಹರ್ಷ ವ್ಯಕ್ತಪಡಿಸಿದರು.

ಸಮಾರೋಪದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, 'ಕ್ರೀಡೆಯಿಂದ ಸಮಾಜದಲ್ಲಿ ಉತ್ತಮ ಸಂಸ್ಕೃತಿ ನಿರ್ಮಾಣಗೊಳ್ಳುತ್ತದೆ. ದೈಹಿಕ ಸಮರ್ಥತೆಯಿಂದ ಮಾನಸಿಕ ನೆಮ್ಮದಿಯೂ ಸಿಗುತ್ತದೆ. ಇದನ್ನು ಯುವಜನತೆ ಅರಿತುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕ್ರೀಡಾ ಸಂಭ್ರಮ: ಮೈದಾನದಲ್ಲಿ ಬೆಳಿಗ್ಗೆ ಆರು ಗಂಟೆಯಿಂದಲೇ ಕ್ರೀಡಾಸಂಭ್ರಮ ಕಂಡು ಬಂತು. ಮೈ ಕೊರೆಯುವ ಚಳಿ ಹಾಗೂ ಕಣ್ಣು ಹಾಯಿಸಿದಷ್ಟೂ ದೂರ ಕಾಣುತ್ತಿದ್ದ ಮಂಜಿನ ನಡುವೆ ಕ್ರೀಡಾಪಟುಗಳು ಮೈ ಚಳಿ ಬಿಟ್ಟು ಅಭ್ಯಾಸ ಮಾಡಿ ಸ್ಪರ್ಧೆಗೆ ಅಣಿಯಾದರು.

ಸ್ಪರ್ಧಿಗಳು ನಿಗದಿತ ಮಾರ್ಗದಲ್ಲಿ ಸಾಗುತ್ತಿದ್ದರೆ ಪಟ್ಟಣದ ಜನ ಅಲ್ಲಲ್ಲಿ ಚಪ್ಪಾಳೆ ಹೊಡೆದು ಹುರಿದುಂಬಿಸಿದರು. ಗುರಿ ತಲುಪಲು ತಾಲ್ಲೂಕು ಮೈದಾನಕ್ಕೆ ಬರುತ್ತಿದ್ದಂತೆ ಕ್ರೀಡಾಪಟುವಿನ ತಂಡದವರ ಹಾಗೂ ಕೋಚ್‌ಗಳ ಖುಷಿ ಇಮ್ಮಡಿಗೊಳ್ಳುತ್ತಿತ್ತು.

ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸುನಂದಾ ದಾಸ ಅಧ್ಯಕ್ಷತೆ ವಹಿಸಿದ್ದರು. ಅಂತರರಾಷ್ಟ್ರೀಯ ಕ್ರೀಡಾಪಟು ಎಚ್.ಎನ್.ಆನಂದಕುಮಾರ ಅವರನ್ನು ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ಸನ್ಮಾನಿಸಿದರು.

ವೇದಿಕೆಯಲ್ಲಿ ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ್, ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಯ ಕಾರ್ಯದರ್ಶಿ ಎ.ರಾಜವೇಲು, ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ ಅಧ್ಯಕ್ಷ ಸದಾನಂದ ನಾಯ್ಕ ಇದ್ದರು. ಪತ್ರಕರ್ತ ಕೇಬಲ್ ನಾಗೇಶ ಸ್ವಾಗತಿಸಿ, ನಿರೂಪಿಸಿದರು. ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ ಕಾರ್ಯದರ್ಶಿ ಕೆ.ಆರ್.ನಾಯ್ಕ ವಂದಿಸಿದರು.

ಸ್ಥಳೀಯ ಸ್ಪರ್ಧಿಗಳಿಗೂ ಸ್ಪರ್ಧೆ

ಸ್ಥಳೀಯ ಮಕ್ಕಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸಂಘಟಕರು ತಾಲ್ಲೂಕು ಕ್ರೀಡಾಂಗಣದಲ್ಲಿ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರತ್ಯೇಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪ್ರತಿ ವಿಭಾಗದಲ್ಲಿ ಮೊದಲ ಹತ್ತು ಸ್ಥಾನಗಳನ್ನು ಪಡೆದ ಮಕ್ಕಳಿಗೆ ಅಭಿನಂದಿಸಲಾಯಿತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.