ADVERTISEMENT

ಗೃಹಸಚಿವ ಎಂ.ಬಿ. ಪಾಟೀಲ ಟೆಂಪಲ್‌ ರನ್‌

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2019, 14:30 IST
Last Updated 5 ಫೆಬ್ರುವರಿ 2019, 14:30 IST
ಹುಬ್ಬಳ್ಳಿಯ ಮೂರುಸಾವಿರ ಮಠಕ್ಕೆ ಭೇಟಿ ನೀಡಿದ ಸಚಿವ ಎಂ.ಬಿ. ಪಾಟೀಲ ವರು ಗುರುಸಿದ್ದರಾಜಯೋಗೀಂದ್ರ ಅವರಿಗೆ ನಮಸ್ಕರಿಸಿದರು–ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ಮೂರುಸಾವಿರ ಮಠಕ್ಕೆ ಭೇಟಿ ನೀಡಿದ ಸಚಿವ ಎಂ.ಬಿ. ಪಾಟೀಲ ವರು ಗುರುಸಿದ್ದರಾಜಯೋಗೀಂದ್ರ ಅವರಿಗೆ ನಮಸ್ಕರಿಸಿದರು–ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಗೃಹಸಚಿವ ಎಂ.ಬಿ. ಪಾಟೀಲ ಅವರು ಮಂಗಳವಾರ ನಗರದ ಮೂರುಸಾವಿರಮಠ, ಪಥೇಶಾವಲಿ ದರ್ಗಾ ಹಾಗೂ ಸಿದ್ಧಾರೂಢಮಠಕ್ಕೆ ಭೇಟಿ ನೀಡಿದರು.

ಧಾರವಾಡದ ಮುರುಘಾಮಠಕ್ಕೆ ಭೇಟಿ ನೀಡಿ ನೇರವಾಗಿ ಮೂರುಸಾವಿರ ಮಠಕ್ಕೆ ಬಂದ ಸಚಿವರನ್ನು ಶ್ರೀಮಠದ ಆವರಣದಲ್ಲಿರುವ ಪ್ರೌಢಶಾಲೆಯ ಮಕ್ಕಳು ಹೂಗಳ ಎಸಳುಗಳನ್ನು ತೂರಿ ಸ್ವಾಗತಿಸಿದರು. ಮಠದ ಪೀಠಾಧಿಪತಿ ಡಾ.ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಅವರ ಪಾದಮುಟ್ಟಿ ನಮಸ್ಕರಿಸಿದ ಸಚಿವರಿಗೆ ಶ್ರೀಗಳು ಶಾಲು, ಹಾರ ಹಾಕಿ ಸನ್ಮಾನಿಸಿದರು. ಕೆಲಹೊತ್ತು ಚರ್ಚೆಯನ್ನೂ ನಡೆಸಿದರು.

ನಂತರ ಕಾರವಾರ ರಸ್ತೆಯ ಇಂಡಿಪಂಪ್‌ ಬಳಿ ಇರುವ ಫತೇಶಾವಲಿ ದರ್ಗಾಕ್ಕೆ ಭೇಟಿ ನೀಡಿದ ಸಚಿವರು ಅಲ್ಲಿ ಗಲೀಫ ಹೊದಿಸಿದರು. ಅಲ್ಲಿಂದ ನೇರವಾಗಿ ಕಾಂಗ್ರೆಸ್‌ ಕಚೇರಿಗೆ ತೆರಳಿದರು. ಪಕ್ಷದ ಮುಖಂಡರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ರಾಜ್ಯದ ಎಲ್ಲ 28 ಲೋಕಸಭಾ ಸ್ಥಾನಗಳನ್ನೂ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲ್ಲಬೇಕು. ರಾಹುಲ್‌ ಗಾಂಧಿ ಅವರನ್ನು ಪ್ರಧಾನಿ ಮಾಡಬೇಕು’ ಎಂದು ಹುರಿದುಂಬಿಸಿದರು.

ADVERTISEMENT

ಬಳಿಕ ಸಿದ್ಧಾರೂಢಮಠಕ್ಕೆ ಭೇಟಿ ನೀಡಿದ ಸಚಿವರು ಕರ್ತೃ ಗದ್ದುಗೆಗೆ ನಮಿಸಿದರು. ಸಿದ್ಧಾರೂಢಮಠ ಟ್ರಸ್ಟ್ ಕಮಿಟಿ ಸದಸ್ಯರು ನೀಡಿದ ಸನ್ಮಾನವನ್ನು ಸ್ವೀಕರಿಸಿರು.

ಮಠಕ್ಕೆ ಭೇಟಿ: ಶ್ರೀಗಳ ಅಚ್ಚರಿ

ಸ್ವತಂತ್ರ ಲಿಂಗಾಯತ ಧರ್ಮ ವಿವಾದಕ್ಕೆ ಸಂಬಂಧಿಸಿದಂತೆ ತಟಸ್ಥವಾಗಿಯೇ ಉಳಿದಿದ್ದ ಮೂರುಸಾವಿರಮಠದ ಶ್ರೀಗಳನ್ನು ಭೇಟಿ ಮಾಡಲು ತೆರಳಿದ್ದು ಸ್ವತಃ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಅವರಿಗೇ ಅಚ್ಚರಿ ತಂದಿದೆ ಎನ್ನಲಾಗಿದೆ.

ಸ್ವತಂತ್ರ ಧರ್ಮ ಚಳವಳಿಯಲ್ಲಿ ಎಂ.ಬಿ. ಪಾಟೀಲ ಅವರೇ ನಾಯಕತ್ವ ವಹಿಸಿದ್ದರು. ಇದಕ್ಕಾಗಿ ಅನೇಕ ವೀರಶೈವ ಮಠಾಧೀಶರ ವಿರೋಧವನ್ನೂ ಕಟ್ಟಿಕೊಂಡಿದ್ದರು. ಮೊದಮೊದಲು ಮೂರುಸಾವಿರಮಠದ ಶ್ರೀಗಳು ಸ್ವತಂತ್ರ ಧರ್ಮ ಹೋರಾಟಕ್ಕೆ ಪರೋಕ್ಷ ಬೆಂಬಲ ನೀಡಿದ್ದರಾದರೂ ಆ ಬಳಿಕ ತಟಸ್ಥರಾಗಿ ಉಳಿದಿದ್ದರು. ಹೀಗಾಗಿ, ಸಚಿವರು ಆ ಮಠಕ್ಕೆ ತೆರಳಿದ್ದು ಸ್ವತಃ ಶ್ರೀಗಳ ಅಚ್ಚರಿಗೆ ಕಾರಣವಾಗಿದೆ ಎಂದು ಗೊತ್ತಾಗಿದೆ. ಇದಕ್ಕಾಗಿಯೇ, ಮಠದ ಭಕ್ತರಾಗಿರುವ ಕಾಂಗ್ರೆಸ್‌ ಮುಖಂಡರನ್ನು ಈ ಬಗ್ಗೆ ಪ್ರಶ್ನಿಸಿದ ಶ್ರೀಗಳು, ‘ಸಚಿವರು ತಾವಾಗಿಯೇ ಬರುತ್ತಿದ್ದಾರೋ, ಇಲ್ಲ ನೀವೇ ಒತ್ತಡ ಹೇರಿ ಕರೆಸಿದ್ದೀರೊ’ ಎಂದು ಪ್ರಶ್ನಿಸಿದ್ದಾಗಿಯೂ ಮೂಲಗಳು ತಿಳಿಸಿವೆ.

ಪ್ರವಾಸ ಪಟ್ಟಿ ಸಿದ್ದವಾಗುವ ಸಮಯದಲ್ಲಿ ಧಾರವಾಡದ ಮುರುಘಾಮಠ ಹಾಗೂ ಹುಬ್ಬಳ್ಳಿಯ ಸಿದ್ಧಾರೂಢಮಠಕ್ಕೆ ಭೇಟಿ ಮಾಡುವುದು ನಿಶ್ಚಯವಾಗಿತ್ತು. ಪಕ್ಷದ ವೈದ್ಯಕೀಯ ಘಟಕದ ಅಧ್ಯಕ್ಷ ಡಾ. ಮಹೇಶ ನಾಲವಾಡ ಅವರ ಮನವಿ ಮೇರೆಗೆ ಮೂರುಸಾವಿರ ಮಠ ಹಾಗೂ ಫತೇಶಾವಲಿ ದರ್ಗಾಗಳನ್ನು ಸೇರಿಸಲಾಯಿತು ಎಂದು ಸಚಿವರೊಂದಿಗೆ ನಿಕಟವಾಗಿರುವ ವಿಜಯಪುರ ಮೂಲದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ಖಚಿತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.